2025ರಲ್ಲಿ ಸಂಭವಿಸಿದ ಘೋರ ದುರಂತಗಳು  
ದೇಶ

ಕಾಲ್ತುಳಿತ, ಭೀಕರ ಸ್ಫೋಟ.. ಈ ವರ್ಷ ದೇಶದಲ್ಲಿ ಸಂಭವಿಸಿದ ಐದು ಘೋರ ದುರಂತಗಳಿವು

ಪ್ರಮುಖ ಮುಖ್ಯಾಂಶಗಳು

  • ಈ ವರ್ಷ ಸಂಭವಿಸಿದ ಭೀಕರ ದುರಂತಗಳಲ್ಲಿ ಅಮಾಯಕರು ಬಲಿ
  • ಕಾಲ್ತುಳಿತ, ಸ್ಫೋಟಗಳು...
ಬೆಂಗಳೂರು: 2025ರ ಕೊನೆ ಹಂತಕ್ಕೆ ತಲುಪಿರುವ ದೇಶದ ಜನತೆ, ಹೊಸ ವರ್ಷವನ್ನು ಸ್ವಾಗತಿಸಲು ಕಾತರದಿಂದ ಕಾಯ ತೊಡಗಿದ್ದಾರೆ. ಈ ಮಧ್ಯೆ, 2025ರಲ್ಲಿ ನಡೆದ ಕೆಲವು ಘೋರ ಹಾಗೂ ಭೀಕರ ದುರಂತಗಳು ಇಂದಿಗೂ ಮರೆಯಲಾಗದ ಕಹಿ ನೆನಪಾಗಿ ಉಳಿದಿವೆ. ಅಷ್ಟಕ್ಕೂ, ರಾಷ್ಟ್ರದಲ್ಲಿ ಸಂಭವಿಸಿದ ಕಾಲ್ತುಳಿತ, ಸ್ಫೋಟ ಪ್ರಕರಣಗಳಲ್ಲಿ ಅಮಾಯಕರು ಬಲಿಯಾಗಿದ್ದು, ಅತೀವ ದುಃಖಕರ ಸಂಗತಿ. ಅಂತಹ ಘೋರ ದುರಂತಗಳಲ್ಲಿ ಈ 5 ಪ್ರಮುಖ ಘಟನೆಗಳು ಮಾತ್ರ ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

ಮಹಾಕುಂಭಮೇಳ ದುರಂತ

ಈ ವರ್ಷದ ಆರಂಭದಲ್ಲಿ ನಡೆದ 'ಮಹಾ' ದುರಂತವಿದು. ಉತ್ತರ ಪ್ರದೇಶದಲ್ಲಿ ಸಂಭವಿಸಿದ ಮಹಾಕುಂಭ ಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 30 ಭಕ್ತರು ಸಾವನ್ನಪ್ಪಿದ್ದರೆ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಆ ದಿನ 'ಮೌನಿ ಅಮಾವಾಸ್ಯೆ' ಆಗಿದ್ದರಿಂದ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಹೀಗಾಗಿ, ಕಾಲ್ತುಳಿತ ಉಂಟಾಯಿತು.

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ

ಫೆ.15ರಂದು ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಪ್ರಯಾಣಿಕರು ಸಾವನ್ನಪ್ಪಿದರೆ, 12 ಮಂದಿ ಗಂಭೀರವಾಗಿ ಗಾಯಗೊಂಡರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಇದ್ದರು ಎಂಬುದು ತೀವ್ರ ನೋವಿನ ಸಂಗತಿ.

ಅಭಿಮಾನ ಕಸಿದ ದುರಂತ

ಕ್ರಿಕೆಟ್ ಮೇಲಿನ ಹುಚ್ಚು ಪ್ರೀತಿ ಅವರ ಪ್ರಾಣವನ್ನೇ ಕಸಿದುಕೊಂಡಿದ್ದು ಈ ದುರಂತದಲ್ಲಿ. ಜೂನ್ 4ರಂದು 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್​ ಕಪ್​ ಎತ್ತಿದ ಆರ್​ಸಿಬಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮಾಡಲು ಬಂದಾಗ ಈ ಕಾಲ್ತುಳಿತ ಸಂಭವಿಸಿತು. ಕಾಲ್ತುಳಿತದಲ್ಲಿ 11 ಅಭಿಮಾನಿಗಳು ದುರಂತ ಅಂತ್ಯ ಕಂಡರೆ, 47ಕ್ಕೂ ಅಧಿಕ ಮಂದಿ ಗಾಯಗೊಂಡರು.

ಕರೂರು ಕಾಲ್ತುಳಿತ

ಸೆ.27ರಂದು, ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಲಗಂ ಪಕ್ಷದ ನಾಯಕ ಮತ್ತು ಕಾಲಿವುಡ್​ನ ಸ್ಟಾರ್​ ನಟ ದಳಪತಿ ವಿಜಯ್ ನೋಡಲು ರ್ಯಾಲಿಯಲ್ಲಿ ಮುಗಿಬಿದ್ದ ಅಭಿಮಾನಿಗಳು, ಅಲ್ಲಿ ಉಂಟಾದ ಕಾಲ್ತುಳಿತಕ್ಕೆ ಬಲಿಯಾದರು. ಈ ಘಟನೆಯಲ್ಲಿ 41 ಜನರು ಸಾವನ್ನಪ್ಪಿದರೆ, 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದು ನಿಜಕ್ಕೂ ಅತ್ಯಂತ ದುಃಖಕರ ಸಂಗತಿ.

ದೆಹಲಿ ಕೆಂಪುಕೋಟೆಯಲ್ಲಿ ಬ್ಲಾಸ್ಟ್​

ನ.10ರಂದು, ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯ ಬಳಿ ಭಾರಿ ಸ್ಫೋಟ ಸಂಭವಿಸಿತು. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಈ ಸ್ಫೋಟದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡರು. ಐ20 ಕಾರಿನಲ್ಲಿ ಉಂಟಾದ ಸ್ಫೋಟ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತು. ಈ ಕೃತ್ಯದ ಹಿಂದೆ ಉಗ್ರರ ಕೈವಾಡವಿರುವ ಶಂಕೆ ಕೂಡ ವ್ಯಕ್ತವಾಯಿತು,(ಏಜೆನ್ಸೀಸ್).