ಕಸದಲ್ಲಿ ಬಿದ್ದಿದ್ದ ಚಾಕೊಲೇಟ್ ಕಂಡು ಕೊಂಡೊಯ್ಯಲು ಮುಗಿಬಿದ್ದ ಜನ
- ಕಸದ ರಾಶಿಯಲ್ಲಿ ಟನ್‌ಗಟ್ಟಲೆ ಎಕ್ಸ್‌ಪೈರಿ ಚಾಕೊಲೇಟ್
- ವಿಷಯ ತಿಳಿಯುತ್ತಿದ್ದಂತೆ ಚಾಕೊಲೇಟ್‌ಗಳಿಗೆ ಮುಗಿಬಿದ್ದ ಜನ
- ಕವರ್, ಚೀಲಗಳಲ್ಲಿ ಚಾಕೊಲೇಟ್‌ಗಳನ್ನು ತುಂಬಿಕೊಂಡ ದಾರಿಹೋಕರು
ಉತ್ತರ ಪ್ರದೇಶ: ಕಸದ ರಾಶಿಯಲ್ಲಿ ಬಿದ್ದಿದ್ದ ಟನ್‌ಗಟ್ಟಲೆ ಚಾಕೊಲೇಟ್‌ಗಳಿಗೆ ಮುಗಿಬಿದ್ದಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವು ಅವಧಿ ಮುಗಿದ ಚಾಕೊಲೇಟ್, ಕ್ಯಾಂಡಿದ್ದು, ಅದನ್ನೇ ಮನೆಗೆ ಕೊಂಡೊಯ್ಯಲು ಜನರ ಪೈಪೋಟಿ ನಡೆಸಿದ್ದಾರೆ.
ಈ ಘಟನೆ ಕಾನ್ಪುರದ ಪಂಕಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದು, ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಆಹಾರ ಸುರಕ್ಷತಾ ಇಲಾಖೆ (FSDA) ಕಾನ್ಪುರದಲ್ಲಿ ಕಲಬೆರಕೆ ಹಾಗೂ ಅಸುರಕ್ಷಿತ ಆಹಾರ ಪದಾರ್ಥಗಳ ವಿರುದ್ಧ ತಪಾಸಣೆ ಮತ್ತು ರೇಡ್ ನಡೆಸುತ್ತಿದೆ. ಹೀಗಾಗಿ, ಸ್ಥಳೀಯ ಚಾಕೊಲೇಟ್ ಫ್ಯಾಕ್ಟರಿಯ ಮಾಲೀಕರು ತಮ್ಮಲ್ಲಿದ್ದ ಟನ್‌ಗಟ್ಟಲೆ ಅವಧಿ ಮುಗಿದ ಚಾಕೊಲೇಟ್ ಹಾಗೂ ಟಾಫಿಗಳನ್ನು ಪಂಕಿ ಕೈಗಾರಿಕಾ ಪ್ರದೇಶದ ಕಸದ ರಾಶಿಗೆ ತಂದು ಸುರಿದಿದ್ದಾರೆ ಎನ್ನಲಾಗಿದೆ.
ಆದರೆ, ಕಸದ ರಾಶಿಯಲ್ಲಿ ಚಾಕೊಲೇಟ್ ಬಾಕ್ಸ್‌ಗಳು ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಹಾದಿಹೋಕರು ಅಲ್ಲಿಗೆ ದೌಡಾಯಿಸಿದ್ದಾರೆ. ಎಕ್ಸ್‌ಪೈರಿ ಆಗೊದ್ದನ್ನು ಲೆಕ್ಕಿಸದೇ, ಕೈಗೆ ಸಿಕ್ಕಷ್ಟು ಚಾಕೊಲೇಟ್‌ಗಳನ್ನು ಕವರ್ಕೈಚೀಲಗಳಲ್ಲಿ ತುಂಬಿಕೊಂಡು ಮನೆಗೆ ಕೊಂಡೊಯ್ದಿದ್ದಾರೆ.
ಕಸದಲ್ಲಿ ಚಾಕೊಲೇಟ್‌ಗಳನ್ನು ಹುಡುಕಿದ ಜನ
ವಿಡಿಯೋದಲ್ಲಿ ಹಲವರು ಕಸದ ತಿಪ್ಪೆಯಲ್ಲಿ ಚಾಕೊಲೇಟ್‌ಗಳನ್ನು ಹುಡುಕುತ್ತಿರುವ ದೃಶ್ಯಗಳು ಕಂಡುಬಂದಿವೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆ ಆತಂಕವನ್ನೂ ಹುಟ್ಟುಹಾಕಿದೆ. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ. ಅದರಲ್ಲೂ ಕಸದಲ್ಲಿ ಬಿದ್ದಿದ್ದ ಚಾಕೊಲೇಟ್, ಟಾಫಿಗಳನ್ನು ಮಕ್ಕಳಿಗೆ ನೀಡುವುದು ಮತ್ತಷ್ಟು ಅಪಾಯ ಎಂಬ ಆತಂಕ ವ್ಯಕ್ತವಾಗಿದೆ.
ಆರೋಗ್ಯದ ಮೇಲೆ ಪರಿಣಾಮ
ಆಹಾರ ಸುರಕ್ಷತಾ ಇಲಾಖೆಯ ತಪಾಸಣೆಗಳ ಹಿನ್ನೆಲೆಯಲ್ಲಿ ಇಂತಹ ವಸ್ತುಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮುಂದಿನ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಕಸದ ರಾಶಿಯಲ್ಲಿ ಫ್ರೀಯಾಗಿ ಸಿಕ್ಕ ಚಾಕೊಲೇಟ್ ಆರೋಗ್ಯದ ಮೇಲೆ ಪರಿಣಾಮ ಎಂತಹ ಬೀರುತ್ತದೆ ಎಂಬುದನ್ನು ಜನ ಯೋಚಿಸಬೇಕಿದೆ.