Trump 
ದೇಶ

ಇಂದಿನ ತಲೆ ಕೆಟ್ಟ ಟ್ರಂಪ್, ನಾಳಿನ ತಲೆಹೋಗುವ ಇರಾನ್ ಕಂಟಕ

ನಮ್ಮ ಸತ್ಯಶೋಧನೆಯನ್ನು ಇರಾಕ್ ಮತ್ತು ಸದ್ದಾಂ ಹುಸೇನ್​ರಿಂದಲೇ ಆರಂಭಿಸುವುದು ಸೂಕ್ತ. ಪ್ರಸಕ್ತ ಇರಾನ್ ಕುರಿತ ಪ್ರಶ್ನೆಗೂ ಅರ್ಧ ಉತ್ತರ ಅದರಿಂದಲೇ ಸಿಕ್ಕಿಬಿಡುತ್ತದೆ. ಸರಿಯಾಗಿ 23 ವರ್ಷಗಳ ಹಿಂದೆ ಇರಾಕ್ ಮೇಲೆ ದಾಳಿಯೆಸಗಿ, 80ಕ್ಕೂ ಅಧಿಕ ದಿನಗಳ ಕಾರ್ಯಾಚರಣೆಯ ನಂತರ ಇರಾಕ್​ಅನ್ನು ಪೂರ್ತಿಯಾಗಿ ತನ್ನ ಸೇನಾಹಿಡಿತಕ್ಕೆ ತೆಗೆದುಕೊಂಡು, ಸರಿಸುಮಾರು ಒಂದು ದಶಕದ ಕಾಲ ಆ ದೇಶವನ್ನು ಇಂಚಿಂಚಾಗಿ ಶೋಧಿಸಿದ ಅಮೆರಿಕಾಗೆ ಅಲ್ಲಿ ಯಾವ ಸಮೂಹನಾಶಕ ಅಸ್ತ್ರಗಳೂ ಸಿಗಲಿಲ್ಲ ಎಂದು ವರದಿಗಳು ಹೇಳುತ್ತವೆ. ಅಂದರೆ ಅಮೆರಿಕಾದ ಆ ಇಡೀ ಕಾರ್ಯಾಚರಣೆ ವ್ಯರ್ಥವೇ? ಅಮಾಯಕ ಸದ್ದಾಂ ಹುಸೇನ್​ರನ್ನು ಕ್ರೂರ ಅಮೆರಿಕಾ ಅನ್ಯಾಯವಾಗಿ ಬಲಿ ತೆಗೆದುಕೊಂಡಿತೆ? ಈ ಎರಡೂ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ‘ಇಲ್ಲ’ ಎಂದು! ಹಾಗಿದ್ದರೆ ಇರಾಕ್​ನಲ್ಲಿ ಅಮೆರಿಕಾ ಮಾಡಿದ್ದೇನು?
ಶೀತಲಸಮರದ ದಿನಗಳಲ್ಲಿ ಸದ್ದಾಂರ ಇರಾಕ್ ಸೋವಿಯೆತ್ ಯೂನಿಯನ್ ಪರವಾಗಿಯೂ, ಅರಸ ಮಹಮದ್ ರೆಜಾ ಷಾ ಪಹ್ಲವಿಯವರ ಇರಾನ್ ಅಮೆರಿಕಾ ಪರವಾಗಿಯೂ ಇದ್ದವು. 1979ರ ಫೆಬ್ರವರಿಯಲ್ಲಿ ಇರಾನ್​ನಲ್ಲಿ ಇಸ್ಲಾಮಿಕ್ ಕ್ರಾಂತಿಯಾಗಿ, ಅರಸ ರೆಜಾ ಷಾ ಪದಚ್ಯುತಗೊಂಡು, ಶಿಯಾ ಧಾರ್ವಿುಕ ಮೂಲಭೂತವಾದಿಗಳ ಸರ್ಕಾರ ಸ್ಥಾಪನೆಯಾದಾಗ ಅಮೆರಿಕಾಗೆ ಭಾರಿ ಮುಖಭಂಗ. ತನ್ನ ಪರವಾಗಿನ ಒಂದು ಪ್ರಮುಖ ಸತ್ತೆ ಕುಸಿದು, ತನ್ನನ್ನು ಮಹಾ ಸೈತಾನನೆಂದು ಹೀಗಳೆಯುವ ಮೂಲಭೂತವಾದಿ ಸರ್ಕಾರವನ್ನು ಅಮೆರಿಕಾ ಕೈಕೈ ಹಿಸುಕಿಕೊಂಡು ಸಹಿಸಿಕೊಂಡಿತ್ತು. ಅಯತೊಲ್ಲಾ ಖೊಮೇನಿ ಸರ್ಕಾರ ಸೋವಿಯೆತ್ ಯೂನಿಯನ್ ಅನ್ನು ದ್ವೇಷಿಸಿದ್ದಷ್ಟೇ ಅಮೆರಿಕಾಗೆ ತುಸು ನೆಮ್ಮದಿಕಾರಕ ವಿಷಯ. ಆದಾಗ್ಯೂ 1980ರ ಸೆಪ್ಟೆಂಬರ್​ನಲ್ಲಿ ಇರಾಕ್​ನ ಸದ್ದಾಂ ಹುಸೇನ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದಾಗ ಆತನ ಮೂಲಕ ಇರಾನ್​ನ ಮೂಲಭೂತವಾದಿ ಸರ್ಕಾರವನ್ನು ಕೊನೆಗಾಣಿಸಬಹುದೆಂದು ರ್ತಸಿದ ಅಮೆರಿಕಾ ಆತನ ಪರವಾಗಿ ನಿಂತಿತು. ಸದ್ದಾಂಗೆ ಏಕಕಾಲದಲ್ಲಿ ಎರಡೂ ಮಹಾಶಕ್ತಿಗಳ ಬೆಂಬಲ! ಆದಾಗ್ಯೂ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸಿದಾಗ ಅಮೆರಿಕಾ ಸದ್ದಾಂಗೆ ರಾಸಾಯನಿಕ ಅಸ್ತ್ರಗಳನ್ನು ರಹಸ್ಯವಾಗಿ ಪೂರೈಸಿತು. ಅವುಗಳನ್ನು ಸದ್ದಾಂ ಇರಾನ್ ವಿರುದ್ಧ ಬಳಸಿದರೂ ರಣರಂಗದಲ್ಲಿ ಆತನ ಶಕ್ತಿಯೇನೂ ಹೆಚ್ಚಾಗಲಿಲ್ಲ. ಆತ ಅಣ್ವಸ್ತ್ರಗಳನ್ನು ಪಡೆಯಲು ಮಾಡಿದ ಪ್ರಯತ್ನವನ್ನು ಇಸ್ರೇಲ್ 1981ರ ಜೂನ್ 7ರಂದು ಒಸಿರಾಕ್ ರಿಯಾಕ್ಟರ್ ಮೇಲೆ ದಾಳಿಯೆಸಗಿ ನಿಷ್ಪಲಗೊಳಿಸಿತ್ತು. ಅಂತಹ ಸನ್ನಿವೇಶದಲ್ಲಿ ಸದ್ದಾಂಗೆ ಅಣು ತಂತ್ರಜ್ಞಾನವನ್ನು ಅಮೆರಿಕಾ ಪೂರೈಸಿಲ್ಲ ಎಂದು, ಕೊನೇಪಕ್ಷ ರಹಸ್ಯ ಸಹಕಾರ ನೀಡಿಲ್ಲವೆಂದು ಖಾತರಿಯಾಗಿ ಹೇಳಲಾಗದು. ಅದೇ ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗೆ ಅಮೆರಿಕಾ ತೆರೆಯ ಹಿಂದೆ ಸಹಕಾರ ನೀಡಿದ್ದನ್ನು ನಾವು ಮರೆಯಬಹುದೇ?
2001ರ ಸೆಪ್ಟೆಂಬರ್ 11ರಂದು ಅಲ್​ಖೈದಾ ಉಗ್ರರು ಅಮೆರಿಕಾ ಮೇಲೆ ದಾಳಿಯೆಸಗಿದರಷ್ಟೆ. ನಂತರ ಅಲ್​ಖೈದಾವನ್ನು ನಿರ್ನಾಮಗೊಳಿಸಲು ಅಫ್ಘಾನಿಸ್ತಾನದ ಮೇಲೆರಗಿದಾಗ ಆ ಉಗ್ರರಲ್ಲಿ ಬಹುತೇಕರು ಗಡಿ ದಾಟಿ ಇರಾನ್​ಗೆ ಓಡಿದರು. ಇರಾನ್ ಅವರಿಗೆ ತನ್ನ ನೆಲದಲ್ಲಿ ನೆಲೆ ನಿಲ್ಲಲು ಅವಕಾಶ ನೀಡಲಿಲ್ಲ. ಆದರೆ ಅವರು ಗಡಿ ದಾಟಿ ಇರಾಕ್​ಗೆ ಹೋಗಲು ಅವಕಾಶ ಮಾಡಿಕೊಟ್ಟಿತು. ಇದರರ್ಥ ಉಗ್ರ ಅಮೆರಿಕಾ-ವಿರೋಧಿ ಸದ್ದಾಂನ ಆಶ್ರಯದಲ್ಲಿ ಅತ್ಯುಗ್ರ ಅಮೆರಿಕಾ-ವಿರೋಧಿ ಅಲ್​ಖೈದಾ ಭಯೋತ್ಪಾದಕರು! ಅದೊಂದು ಘಾತಕ ಮಿಶ್ರಣ. ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳಾಗಿ ಬಳಸಿ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್​ಗಳಂತಹ ಹಿಂದಿನ ಯಾವುದೇ ಶತ್ರುವೂ ಎಸಗಲಾಗದಿದ್ದಷ್ಟು ಹಾನಿಯನ್ನು ಎಸಗಿದ ಅಲ್​ಖೈದಾ ಭಯೋತ್ಪಾದಕರಿಗೆ ಸದ್ದಾಂ ಹುಸೇನ್ ಬಳಿ ಇದ್ದ ರಾಸಾಯನಿಕ ಅಸ್ತ್ರಗಳು ಹಾಗೂ ಅಣ್ವಸ್ತ್ರ ತಂತ್ರಜ್ಞಾನ ಹಾಗೂ ಸಾಕಷ್ಟು ಸಂಸ್ಕರಿತ ಯುರೇನಿಯಂ ಸಿಕ್ಕಿಬಿಟ್ಟರೆ ಅವರ ಮಾರಕ ಶಕ್ತಿ ಎಷ್ಟು ವೃದ್ಧಿಸಬಹುದು? ಅದರಿಂದ ಅಮೆರಿಕಾಗೆ ಇನ್ನೆಷ್ಟು ಹಾನಿ ತಟ್ಟಬಹುದು?
ಇಂತಹ ಅಪಾಯವನ್ನು ತಡೆಯಲೆಂದೇ ಅಮೆರಿಕಾ ಇರಾಕ್ ಮೇಲೆ ದಾಳಿಯೆಸಗಿ ಆ ದೇಶವನ್ನು ಇಂಚಿಂಚೂ ಬಿಡದೇ ಶೋಧಿಸಿದ್ದು. ಅಮೆರಿಕನ್ನರಿಗೆ ನಾಲ್ಕೈದು ಟನ್ ತೂಕದ ಅಣ್ವಸ್ತ್ರ ಸಿಗಲಿಲ್ಲ. ಅಂತಹದನ್ನು ಅವರು ಇರಾಕ್​ನಿಂದ ಹೊರಸಾಗಿಸಿದ್ದನ್ನು ಯಾವ ಮಾಧ್ಯಮವೂ ಕಂಡು ವರದಿ ಮಾಡಲಿಲ್ಲ, ನಿಜ. ಆದರೆ ಸದ್ದಾಂಗೆ ರಾಸಾಯನಿಕ ಅಸ್ತ್ರಗಳ ಜತೆಗೆ ಮತ್ತೇನೇನನ್ನು ತಾವು ಜಗತ್ತಿನ ಕಣ್ಣಿಗೆ ಕಾಣದಂತೆ ಪೂರೈಸಿದ್ದೇವೆಂದು ಅಮೆರಿಕನ್ನರಿಗೆ ಗೊತ್ತೇ ಇತ್ತು. ಅವುಗಳನ್ನು ಜಗತ್ತಿನ ಕಣ್ಣಿಗೆ ಕಾಣದಂತೆ ಇರಾಕ್​ನಿಂದ ಹೊರಗೊಯ್ಯುವ ಅಗತ್ಯವೂ ಅಮೆರಿಕಕ್ಕಿತ್ತು. ಅದಕ್ಕಾಗಿಯೇ ಅಷ್ಟು ದೀರ್ಘ ಹಾಗೂ ವ್ಯಾಪಕ ಕಾರ್ಯಾಚರಣೆ. ಆ ಬಗ್ಗೆ ಹೊರಜಗತ್ತಿಗೆ ಎಲ್ಲ ವಿವರಗಳನ್ನೂ ಅಮೆರಿಕಾ ನೀಡುತ್ತದೆಂದು ಯಾರೂ ನಿರೀಕ್ಷಿಸಲಾಗದು. ಮಹಾ(ದುಷ್ಟ)ಶಕ್ತಿಗಳ ನಡೆ ಹಾಗೇನೂ ಇರುವುದಿಲ್ಲ.
ಈ ವಾಸ್ತವದ ಹಿನ್ನೆಲೆಯಲ್ಲಿ ಪ್ರಸಕ್ತ ಇರಾನ್ ಸಮಸ್ಯೆಯನ್ನು ವಿಶ್ಲೇಷಿಸೋಣ. ಅಣುಶಕ್ತಿಯನ್ನು ವಿದ್ಯುತ್ ಉತ್ಪಾದನೆ, ಕೈಗಾರಿಕೆ, ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ದೇಶಗಳು ಐವತ್ತಕ್ಕಿಂತಲೂ ಹೆಚ್ಚಿಗಿವೆ. ಅದಕ್ಕಾಗಿ ಯುರೇನಿಯಂ ಅನ್ನು ಶೇ. 3ರಿಂದ ಶೇ. 5ರಷ್ಟು ಸಂಸ್ಕರಿಸಿದರೆ ಸಾಕು. ತಾನೂ ಸಹ ಅಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗಾಗಷ್ಟೇ ಬಳಸುವ ಉದ್ದೇಶ ಹೊಂದಿದ್ದೇನೆ ಎಂದು ಇರಾನ್ ಹೇಳುತ್ತದೆ. ಆದರೆ ಅದು 440 ಕಿಲೋಗ್ರಾಂ ಯುರೇನಿಯಂ ಅನ್ನು ಕಳೆದ ಜೂನ್ ಹೊತ್ತಿಗೇ ಶೇ. 60 ಸಂಸ್ಕರಿಸಿದ್ದು ಏಕೆ? ಸಂಸ್ಕರಣವನ್ನು ಇನ್ನಷ್ಟು ಮುಂದುವರೆಸಿ ಶೇ. 90ಕ್ಕೇರಿಸಿದರೆ ಅಣ್ವಸ್ತ್ರ ಕೈಗೆಟುಕಿದಂತೆ! 440 ಕೆಜಿ ಸಂಸ್ಕರಿತ ಯುರೇನಿಯಂನಿಂದ ಕನಿಷ್ಠ ಹತ್ತು ಬಾಂಬ್​ಗಳನ್ನು ತಯಾರಿಸಬಹುದು!
ಸರಿ, ಇಂದು ಜಗತ್ತಿನ 9 ದೇಶಗಳು ಅಣ್ವಸ್ತ್ರಗಳನ್ನು ಹೊಂದಿವೆ. ಅವುಗಳೊಂದಿಗೆ ಇರಾನ್ ಹತ್ತನೆಯದಾದರೆ ಆಗುವ ಗಂಡಾಂತರವೇನು ಎಂದು ಕೇಳುವವರಿದ್ದಾರೆ. ಇದುವರೆಗೆ ಅಣ್ವಸ್ತ್ರಗಳನ್ನು ಮತ್ತೊಂದು ದೇಶದ ಮೇಲೆ ಪ್ರಯೋಗಿಸಿರುವುದು ಅಮೆರಿಕಾ ಮಾತ್ರ, ಎರಡನೆಯ ಮಹಾಯುದ್ಧವನ್ನು ಅಂತ್ಯಗೊಳಿಸಲು. ಅಂದಿನ ಜಾಗತಿಕ ವಾಸ್ತವಗಳು ಬೇರೆಯೇ ಇದ್ದವು. ಅದಾದ ಮೇಲೆ ಅಣ್ವಸ್ತ್ರ ರಾಷ್ಟ್ರಗಳು ಆ ಸಮೂಹನಾಶಕ ಅಸ್ತ್ರವನ್ನು ಬಳಸುವುದು ಕೇವಲ ಎದುರಾಳಿಗಳ ದುಸ್ಸಾಹಸಗಳನ್ನು ತಡೆಯಲು ಮಾತ್ರ. ‘ನಮ್ಮ ಅಣ್ವಸ್ತ್ರ ಇರುವುದು ಭಾರತದ ವಿರುದ್ಧ ಬಳಸಲು ಮಾತ್ರ’ ಎಂದು ಕೂಗುವ ಪಾಕಿಸ್ತಾನ ಸಹ ಅಣ್ವಸ್ತ್ರ ಬಳಕೆಗೆ ಮುಂದಾಗುವ ಧೈರ್ಯ ತೋರಿಲ್ಲ. ಆದರೆ ಇರಾನ್ ವಿಷಯದಲ್ಲಿ ಹೀಗೆ ಹೇಳಲಾಗದು. ಇಸ್ರೇಲ್ ಅನ್ನು ಪ್ರಪಂಚದ ನಕ್ಷೆಯಿಂದಲೇ ಅಳಿಸಿಹಾಕುವುದು ತನ್ನ ಗುರಿ ಎಂದು ಇರಾನ್ ಘಂಟಾಘೊಷವಾಗಿ ಹೇಳುತ್ತದೆ! ಅರಬ್ ದೇಶಗಳೇ ಇಸ್ರೇಲ್ ಜತೆ ಸ್ನೇಹ ಬಯಸಿ ಸಹಬಾಳ್ವೆ ನಡೆಸುತ್ತಿರುವಾಗ ಆ ಯಹೂದಿ ರಾಷ್ಟ್ರದಿಂದ ಯಾವ ಅಪಾಯವನ್ನೂ ಕಾಣದ ಇರಾನ್ ಅದನ್ನು ನಿರ್ನಾಮ ಮಾಡುತ್ತೇನೆಂದು ತೀರ್ವನಿಸಿರುವುದು ಪ್ರಶ್ನೆಗಳನ್ನೆತ್ತುತ್ತದೆ. ಇಸ್ರೇಲ್​ಗೆ ದಿನನಿತ್ಯವೂ ಕಾಟ ಕೊಡಲು ಹಮಾಸ್, ಹಿಜ್ಬೊಲ್ಲಾ ಹಾಗೂ ಹೂತಿಗಳನ್ನು ಸಾಕಿ ಛೂ ಬಿಡುತ್ತಿರುವ ಇರಾನ್ ಕೈಗೆ ಅಣ್ವಸ್ತ್ರಗಳು ಸಿಕ್ಕಿದರೆ?
ಹೀಗಾಗಿಯೇ ಇರಾನ್​ನ ಅಣ್ವಸ್ತ್ರ ಬಯಕೆಗೆ ಇಸ್ರೇಲ್ ಎರಡು ದಶಕಗಳಿಂದಲೂ ಅಡಿಗಡಿಗೆ ಕಲ್ಲು ಹಾಕುತ್ತಲೇ ಬಂದಿದೆ. ತನ್ನ ಉಳಿವಿಗೆ ಆ ನೀತಿ ಅತ್ಯಗತ್ಯ ಎನ್ನುವುದು ಇಸ್ರೇಲ್ ವಾದ. ಅದಕ್ಕೆ ಸಹಜವಾಗಿಯೇ ಅಮೆರಿಕಾದ ಬೆಂಬಲವಿದೆ. ಕಳೆದ ಜೂನ್​ನಲ್ಲಿ ಆ ಎರಡೂ ದೇಶಗಳೂ ಇರಾನ್ ಮೇಲೆ ದಾಳಿಯೆಸಗಿ ಅದರ ರಿಯಾಕ್ಟರ್​ಗಳನ್ನು ನಾಶಗೊಳಿಸಿದವು. ಆಗ ಶೇ. 60 ಸಂಸ್ಕರಿತ 440 ಕೆಜಿ ಯುರೇನಿಯಂ ಅನ್ನು ಇರಾನ್ ರಹಸ್ಯ ಸುರಂಗಗಳೊಳಗೆ ಬಚ್ಚಿಟ್ಟಿತೆಂದು ಸುದ್ದಿ. 220 ಕೆಜಿ ಇಸ್ಪಹಾನ್ ನಗರಕ್ಕೆ ಹತ್ತಿರದ ಪಿಕ್​ಏಕ್ಸ್ ಪರ್ವತದ ಕೆಳಗಿನ ಕೃತಕ ಸುರಂಗಗಳಲ್ಲಿರಬಹುದು ಎನ್ನಲಾಗುತ್ತದೆ. ಬಾಕಿ 220 ಕೆಜಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ.
ಫೆಬ್ರವರಿ ತಿಂಗಳಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಒಮಾನ್ ಮತ್ತು ಸ್ವಿಜರ್ಲೆಂಡ್​ನಲ್ಲಿ ನಡೆದ ಮಾತುಕತೆಗಳು ಮುಖ್ಯವಾಗಿ ಈ 440 ಕೆಜಿ ಯುರೇನಿಯಂ ಬಗ್ಗೆ ಇದ್ದವು. ಆ ಘಾತಕ ಸರಕನ್ನು ತಮಗೊಪ್ಪಿಸಬೇಕೆನ್ನುವುದು ಅಮೆರಿಕಾದ ಪಟ್ಟು. ಫೆಬ್ರವರಿ 26ರಂದು ಜಿನೀವಾದಲ್ಲಿ ನಡೆದ ಮಾತುಕತೆಯಲ್ಲಿ ಟ್ರಂಪ್​ರ ಪ್ರತಿನಿಧಿಗಳಾದ ಸ್ಟೀವ್ ವಿಟ್​ಕಾಫ್ ಹಾಗೂ ಜಾರೆಡ್ ಕುಶ್ನರ್ ಹೇಳಿದ್ದು ಆ ಯುರೇನಿಯಂ ಅನ್ನು ಅಮೆರಿಕಾಗೆ ಒಪ್ಪಿಸಿದರೆ ಪ್ರತಿಯಾಗಿ ಅಮೆರಿಕಾ ಇರಾನ್​ಗೆ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಯುರೇನಿಯಂ ಅನ್ನು ನಿರಂತರವಾಗಿ ಒದಗಿಸುತ್ತಲೇ ಇರುತ್ತದೆ ಎಂದು. ಈ ‘ಡೀಲ್’ ಅನ್ನು ಇರಾನಿ ವಿದೇಶಮಂತ್ರಿ ಸೈಯದ್ ಅಬ್ಬಾಸ್ ಅರಾಗ್ಚಿ ನಿರಾಕರಿಸಿದರು. ಎರಡು ದಿನಗಳ ನಂತರ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ದಾಳಿ ನಡೆಸಿದವು. ಇರಾನ್ ಪ್ರತಿದಾಳಿ ಎಸಗಿತು. ಯುದ್ಧ ಆರಂಭವಾಯಿತು.
‘ಇಸ್ರೇಲ್ ಸಹ ಅಣ್ವಸ್ತ್ರ ಹೊಂದಿದೆಯಲ್ಲ, ಅದರಿಂದ ತೊಂದರೆಯಿಲ್ಲವೇ’ ಎಂಬ ಪ್ರಶ್ನೆಯಿದೆ. ಇಸ್ರೇಲ್ ಯಶಸ್ವಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು 1969ರಲ್ಲಿ, ದಕ್ಷಿಣ ಆಫ್ರಿಕಾದಲ್ಲಿ, ಆಗಿನ ಅಲ್ಲಿನ ವರ್ಣಭೇದ ಸರ್ಕಾರದ ಸಹಕಾರದಿಂದ. ಅದಾದ ಐದು ವರ್ಷದಲ್ಲಿ ಸುತ್ತಲ ಅರಬ್ ದೇಶಗಳು ಒಟ್ಟಾಗಿ ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿಯೆಸಗಿದವು. ಅರಬ್ ದೇಶಗಳು ವಿಜಯದ ಹೊಸ್ತಿಲಿಗೆ ಬಂದ ಏಕೈಕ ಯುದ್ಧ ಅದು. ಆದರೂ ಇಸ್ರೇಲ್ ಅವುಗಳ ವಿರುದ್ಧ ಅಣ್ವಸ್ತ್ರ ಬಳಸುವುದಿರಲಿ, ಬಳಸುತ್ತೇನೆ ಎಂದೂ ಹೇಳಲಿಲ್ಲ! ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನಷ್ಟೇ ಬಳಸಿ ಅದು ಆ ಯಾಮ್ ಕಿಪ್ಪುರ್ ಯುದ್ಧವನ್ನು ಪ್ರಯಾಸದಿಂದ ಜಯಿಸಿತು. ಅಣ್ವಸ್ತ್ರಗಳ ವಿಷಯದಲ್ಲಿ ಇಸ್ರೇಲ್ ತೋರುವ ಜವಾಬ್ದಾರಿತನವನ್ನು ಇರಾನ್​ನಿಂದ ನಿರೀಕ್ಷಿಸಲಾಗದು. ಇಂದು ಸಾಂಪ್ರದಾಯಿಕ ಅಸ್ತ್ರಗಳಿಂದಲೇ ಹತ್ತಿರದ ಕೊಲ್ಲಿ ರಾಷ್ಟ್ರಗಳು ಹಾಗೂ ಇಸ್ರೇಲ್ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳನ್ನು ನೋಡಿದರೆ ಮುಂದೆ ಅದು ಅಣ್ವಸ್ತ್ರಗಳನ್ನೂ, ದೂರಗಾಮಿ ಕ್ಷಿಪಣಿಗಳನ್ನೂ ಗಳಿಸಿಕೊಂಡರೆ ಏನಾಗಬಹುದು ಎನ್ನುವುದನ್ನು ಊಹಿಸಿಕೊಳ್ಳಲಾಗದು.
ಇಂದು ತಾತ್ಕಾಲಿಕ ಅನನುಕೂಲತೆಗಳಿಂದಾಗಿ ಟ್ರಂಪ್​ರಿಗೆ ಕೆಲವರು ಶಾಪ ಹಾಕುತ್ತಿದ್ದಾರೆ. ಆದರೆ ಜಗತ್ತು ಅವರಿಗೆ ಋಣಿಯಾಗಿರುವ ದಿನ ಮುಂದೆ ಬರುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)