ದೇಶ

ರಿಯಲ್​ ಹೀರೋ!: ಇಂದು ಡಾ ಎ.ಪಿ.ಜೆ. ಅಬ್ದುಲ್​ ಕಲಾಂ ಜನ್ಮದಿನ: ಜೆನ್​ ಜೀಗಳ ಪಾಲಿಗೆ ಇವರು ಪ್ರೇರಣಾ ಶಕ್ತಿ

ಅವೂಲ್​ ಫಕೀರ್​ ಜೈನುಲಾಬ್ದೀನ್​ ಅಬ್ದುಲ್​ ಕಲಾಂ (ಎ.ಪಿ.ಜೆ. ಅಬ್ದುಲ್​ ಕಲಾಂ). ಎಲ್ಲರಲ್ಲೂ ಅಭಿವೃದ್ಧಿಯ ಹೊಸ ಕನಸುಗಳನ್ನು ಬಿತ್ತಿದವರು. ಅದರಲ್ಲೂ, ಯುವಪೀಳಿಗೆಯ ಪಾಲಿಗೆ ಅವರು ಪ್ರೇರಣೆಯ ಮಿಸೈಲ್​ ಮ್ಯಾನ್​. ಎಷ್ಟೋ ಯುವಕರು ಭಾರತ ರತ್ನ ಕಲಾಂ ಪ್ರೇರಣೆಯಿಂದಲೇ ಸಾಧನೆಯ ಹೆಗ್ಗುರುತನ್ನು ಮೂಡಿಸಿದ್ದಾರೆ. ಕಲಾಂ ಅವರ ಚಿಂತನೆಗಳು, ಆದರ್ಶಗಳು ಜೆನ್​ಜೀ ಯುವಕ/ಯುವತಿಯರ ಬಾಳಿಗೆ ಹೇಗೆ ಪ್ರಸ್ತುತ ಮತ್ತು ಪಥದರ್ಶಕವಾಗಬಲ್ಲವು ಎಂಬುದರ ಅವಲೋಕನ ಇಲ್ಲಿದೆ.

ಸ್ಪಷ್ಟವಾದ ಗುರಿ

"ಕನಸು ಎಂದರೆ ನಿದ್ದೆಯಲ್ಲಿ ಕಾಣುವುದಲ್ಲ, ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದು' ಎಂಬ ಕಲಾಂ ಅವರ ಪ್ರಸಿದ್ಧ ಮಾತು ಇಂದಿಗೂ ಪ್ರಸ್ತುತ. ದಿಢೀರ್​ ಯಶಸ್ಸು ಮತ್ತು ಸಾಮಾಜಿಕ ಮಾಧ್ಯಮಗಳ ಕಲ್ಪನಾಲೋಕದಲ್ಲಿ ತಾಂತ್ರಿಕವಾಗಿ ತೇಲಿಹೋಗುತ್ತಿರುವ ಇಂದಿನ ಯುವಜನತೆಗೆ, ಸುಲಭದ ಶಾರ್ಟ್​ಕಟ್​ಗಳಿಗಿಂತ ದೀರ್ಘಕಾಲೀನ ಸ್ಪಷ್ಟ ಗುರಿ ಮತ್ತು ಶ್ರಮದ ಅಗತ್ಯವಿದೆ ಎಂಬುದನ್ನು ಈ ಸಿದ್ಧಾಂತವು ಸದಾ ನೆನಪಿಸುತ್ತದೆ. ಅಲ್ಲದೆ, ಬಡ ಕುಟುಂಬದಿಂದ ಬಂದ ಕಲಾಂ ಅಸಾಧಾರಣ ಕನಸು ಕಂಡು, ಅದನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸಿದ್ದರಿಂದಲೇ ಸಾಧನೆಯ ಉತ್ತುಂಗಕ್ಕೆ ತಲುಪಲು ಸಾಧ್ಯವಾಯಿತು.

ಕಲಿಕೆಯ ಮೊದಲ ಹೆಜ್ಜೆ FAIL

ಸಣ್ಣಪುಟ್ಟ ಸೋಲುಗಳು ಅಥವಾ ಮಾನಸಿಕ ಒತ್ತಡ ಎದುರಾದಾಗ ಜೆನ್​ಜೀ ಯುವಕರು ಬೇಗನೆ ನಿರಾಶೆಗೆ ಒಳಗಾಗುವ ಪ್ರವೃತ್ತಿ ಕಾಣುತ್ತಿದೆ. ಕಲಾಂ ಅವರು "FAIL" ಪದವನ್ನು First Attempt in Learning (ಕಲಿಕೆಯ ಮೊದಲ ಯತ್ನ) ಎಂದು ಧನಾತ್ಮಕವಾಗಿ ವ್ಯಾಖ್ಯಾನಿಸಿದ್ದರು. ತಂತ್ರಜ್ಞಾನ ಹಾಗೂ ನವೋದ್ಯಮ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಸ್ವೀಕರಿಸಿ, ಪ್ರಯೋಗಶೀಲತೆಯಿಂದ ಮುನ್ನಡೆಯಲು ಈ ಧನಾತ್ಮಕ ದೃಷ್ಟಿಕೋನ ಅತ್ಯಂತ ಅಗತ್ಯವಾಗಿದೆ. ವೈಫಲ್ಯಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

ಏಕತೆಯ ಕಲ್ಪನೆ

ವೈವಿಧ್ಯಮಯ ಭಾರತವನ್ನು ಒಂದಾಗಿ ಕಾಣುವ ವಿಶಾಲ ಮನೋಭಾವ ಕಲಾಂ ಅವರದ್ದಾಗಿತ್ತು. ವಿಜ್ಞಾನ, ಕಲೆ, ಕುರಾನ್​, ಭಗವದ್ಗೀತೆ ಎಲ್ಲವನ್ನೂ ಗೌರವಿಸುತ್ತಿದ್ದ ಅವರ ಮುಕ್ತ ಮನಸ್ಸು ಇಂದಿನ ಯುವಸಮುದಾಯಕ್ಕೆ ಮಾದರಿ. ಸಾಮಾಜಿಕ ಜಾಲತಾಣಗಳಲ್ಲಿ ಭೇದಭಾವ ಮತ್ತು ಧ್ರುವೀಕರಣ ಹೆಚ್ಚುತ್ತಿರುವ ಈ ದಿನಗಳಲ್ಲಿ, ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆಯನ್ನು ಕಾಯ್ದುಕೊಳ್ಳಲು ಅವರ ವಿಶಾಲ ದೃಷ್ಟಿಕೋನ ಅತ್ಯಂತ ಅನಿವಾರ್ಯ.

ಆವಿಷ್ಕಾರ

ಇಂದಿನ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್​ ತಂತ್ರಜ್ಞಾನದ ಜಗತ್ತಿನಲ್ಲಿ, ನಾವು ಕೇವಲ ತಂತ್ರಜ್ಞಾನದ ಗ್ರಾಹಕರಾಗದೆ ಹೊಸದನ್ನು ಸೃಷ್ಟಿಸುವ ಆವಿಷ್ಕಾರಕರಾಗಬೇಕು ಎಂದು ಕಲಾಂ ಬಯಸಿದ್ದರು. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಸಿಕೊಂಡು, ದೇಶೀಯ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅವರ "ನಾವೀನ್ಯತೆ' (Innovation) ಕಲ್ಪನೆ ಇಂದಿಗೂ ದಾರಿದೀಪ.

ಹೊಣೆಗಾರಿಕೆಯ ನಾಯಕತ್ವ

ರಾಕೆಟ್​ ಉಡಾವಣೆ ವಿಫಲವಾದಾಗ ಅದರ ಸಂಪೂರ್ಣ ಹೊಣೆಯನ್ನು ತಾವೇ ಹೊತ್ತು, ಯಶಸ್ಸು ಸಿಕ್ಕಾಗ ಇಡೀ ತಂಡಕ್ಕೆ ಕ್ರೆಡಿಟ್​ ನೀಡಿದ ವಿಶಿಷ್ಟ ನಾಯಕತ್ವ ಕಲಾಂ ಅವರದ್ದು. ಇಂದಿನ ಕಾರ್ಪೊರೇಟ್​, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕ್ರೆಡಿಟ್​ಗಾಗಿ ಪೈಪೋಟಿ ನಡೆಸುವ ಸಂಸ್ಕೃತಿಯ ನಡುವೆ, ಜವಾಬ್ದಾರಿ ವಹಿಸಿಕೊಳ್ಳುವ ಮತ್ತು ತಂಡವನ್ನು ಗೌರವಿಸುವ ಕಲಾಂ ಅವರ ನಾಯಕತ್ವದ ಗುಣಗಳು ಯುವ ನಾಯಕರಿಗೆ ಅತ್ಯುತ್ತಮ ಮಾದರಿಯಾಗಿವೆ. ತಂಡವನ್ನು ಮುನ್ನಡೆಸಲು ಪ್ರೇರಣಾಮಂತ್ರವಾಗಿದೆ.

ಮೌಲ್ಯಾಧಾರಿತ ಶಿಕ್ಷಣ

ಕಲಾಂ ಅವರು ಸದಾ ಪ್ರತಿಪಾದಿಸುತ್ತಿದ್ದುದು ಕೇವಲ ಅಂಕ ಗಳಿಸುವ ಶಿಕ್ಷಣವನ್ನಲ್ಲ, ಬದಲಿಗೆ ಕೌಶಲ ಮತ್ತು ನೈತಿಕತೆಯನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆಯನ್ನು. ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿಗಳಿಗಿಂತ ನಿರಂತರ ಕಲಿಕೆ, ಹೊಸ ಕೌಶಲಗಳನ್ನು ಹೊಂದುವುದು ಮತ್ತು ಚಾರಿತ್ರ್ಯ ನಿರ್ಮಾಣವೇ ಯಶಸ್ಸಿಗೆ ಮೂಲ ಅಡಿಪಾಯ ಎಂಬುದನ್ನು ಅವರ ಶಿಕ್ಷಣ ಚಿಂತನೆಗಳು ಪುಷ್ಟೀಕರಿಸುತ್ತವೆ.

ಭಾರತ ನಿರ್ಮಾಣಕ್ಕೆ ಕಲಾಂ ಸೂಚಿಸಿದ 10 ಸ್ತಂಭಗಳು

  1. ನಗರ ಮತ್ತು ಗ್ರಾಮೀಣ ಎಂಬ ಭೇದ ಸೂಕ್ಷ್ಮ ಎಳೆಯಷ್ಟಿರಬೇಕು.

  2. ವಿದ್ಯುತ್​ ಮತ್ತು ಶುದ್ಧ ಜಲದ ಸಮಾನ ಹಂಚಿಕೆಯಾಗಬೇಕು.

  3. ಕೃಷಿ, ಕೈಗಾರಿಕೆ ಮತ್ತು ಸೇವಾ ವಿಭಾಗ ಸಮನ್ವಯದಿಂದ ಕೆಲಸ ಮಾಡಬೇಕು.

  4. ಸಾಮಾಜಿಕ ಅಥವಾ ಆರ್ಥಿಕ ಕಾರಣಕ್ಕಾಗಿ ಪ್ರತಿಭಾವಂತ ವ್ಯಕ್ತಿ ಶಿಕ್ಷಣ ಮತ್ತು ಮೌಲಿಕ ವ್ಯವಸ್ಥೆಯಿಂದ ವಂಚಿತನಾಗಬಾರದು.

  5. ಅತ್ಯಂತ ಪ್ರತಿಭಾನ್ವಿತ ವಿದ್ವಾಂಸರು, ವಿಜ್ಞಾನಿಗಳು ಮತ್ತು ಹೂಡಿಕೆದಾರರಿಗೆ ದೇಶವು ದಾರಿದೀಪವಾಗಬೇಕು.

  6. ಪ್ರತಿಯೊಬ್ಬರಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯ ಲಭ್ಯವಾಗಬೇಕು.

  7. ಜವಾಬ್ದಾರಿಯುತ, ಪಾರದರ್ಶಕ ಮತ್ತು ಭ್ರಷ್ಟಾಚಾರಮುಕ್ತ ಸರ್ಕಾರ.

  8. ಬಡತನದ ನಿವಾರಣೆ, ಅನಕ್ಷರತೆ ತೊಲಗಿಸುವಿಕೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ಸಾಮಾಜಿಕ ಭದ್ರತೆ ಖಾತರಿಪಡಿಸುವುದು.

  9. ಸಂತೋಷ, ಸಮೃದ್ಧಿ, ಆರೋಗ್ಯ, ಸುರಕ್ಷೆ, ಶಾಂತಿ ಮತ್ತು ನೆಮ್ಮದಿಯ ಜೊತೆಗೆ ಗಣನೀಯ ಪ್ರಗತಿಯ ಹಾದಿ.

  10. ಬದುಕಲು ಅತ್ಯುತ್ತಮವಾದ ಒಂದು ಭೂಭಾಗವಾಗಬೇಕು, ತನ್ನ ನಾಯಕತ್ವದ ಬಗ್ಗೆ ಹೆಮ್ಮೆ ಪಡುವಂತಿರಬೇಕು.

ಸುಸ್ಥಿರ ಅಭಿವೃದ್ದಿ

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಜೊತೆಗೆ ಗಿಡ ನೆಡುವುದು ಹಾಗೂ ಪ್ರಕೃತಿ ಸಂರಕ್ಷಣೆಗೆ ಕಲಾಂ ಒತ್ತು ನೀಡಿದ್ದರು. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ತೀವ್ರ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಯುವ ಪೀಳಿಗೆಗೆ, ತಂತ್ರಜ್ಞಾನದ ಜೊತೆಗೆ ಪರಿಸರಸ್ನೇಹಿ ಮತ್ತು ಸುಸ್ಥಿರ ಬದುಕಿನ ಅಗತ್ಯವನ್ನು ಅವರ ಕಾಳಜಿ ನಿರಂತರವಾಗಿ ನೆನಪಿಸುತ್ತದೆ.

ಯೌವನವು ಉತ್ಸಾಹ ಮತ್ತು ಕನಸುಗಳ ಸಾಕಾರ ರೂಪ; ಅದು ಸೃಜನಶೀಲತೆಗೆ ದಾರಿ ಮಾಡಿಕೊಡುತ್ತದೆ. ಸೃಜನಶೀಲತೆ ಜ್ಞಾನದ ಒಂದು ಪ್ರಮುಖ ಅಂಗ. ವಿದ್ಯಾರ್ಥಿಯಾಗಿ ನೀವು ಗಳಿಸಬಹುದಾದ ಎಲ್ಲ ಜ್ಞಾನವನ್ನು ಪಡೆದುಕೊಳ್ಳಲು ನಿಮ್ಮ ಸಂಪೂರ್ಣ ಮತ್ತು ಪ್ರಾಮಾಣಿಕ ಪ್ರಯತ್ನವನ್ನು ಮುಡಿಪಾಗಿಡಬೇಕು. ಈ ಜ್ಞಾನವೇ ನಿಮ್ಮ ಅತಿ ದೊಡ್ಡ ಶಕ್ತಿಯಾಗಲಿದ್ದು, ಅದರ ಮೂಲಕ ನೀವು ಸಮಾಜ, ದೇಶ ಮತ್ತು ಇಡೀ ಜಗತ್ತನ್ನು ರೂಪಿಸುತ್ತೀರಿ.

ಡಾ.ಎ.ಪಿ.ಜೆ.ಅಬ್ದುಲ್​ ಕಲಾಂ, ಮಾಜಿ ರಾಷ್ಟ್ರಪತಿ

ಸಕಾರಾತ್ಮಕ ಚಿಂತನೆ

ಡಾ.ಕಲಾಂ ಸದಾ ಸಕಾರಾತ್ಮಕ ಚಿಂತನೆಗಳನ್ನು ಬೋಧಿಸಿದರು. ಯುವಪೀಳಿಗೆ ವರ್ತಮಾನವನ್ನು ದೂಷಿಸದೆ, ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಇಂಥ ಸಕಾರಾತ್ಮಕ ಚಿಂತನೆ ಅತ್ಯಗತ್ಯವಾಗಿದೆ. ನಮ್ಮಲ್ಲಿ ಇರುವ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಎತ್ತರಕ್ಕೆ ಬೆಳೆಯಲು ಇದು ಪೂರಕ.

ಯುವಜನತೆಗಾಗಿ ಬೋಧಿಸಿದ ಪ್ರತಿಜ್ಞೆ

  • ನಾನು ಒಂದು ಗುರಿಯನ್ನು ಹೊಂದಿರುತ್ತೇನೆ ಮತ್ತು ಆ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಪಡುತ್ತೇನೆ. ಸಣ್ಣ ಗುರಿಯನ್ನು ಹೊಂದುವುದು ಒಂದು ಅಪರಾಧ ಎಂದು ನಾನು ಅರಿತಿದ್ದೇನೆ.

  • ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಮತ್ತು ಪ್ರಾಮಾಣಿಕತೆಯಿಂದಲೇ ಯಶಸ್ಸು ಗಳಿಸುತ್ತೇನೆ.

  • ನಾನು ನನ್ನ ಕುಟುಂಬದ ಉತ್ತಮ ಸದಸ್ಯನಾಗಿ, ಸಮಾಜದ ಉತ್ತಮ ಸದಸ್ಯನಾಗಿ, ರಾಷ್ಟ್ರದ ಉತ್ತಮ ಪ್ರಜೆಯಾಗಿ ಮತ್ತು ಜಗತ್ತಿನ ಉತ್ತಮ ಪ್ರಜೆಯಾಗಿರುತ್ತೇನೆ.

  • ಜಾತಿ, ಮತ, ಭಾಷೆ, ಧರ್ಮ ಅಥವಾ ರಾಜ್ಯದ ಯಾವುದೇ ತಾರತಮ್ಯವಿಲ್ಲದೆ ಯಾರಾದರೂ ಒಬ್ಬರ ಜೀವವನ್ನು ಉಳಿಸಲು ಅಥವಾ ಅವರ ಜೀವನವನ್ನು ಉತ್ತಮಪಡಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ನಾನೆಲ್ಲೆ ಇದ್ದರೂ ನನ್ನ ಮನಸ್ಸಿನಲ್ಲಿ ಸದಾ ಒಂದು ಆಲೋಚನೆ ಮೂಡುತ್ತದೆ, ಅದೇ ನಾನು ಏನು ನೀಡಬಲ್ಲೆ?

  • ಯಾವುದೇ ಪೂರ್ವಗ್ರಹವಿಲ್ಲದೆ ಪ್ರತಿಯೊಬ್ಬ ಮಾನವ ಜೀವಿಯ ಘನತೆಯನ್ನು ನಾನು ಸದಾ ರಕ್ಷಿಸುತ್ತೇನೆ ಮತ್ತು ಗೌರವಿಸುತ್ತೇನೆ.

  • ಸಮಯದ ಮಹತ್ವವನ್ನು ನಾನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. "ನನ್ನ ರೆಕ್ಕೆಗಳಿರುವ ದಿನಗಳು ವ್ಯರ್ಥವಾಗಿ ಕಳೆಯದಿರಲಿ' ಎಂಬುದು ನನ್ನ ಧ್ಯೇಯವಾಕ್ಯವಾಗಿರುತ್ತದೆ.

  • ಸ್ವಚ್ಛ ಭೂಮಿ ಮತ್ತು ಶುದ್ಧ ಶಕ್ತಿಗಾಗಿ (ಕ್ಲೀನ್​ ಎನರ್ಜಿ) ನಾನು ಸದಾ ಶ್ರಮಿಸುತ್ತೇನೆ.

  • ನಾನು ದೇಶದ ಯುವಕನಾಗಿ, ನನ್ನ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ಧೈರ್ಯದಿಂದ ಶ್ರಮಿಸುತ್ತೇನೆ ಮತ್ತು ಇತರರ ಯಶಸ್ಸನ್ನು ಕಂಡು ಸಂಭ್ರಮಿಸುತ್ತೇನೆ.

  • ನನ್ನ ಹೃದಯದಲ್ಲಿ ನಾನು ಸದಾ ನಂಬಿಕೆಯ ದೀಪವನ್ನು ಬೆಳಗಿಸುತ್ತೇನೆ.

  • ರಾಷ್ಟ್ರಧ್ವಜವು ನನ್ನ ಹೃದಯದಲ್ಲಿ ಸದಾ ಹಾರಾಡುತ್ತದೆ ಮತ್ತು ನನ್ನ ದೇಶಕ್ಕೆ ನಾನು ಕೀರ್ತಿಯನ್ನು ತರುತ್ತೇನೆ.

ಮಾನವೀಯ ಮೌಲ್ಯಗಳು

ಮೆಟೀರಿಯಲಿಸ್ಟಿಕ್​ ಆಕರ್ಷಣೆಗಳು ಹಾಗೂ ಅದ್ದೂರಿ ಜೀವನಶೈಲಿಯ ಇಂದಿನ ಕಾಲಘಟ್ಟದಲ್ಲಿ, ಭಾರತದ ಉನ್ನತ ಹುದ್ದೆಯಲ್ಲಿದ್ದರೂ ಕೇವಲ ಪುಸ್ತಕಗಳು, ವೀಣೆ ಮತ್ತು ಸರಳ ಉಡುಪಿನೊಂದಿಗೆ ಬದುಕಿದ ಕಲಾಂ ಅವರ ಶೈಲಿ ವಿಶಿಷ್ಟವಾದದ್ದು. ಭೌತಿಕ ವಸ್ತುಗಳಿಗಿಂತ ಜ್ಞಾನ, ನೈತಿಕತೆ ಮತ್ತು ಸರಳ ವ್ಯಕ್ತಿತ್ವಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಸಂದೇಶ ಇಂದಿನ ಶೋ ಆಫ್​ ಜಮಾನಾಗೆ ನಿಜವಾದ "ಡೌನ್​ ಟು ಅರ್ತ್​' ಮೌಲ್ಯವನ್ನು ತಿಳಿಸುತ್ತದೆ. ಜೀವನವನ್ನು ಸರಳವಾಗಿಸುತ್ತದೆ.

ಯುವಶಕ್ತಿಯ ಮೇಲೆ ನಂಬಿಕೆ

ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಭಾರತದ ಬೃಹತ್​ ಯುವಸಂಪನ್ಮೂಲವೇ ಮೂಲ ಶಕ್ತಿ ಎಂದು ಕಲಾಂ ಬಲವಾಗಿ ನಂಬಿದ್ದರು. ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಿ, ದೇಶದ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಅವರ ದೃಷ್ಟಿಕೋನ, ಇಂದಿನ ಯುವ ಜನಸಂಖ್ಯೆಯ (Demographic Dividend) ಗರಿಷ್ಠ ಪ್ರಯೋಜನ ಪಡೆದು ನವಭಾರತ ನಿರ್ಮಾಣ ಮಾಡಲು ದಿಕ್ಸೂಚಿಯಾಗಿದೆ. ಜಗತ್ತಿನಲ್ಲೇ ಭಾರತ ಅತಿ ಹೆಚ್ಚು ಸಂಖ್ಯೆಯ ಯುವಕ/ಯುವತಿಯರನ್ನು ಹೊಂದಿದ್ದು, ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಇದು ಸಕಾರಾತ್ಮಕ ಅಂಶ.

ತಂತ್ರಜ್ಞಾನದ ಮೂಲಕ ಗ್ರಾಮೀಣಾಭಿವೃದ್ಧಿ

ಕಲಾಂ ಅವರ ಪ್ರಮುಖ ಕನಸುಗಳಲ್ಲಿ ಒಂದಾದ "ಪುರ' (PURA - Providing Urban Amenities in Rural Areas) ಯೋಜನೆ ಇಂದು ಅತ್ಯಂತ ಪ್ರಸ್ತುತ. ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಡಿಜಿಟಲ್​ ಕಂದಕವನ್ನು ಕಡಿಮೆ ಮಾಡುವುದು, ಗ್ರಾಮಗಳಿಗೆ ತಂತ್ರಜ್ಞಾನ ಮತ್ತು ಸುಸಜ್ಜಿತ ಮೂಲಸೌಕರ್ಯ ತಲುಪಿಸುವುದು ಅತ್ಯಗತ್ಯ. ಸ್ಥಳೀಯ ಹಂತದಲ್ಲೇ ಸ್ವಾವಲಂಬನೆ ಮತ್ತು ಉದ್ಯೋಗ ಸೃಷ್ಟಿಗೆ ಈ ಪರಿಕಲ್ಪನೆ ಸೂಕ್ತ ಪರಿಹಾರ.