ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, ನಟಿ ತ್ರಿಷಾ ಕೃಷ್ಣನ್, ತಳಪತಿ ವಿಜಯ್
- ರಾಜಕಾರಣದಲ್ಲಿ ತಳಪತಿ ವಿಜಯ್ ಅನಾನುಭವಿ
- ರಾಜಕೀಯದ ಅನುಭವ ಪಡೆಯಲು ವಿಜಯ್ ಮೊದಲು ನಟಿ ತ್ರಿಷಾ ಮನೆಯಿಂದ ಹೊರಬರಬೇಕು
- ಬಿಜೆಪಿ ಮಹಿಳೆಯರನ್ನು ಅಗೌರವಿಸಿದೆ: ಡಿಎಂಕೆ
ತಮಿಳುನಾಡು: ರಾಜಕಾರಣದಲ್ಲಿ ತಳಪತಿ ವಿಜಯ್ ಅನಾನುಭವಿಯಾಗಿದ್ದು, ರಾಜಕೀಯದ ಅನುಭವ ಪಡೆಯಲು, ವಿಜಯ್ ಮೊದಲು ನಟಿ ತ್ರಿಷಾ (Trisha Krishnan) ಮನೆಯಿಂದ ಹೊರಬರಬೇಕೆಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.
ನೈನಾರ್ ನಾಗೇಂದ್ರನ್ ನೀಡಿರುವ ಈ ಹೇಳಿಕೆ ಈದೀಗ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಹಲವಾರು ರಾಜಕೀಯ ನಾಯಕರು ಈ ಹೇಳಿಕೆ ನಾಗೇಂದ್ರನ್ ಅವರ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಡಿಎಂಕೆಯ ಏಕೈಕ ಪ್ರತಿಸ್ಪರ್ಧಿಯಾಗಲಿದೆ ಎಂಬ ವಿಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್, ವಿಜಯ್ ಒಬ್ಬ ಅನಾನುಭವಿ ನಾಯಕ ಎಂದು ಕರೆದು, ಮನೆಯ ಮೇಲ್ಛಾವಣಿಯನ್ನು ಹತ್ತಲು ಸಾಧ್ಯವಾಗದ ವ್ಯಕ್ತಿ ಸ್ವರ್ಗವನ್ನು ಏರುವ ಕನಸು ಕಾಣುತ್ತಿದ್ದಾನೆ ಎಂದು ಹೇಳಿದರು.
ವಿಜಯ್ ಒಬ್ಬ ಉತ್ತಮ ನಟ ಎಂದರೆ ಒಪ್ಪಿಕೊಳ್ಳಬಹುದು ಆದರೆ ಅವನಿಗೆ ರಾಜಕೀಯ ಹೊಸದು, ಅವನಿಗೆ ರಾಜಕಾರಣದ ಯಾವುದೇ ಅನುಭವವಿಲ್ಲ, ರಾಜಕಾರಣ ಏನೆಂದು ತಿಳಿಯ ಬಯಸಿದರೆ ಮೊದಲು ಅವನ ಮತ್ತು ತ್ರಿಷಾಳ ಮನೆಯಿಂದ ಹೊರಬರಬೇಕೆಂದು ಹೇಳಿದರು. ನಂತರ, ಅವರ ಹೇಳಿಕೆಗಳನ್ನು ಪ್ರಶ್ನಿಸಿದಾಗ ನಾಗೇಂದ್ರನ್, ನಾನು ಆ ಮಾತನ್ನು ಕೇವಲ ಒಂದು ಬಾರಿ ಮಾತ್ರ ಹೇಳಿದ್ದೇನೆ ಮತ್ತು ನಾನು ನನ್ನ ಮಾತಿಗೆ ಬದ್ಧನಿದ್ದೆನೆ ಎಂದು ಹೇಳಿದ್ದಾರೆ.
ಬಿಜೆಪಿ ಮಹಿಳೆಯರನ್ನು ಅಗೌರವಿಸಿದೆ: ಡಿಎಂಕೆ
ನಾಗೇಂದ್ರನ್ ಅವರ ಈ ಹೇಳಿಕೆಗಳು ತಮಿಳುನಾಡಿನಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದ್ದು, ಡಿಎಂಕೆ ನಾಯಕರು ಬಿಜೆಪಿಗೆ ಮಹಿಳೆಯರ ಕುರಿತು ಹೇಗೆ ಮಾತನಾಡಬೇಕು ಎನ್ನುವ ಕನಿಷ್ಟ ಸೌಜನ್ಯವಿಲ್ಲ ಎಂದು ಆರೋಪಿಸಿದ್ದಾರೆ.
ಅವರು ಮಹಿಳೆಯರಿಗೆ ಎಂದಿಗೂ ಗೌರವ ನೀಡದ ಮನು ಧರ್ಮವನ್ನು ಪಾಲಿಸುವ ಕಾರಣ, ಸ್ವಾಭಾವಿಕವಾಗಿ ನಾಗೇಂದ್ರನ್ ಈ ರೀತಿ ಮಾತನಾಡಿದ್ದಾರೆ, ಇದೇ ಕಾರಣಕ್ಕೆ ತಮಿಳುನಾಡಿನ ಜನರು ಬಿಜೆಪಿಯನ್ನು ವಿರೋಧಿಸುತ್ತಾರೆ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್ ಹೇಳಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸೆಲ್ವಪೆರುಂಥಗೈ ಕೂಡ ಈ ಹೇಳಿಕೆಗಳನ್ನು ಖಂಡಿಸುತ್ತಾ, ತ್ರಿಷಾ ಅವರ ಹೆಸರನ್ನು ರಾಜಕೀಯದಲ್ಲಿ ಏಕೆ ಎಳೆದು ತರಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಮಾಡಲು ಏನು ಕೆಲಸವಿಲ್ಲ ಎಂದು ಅನಿಸುತ್ತದೆ, ಅದಕ್ಕೆ ವೈಯಕ್ತಿಕ ಜೀವನದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ, ಈ ರೀತಿಯ ಹೇಳಿಕೆಗಳು ರಾಷ್ಟ್ರೀಯ ಪಕ್ಷಕ್ಕೆ ಶೋಭೆಯಲ್ಲ ಎಂದು ಹೇಳಿದೆ,(ಏಜನ್ಸೀಸ್).