ಮಧ್ಯಪ್ರದೇಶ: ( loan) 3.5 ಮಿಲಿಯನ್ ಸಾಲವನ್ನು ತೀರಿಸಲು ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಫಿನಾಯಿಲ್ ಕುಡಿಸಿ ಕೊಲೆಗೆ ಯತ್ನಿಸಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.
ಆರೋಪಿ ತನ್ನ ಪತ್ನಿಗೆ ಫಿನಾಯ್ಲ್ ಅನ್ನು ನೀರಿನೊಂದಿಗೆ ಬೆರೆಸಿ ನೀಡಿದ್ದರಿಂದ ಆಕೆಯ ಸ್ಥಿತಿ ಹದಗೆಟ್ಟಿತು. ಆದರೆ, ಆಕೆ ಬದುಕುಳಿದರು. ನಂತರ ಸಂತ್ರಸ್ತೆಯ ಪತ್ನಿ ದೂರು ದಾಖಲಿಸಿದ್ದು, ಆಕೆಯ ದೂರಿನ ಆಧಾರದ ಮೇಲೆ ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸತ್ನಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಾಹ ನಿವಾಸಿ ಅನುರಾಗ್ ಸೋಹನ್ ತ್ರಿಪಾಠಿ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತ ತನ್ನ ಪತ್ನಿ ಪೂರ್ಣಿಮಾ ತ್ರಿಪಾಠಿ ಹೆಸರಿನಲ್ಲಿ "ರುದ್ರ ಎಂಟರ್‌ಪ್ರೈಸಸ್" ಎಂಬ ಸಂಸ್ಥೆಯನ್ನು ಆರಂಭಿಸಿ ಶಸ್ತ್ರಚಿಕಿತ್ಸಾ ಸಲಕರಣೆಗಳ ವ್ಯವಹಾರ ಮಾಡುತ್ತಿದ್ದ. ಇದಕ್ಕಾಗಿ ಎಸ್‌ಬಿಐ ಬ್ಯಾಂಕ್‌ನಿಂದ ಪತ್ನಿಯ ಹೆಸರಿನಲ್ಲಿ 35 ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಆದರೆ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಈತ, ಪತ್ನಿ ಸತ್ತರೆ ಆಕೆಯ ಹೆಸರಿನಲ್ಲಿರುವ ಸಾಲ ಮನ್ನಾ ಆಗಬಹುದು ಎಂಬ ಕುತಂತ್ರದಿಂದ ಈ ಕೊಲೆ ಸಂಚು ರೂಪಿಸಿದ್ದಾನೆ.
ಡಿಸೆಂಬರ್ 28ರ ರಾತ್ರಿ ಕುಡಿದು ಮನೆಗೆ ಬಂದ ಅನುರಾಗ್ ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಮರುದಿನ ಅಂದರೆ ಡಿಸೆಂಬರ್ 29ರಂದು ಬೆಳಿಗ್ಗೆ ಮತ್ತೆ ಜಗಳ ತೆಗೆದ ಈತ, ಸ್ನಾನಗೃಹದಲ್ಲಿದ್ದ ಫಿನಾಯಿಲ್ ನೀರಿನಲ್ಲಿ ಬೆರೆಸಿ ಪತ್ನಿಗೆ ಬಲವಂತವಾಗಿ ಕುಡಿಸಿದ್ದಾನೆ. "ನೀನು ಸತ್ತರೆ 35 ಲಕ್ಷ ಸಾಲ ಮನ್ನಾ ಆಗುತ್ತದೆ" ಎಂದು ಅರಚಾಡುತ್ತಾ ಈ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಫಿನಾಯಿಲ್ ಸೇವನೆಯಿಂದ ಪ್ರಜ್ಞೆ ತಪ್ಪಿದ್ದ ಪೂರ್ಣಿಮಾ, ಪ್ರಜ್ಞೆ ಬಂದ ಕೂಡಲೇ ತನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕುಟುಂಬಸ್ಥರು ಆಕೆಯನ್ನು ಬಿರ್ಲಾ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ಜನವರಿ 1ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಪೂರ್ಣಿಮಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಸಿವಿಲ್ ಲೈನ್ಸ್ ಪೊಲೀಸರು ಆರೋಪಿ ಅನುರಾಗ್ ತ್ರಿಪಾಠಿ ವಿರುದ್ಧ ಬಿಎನ್ಎಸ್ (BNS) ಸೆಕ್ಷನ್ 109(2) ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.