ಚೆನ್ನೈ: ಮುಂದಿನ ವಾರ ಬಿಡುಗಡೆಯಾಗಲಿರುವ ತಮಿಳು ಚಲನಚಿತ್ರ ಟಿಎನ್ 2026 - ತಂಗೈ ನಚ್ಚಥಿರಂ ಟೀಸರ್ (TN 2026 Teaser) ಶುಕ್ರವಾರ ದೊಡ್ಡ ಮಟ್ಟದ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದು, ಏಪ್ರಿಲ್ 2 ರಂದು ಬಿಡುಗಡೆಯಾದ ಈ ಟೀಸರ್‌ನಲ್ಲಿ ನಟರಾಜ್ (ನಟ್ಟಿ) ನಿರ್ವಹಿಸಿರುವ ಗೋಲ್ಡನ್ ಸ್ಟಾರ್ ಗುಲ್ಕಂದ್ ಕುಮಾರ್ ಎಂಬ ಚಿತ್ರರಂಗದ ನಾಯಕ ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದನ್ನು ತೋರಿಸಲಾಗಿದೆ.
ಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದಂತೆ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ ವಿಜಯ್‌ರನ್ನು ಗುರಿಯಾಗಿಸಿಕೊಂಡು ಈ ಟೀಸರ್ ರೂಪಿಸಲಾಗಿದೆ ಎಂಬುದು ಅಭಿಮಾನಿಗಳ ಆರೋಪವಾಗಿದೆ.
ಟೀಸರ್‌ನಲ್ಲಿ ಗುಲ್ಕಂದ್ ಕುಮಾರ್ ಪಾತ್ರವು ಬಿಳಿ ಶರ್ಟ್, ಖಾಕಿ ಪ್ಯಾಂಟ್ ಧರಿಸಿ, ವಿಜಯ್ ಅವರಂತೆಯೇ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಮುಖ್ಯ ಕಾರಣವಾಗಿದೆ. ಅಷ್ಟೇ ಅಲ್ಲದೆ, ನಟ ವಿಜಯ್ ನಡಿಗೆಯ ಶೈಲಿ ಮತ್ತು ಜನಸಮೂಹದತ್ತ ಕೈಬೀಸುವ ವಿಶಿಷ್ಟ ಶೈಲಿಯನ್ನು ಈ ಪಾತ್ರದಲ್ಲಿ ಅನುಕರಿಸಲಾಗಿದೆ.
ಟೀಸರ್‌ನ ಒಂದು ದೃಶ್ಯದಲ್ಲಿ ರೆಡಿನ್ ಕಿಂಗ್ಸ್ಲಿ ನಿರ್ವಹಿಸಿದ ಪಾತ್ರವೊಂದು ವೇದಿಕೆಯ ಮೇಲೆ ಬಂದು, ಹೇ ಮೂವಿ-ಬಾಯ್ (ಸಿನಿಮಾ ಕರ ಪಯಲೆ), ಇದು ತಮಿಳುನಾಡು. ಇಲ್ಲಿ ಜೀವನವನ್ನು ಬಯಸುವುದು ಸರಿ, ಆದರೆ ನೀನು ಇದನ್ನು ಆಳಬಹುದು ಎಂದು ಭಾವಿಸುತ್ತೀಯಾ? ಎಂದು ಗೇಲಿ ಮಾಡುವ ಸಂಭಾಷಣೆ ಇದೆ. ಟೀಸರ್‌ನ ಕೊನೆಯಲ್ಲಿ ಓಂ ಶಕ್ತಿ ಪರಾಶಕ್ತಿ..ಎಂಬ ಘೋಷಣೆ ಕೇಳಿಬರುತ್ತದೆ, ಇದು ಇತ್ತೀಚೆಗೆ ವಿಜಯ್ ಡಿಎಂಕೆ ವಿರುದ್ಧದ ಭಾಷಣದಲ್ಲಿ ಬಳಸಿದ ನುಡಿಗಟ್ಟನ್ನು ಹೋಲುತ್ತದೆ.
ಡಿಎಂಕೆ..ಟಿವಿಕೆ ಪಿತೂರಿ ಎಂದ ಟಿವಿಕೆ ನಾಯಕರು
ಈ ಬೆಳವಣಿಗೆಯ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಟಿವಿಕೆ ನಾಯಕ ಆಧವ್ ಅರ್ಜುನ, ಇದು ವಿಜಯ್ ವರ್ಚಸ್ಸಿಗೆ ಧಕ್ಕೆ ತರಲು ಡಿಎಂಕೆ ಮತ್ತು ಬಿಜೆಪಿ ಜಂಟಿಯಾಗಿ ನಡೆಸಿದ ಪಿತೂರಿ ಎಂದು ಆರೋಪಿಸಿದ್ದಾರೆ. ಜನ ನಾಯಗನ್ ತರಹದ ಚಿತ್ರಗಳು ಬಿಡುಗಡೆಯಾಗಲು ಸಾಧ್ಯವಾಗದಿದ್ದಾಗ, ಇಂತಹ ರಾಜಕೀಯ ಪ್ರೇರಿತ ಚಿತ್ರವನ್ನು ಚುನಾವಣೆಗೆ ಮುನ್ನ ಹೇಗೆ ಬಿಡುಗಡೆ ಮಾಡಲು ಸಾಧ್ಯ? ಜನರು ಇಂತಹ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಹಿಂದೆ ಬಿಡುಗಡೆಯಾದ ಪರಾಶಕ್ತಿ ಚಿತ್ರದಂತೆ ಇದು ಕೂಡ ಸೋಲನುಭವಿಸಲಿದೆ ಎಂದು ಕಿಡಿಕಾರಿದ್ದಾರೆ.
ಉಮಾಪತಿ ರಾಮಯ್ಯ ನಿರ್ದೇಶನದ ಈ ಚಿತ್ರದಲ್ಲಿ ರೆಡಿನ್ ಕಿಂಗ್ಸ್ಲಿ, ತಂಬಿ ರಾಮಯ್ಯ, ಎಂ.ಎಸ್. ಬಾಸ್ಕರ್, ಇಳವರಸು, ಶ್ರಿತಾ ರಾವ್, ಚಾಂದಿನಿ ತಮಿಳರಸನ್ ಮತ್ತು ಯಶಿಕಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜಕೀಯ ಸಂಘರ್ಷದ ಹಾದಿ ಹಿಡಿದಿರುವ ಈ ಚಿತ್ರವು ಚುನಾವಣಾ ನೈತಿಕ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆಯೇ ಮತ್ತು ಏಪ್ರಿಲ್ 10 ರಂದು ನಿಗದಿಯಂತೆ ಬಿಡುಗಡೆಯಾಗುತ್ತದೆಯೇ ಎಂಬ ಕುತೂಹಲ ಈಗ ಮೂಡಿದೆ(ಏಜೆನ್ಸೀಸ್).