ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯ(TMC v/s TMC) ಮತ್ತೊಂದು ಮಗ್ಗಲಿಗೆ ಮರಳಿದ್ದು, ಇಂದು ಉಚ್ಚಾಟಿತ ಶಾಸಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು ಕೋಲ್ಕತ್ತಾದಲ್ಲಿರುವ ಟಿಎಂಸಿ ಪ್ರಧಾನ ಕಚೇರಿಯನ್ನು ತಮ್ಮ ವಶಕ್ಕೆ ಪಡೆದಿದೆ.
ನಿನ್ನೆ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿಗಾಗಿ ಚುನಾವಣೆ ಆಯೋಗವನ್ನು ಭೇಟಿಯಾಗಿದ್ದ ಈ ತಂಡ, ಇಂದು ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಫಿರ್ಹಾದ್ ಹಕೀಮ್, ಜಾವೇದ್ ಖಾನ್, ಸಂದೀಪನ್ ಸಹಾ ಮತ್ತು ಅಖ್ರುಝಮಾನ್ ಸೇರಿದಂತೆ ಹಿರಿಯ ನಾಯಕರು ಶುಕ್ರವಾರ ಪಕ್ಷದ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿ ತಮ್ಮದೇ ನಿಜವಾದ ಟಿಎಂಸಿ ಎಂದು ಕರೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಬಂಡಾಯದ ಬಣದ ನಾಯಕ ಅಖ್ರುಝಮಾನ್, ನಮ್ಮದು ನಿಜವಾದ ಟಿಎಂಸಿ. ಈ ಕಚೇರಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದೆ. ಪಕ್ಷ ಮತ್ತು ಈ ಕಚೇರಿಯ ನಡುವೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿದ್ದಾರೆ.
ಇಎಂ ಬೈಪಾಸ್ನಲ್ಲಿ ಟಿಎಂಸಿ ಮೂಲ ಕಚೇರಿ ಪುನರ್ನಿರ್ಮಾಣ ಹಿನ್ನೆಲೆ 2022ರಿಂದ ಮೆಟ್ರೋಪಾಲಿಟನ್ ಕಚೇರಿಯು ತೃಣಮೂಲ ಕಾಂಗ್ರೆಸ್‌ನ ಕಾರ್ಯಾಚರಣಾ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಂದಲೇ ಇಷ್ಟು ದಿನ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪಕ್ಷದ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿರುವ ನಾಯಕರ ನಡುವೆ ಪಕ್ಷದ ಅಧಿಕಾರಕ್ಕಾಗಿ ಹೋರಾಟ ತೀವ್ರಗೊಂಡಿದ್ದು, ಎರಡೂ ಪಕ್ಷಗಳು ತಾವು ಕಾನೂನುಬದ್ಧ ತೃಣಮೂಲ ಕಾಂಗ್ರೆಸ್ ಎಂದು ಹೇಳಿಕೊಳ್ಳುತ್ತಿವೆ. ಅದರ ನಡುವೆ ಬಂಡಾಯ ಬಣವು ಪಕ್ಷದ ಪ್ರಧಾನ ಕಚೇರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ (ಏಜೆನ್ಸೀಸ್).