Yogi Adityanath | ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  
ದೇಶ

ಸಾಂಸ್ಕೃತಿಕ ನಗರಿಯನ್ನು ಮಾಫಿಯಾ ಅಡ್ಡೆಯಾಗಿ ಬದಲಿಸಿದ್ದು ಟಿಎಂಸಿ ಸರ್ಕಾರ; ದೀದಿ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಕಿಡಿ | Yogi Adityanath

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಬಂಗಾಳಿ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತಿದ್ದು, ರಾಜ್ಯದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಸಾಧಿಸಿರುವ ಮಹತ್ವದ ಮೈಲಿಗಲ್ಲುಗಳನ್ನು ಈ ವೇಳೆ ಉಲ್ಲೇಖಿಸಿದರು.
ನಂದಕುಮಾರ್ ಪ್ರದೇಶದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

370ನೇ ವಿಧಿ ರದ್ದತಿಯ ಬಗ್ಗೆ ಯೋಗಿ ಹೇಳಿದ್ದೇನು..?

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಅಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಆ ಪ್ರದೇಶಕ್ಕೂ ಅನ್ವಯಿಸಲಾಗಿದೆ, ಇದು ಏಕ ಭಾರತ, ಶ್ರೇಷ್ಠ ಭಾರತದ ನಿಜವಾದ ವಿಜಯವಾಗಿದ್ದು, ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಕನಸನ್ನು ಕಾಂಗ್ರೆಸ್ ಅಥವಾ ಇತರ ಪಕ್ಷಗಳು ನನಸು ಮಾಡದಿದ್ದರೂ, ಮೋದಿ ಸರ್ಕಾರವು ಭಯೋತ್ಪಾದನೆಯ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವ ಮೂಲಕ ಅದನ್ನು ಸಾಧಿಸಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಯುವಕರು ಉದ್ಯೋಗಕ್ಕೆ, ಮಹಿಳೆಯರು ಸುರಕ್ಷತೆಗೆ ಮತ್ತು ವ್ಯಾಪಾರಿಗಳು ರಕ್ಷಣೆಗೆ ಅರ್ಹರಾಗಿದ್ದರು ಕೂಡ ಟಿಎಂಸಿ ಸರ್ಕಾರ ಅದನ್ನು ನೀಡುವಲ್ಲಿ ವಿಫಲವಾಗಿದ್ದು, ಉತ್ತರ ಪ್ರದೇಶದ ಮಾದರಿಯನ್ನು ಉಲ್ಲೇಖಿಸಿದ ಯೋಗಿ, 2017ಕ್ಕಿಂತ ಮೊದಲು ಯುಪಿಯಲ್ಲಿ ನಿರಂತರ ಗಲಭೆಗಳು ಮತ್ತು ಅಶಾಂತಿ ಇತ್ತು, ಆದರೆ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬಂದ ಬಳಿಕ ಅಲ್ಲಿ ಯಾವುದೇ ಗಲಭೆಗಳಿಲ್ಲದೆ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ ಎಂದರು.
ಬಂಗಾಳದ ಮಾಲ್ಡಾ, ಮುರ್ಷಿದಾಬಾದ್ ಮತ್ತು ಬಿರ್ಭೂಮ್‌ನಂತಹ ಜಿಲ್ಲೆಗಳಲ್ಲಿ ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪಿತೂರಿ ನಡೆಯುತ್ತಿದ್ದು, ಟಿಎಂಸಿ ಸರ್ಕಾರವು ದುರ್ಗಾ ಪೂಜೆ ಮತ್ತು ರಾಮ ನವಮಿ ಮೆರವಣಿಗೆಗಳ ಮೇಲೆ ನಿರ್ಬಂಧ ಹೇರಿ ಹಿಂದೂ ಹಬ್ಬಗಳನ್ನು ತಡೆಯುವ ಮೂಲಕ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಬಾಂಗ್ಲಾದೇಶಿ ನುಸುಳುಕೋರರ ಪ್ರಭಾವ ಹೆಚ್ಚುತ್ತಿರುವುದನ್ನು ಜನಸಂಖ್ಯಾ ಪಿತೂರಿ ಎಂದು ಕರೆದ ಯುಪಿ ಸಿಎಂ, ಸ್ವಂತ ರಾಜಕೀಯ ಲಾಭಕ್ಕಾಗಿ ರಾಜ್ಯದ ಜನಸಂಖ್ಯಾ ಸಮತೋಲನವನ್ನು ಬದಲಾಯಿಸಲು ಇಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕೋಲ್ಕತ್ತಾ ಮೇಯರ್ ಹೇಳಿಕೆಗೆ ಯೋಗಿ ರಿಯಾಕ್ಷನ್​

ಕೋಲ್ಕತ್ತಾ ಮೇಯರ್ ಬಂಗಾಳದ ಅರ್ಧದಷ್ಟು ಜನಸಂಖ್ಯೆ ಉರ್ದು ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ನೀಡಿದ್ದ ಹೇಳಿಕೆಯನ್ನು ಖಂಡಿಸಿದ ಯೋಗಿ ಆದಿತ್ಯನಾಥ್, ಉರ್ದು ಮಾತನಾಡಲು ಬಯಸುವವರು ಉರ್ದು ಮಾತನಾಡುವ ಸ್ಥಳಗಳಿಗೆ ಹೋಗಲಿ, ಆದರೆ ಬಂಗಾಳದಲ್ಲಿ ಬಂಗಾಳಿ ಮಾತ್ರ ಮಾತನಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ರೀತಿಯ ಹೇಳಿಕೆಗಳು ಬಂಗಾಳಿ ಗುರುತನ್ನು ಅಳಿಸಿಹಾಕುವ ಪ್ರಯತ್ನವಾಗಿದ್ದು, ಅದಕ್ಕೆ ಎಂದಿಗೂ ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದರು. 2021ರ ಚುನಾವಣೆಯಲ್ಲಿ ಟಿಎಂಸಿ 213 ಸ್ಥಾನಗಳನ್ನು ಗೆದ್ದಿದ್ದರೂ, ಬಿಜೆಪಿ ತನ್ನ ಸ್ಥಾನವನ್ನು 77ಕ್ಕೆ ಏರಿಸಿಕೊಂಡಿರುವುದು ಈ ಬಾರಿ ತೀವ್ರ ಸ್ಪರ್ಧೆಗೆ ನಾಂದಿ ಹಾಡಿದೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಮತದಾನದ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದ್ದು, ಇಡೀ ದೇಶದ ಗಮನ ಈಗ ಬಂಗಾಳದ ರಣಕಣದತ್ತ ನೆಟ್ಟಿದೆ(ಏಜೆನ್ಸೀಸ್​).