ಅಮಿತ್ ಶಾ ಮನೆ ಹೊರಗಡೆ ಟಿಎಂಸಿ ಸಂಸದರ ಪ್ರತಿಭಟನೆ 
ದೇಶ

ಐ-ಪಿಎಸಿ ಮೇಲೆ ಇಡಿ ದಾಳಿ ಖಂಡಿಸಿ ರಾಜ್ಯಾದ್ಯಂತ ಟಿಎಂಸಿ ಪ್ರತಿಭಟನೆ: ದೆಹಲಿಯಲ್ಲಿTMC ಸಂಸದರ ಬಂಧನ

ನವದೆಹಲಿ: ಕೋಲ್ಕತ್ತಾದಲ್ಲಿ ಗುರುವಾರ ಐ-ಪಿಎಸಿ ಸಂಸ್ಥೆಯ ಮೇಲೆ ಇಡಿ ನಡೆಸಿದ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಟಿಎಂಸಿ(TMC) ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿ ಇಂದು(ಜ. 09) ಪಶ್ಚಿಮ ಬಂಗಾಳದಾದ್ಯಂತ ತನ್ನ ಕಾರ್ಯಕರ್ತರಿಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಈ ಹಿನ್ನೆಲೆ ದೆಹಲಿಯಲ್ಲಿ ಬೆಳಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಮನೆಯ ಹೊರಗಡೆ ಬಂಗಾಳ ಮೋದಿ-ಅಮಿತ್ ಶಾ ಅವರ ಕೊಳಕು ರಾಜಕೀಯವನ್ನು ತಿರಸ್ಕರಿಸುತ್ತದೆ ಎಂಬ ಫಲಕವನ್ನು ಹಿಡಿದು ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ, ಡೆರೆಕ್ ಓಬ್ರಿಯನ್ ಸೇರಿದಂತೆ ಟಿಎಂಸಿ ನಾಯಕರು ಪ್ರತಿಭಟನೆ ನಡೆಸಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದೆ ಮಹುವಾ ಮೊಯಿತ್ರಾ, ನಿನ್ನೆ ಇಡೀ ದೇಶ ಬಂಗಾಳವನ್ನು ಕೇಂದ್ರ ಗೃಹ ಸಚಿವಾಲಯವು ಇಡಿಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದನ್ನು ಕಂಡಿತು. ನಮ್ಮ ಪಕ್ಷದ ರಾಜಕೀಯ, ಕಾರ್ಯತಂತ್ರದ ಮಾಹಿತಿಯನ್ನು ಕದಿಯಲು ಇಡಿಯನ್ನು ಕಳುಹಿಸಲಾಗಿದೆ. ಮಮತಾ ಬ್ಯಾನರ್ಜಿ ಒಬ್ಬ ಸಿಂಹಿಣಿ, ಅವರು ನಮ್ಮ ಪಕ್ಷದ ಆಸ್ತಿಗಳನ್ನು ರಕ್ಷಿಸಿದರು ಎಂದು ಹೇಳಿದ್ದಾರೆ. 
ಸಂಸದ ಕೀರ್ತಿ ಅಜಾದ್ ಸಹ, ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ವಿರೋಧಿಗಳಾಗಿ ವರ್ತಿಸುತ್ತಿದ್ದಾರೆ. ನಿನ್ನೆಯ ಇಡಿ ದಾಳಿ ಕಾನೂನು ಬಾಹಿರ. ಅವರು ಲೂಟಿ ಮಾಡುತ್ತಾರೆ, ನಮ್ಮ ಮೇಲೆ ಹಗರಣಗಳ ಆರೋಪ ಮಾಡುತ್ತಾರೆ. ನಮ್ಮ ಪಕ್ಷದ ಕಾರ್ಯತಂತ್ರ, ಅಭ್ಯರ್ಥಿಗಳ ಪಟ್ಟಿಯನ್ನು ಕದಿಯಲೆತ್ನಿಸಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ 25 ಸ್ಥಾನಗಳನ್ನು ಗೆಲ್ಲುವುದಿಲ್ಲ. ಆದರೆ ಮಮತಾ ದೀದಿ ಭಾರಿ ಬಹುಮತ ಪಡೆದು ಮತ್ತೆ ಮರಳಿ ಸಿಎಂ ಆಗುತ್ತಾರೆ ಎಂದಿದ್ದಾರೆ.
ಇನ್ನೂ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಸಿಎಂ ಮಮತಾ,  ಮಧ್ಯಾಹ್ನ 2 ಗಂಟೆಗೆ ಜಾದವ್‌ಪುರ 8 ಬಿ ಬಸ್ ನಿಲ್ದಾಣದಿಂದ ಹಜ್ರಾ ಮೋರ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎನ್ನಲಾಗಿದೆ. 

ಐ-ಪಿಎಸಿ ಮೇಲಿನ ಇಡಿ ದಾಳಿ ಮೇಲೆ ಸಿಎಂ ದಾಳಿ

ಗುರುವಾರ ಮುಂಬರುವ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ರಾಜಕೀಯ ಸಲಹೆ, ತಂತ್ರಗಾರಿಕೆ ನೆರವು ನೀಡಲು ಮುಂದಾಗಿರುವ ಐ-ಪಿಎಸಿ ಸಂಸ್ಥೆ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ಮೇಲೆ ಕೋಲ್ಕತ್ತಾದ ಎರಡು ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಸಿತ್ತು.
ಐ-ಪಿಎಸಿ ಮೇಲಿನ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ತನ್ನ ರಾಜ್ಯದ ಭಾರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಆಗಮಿಸಿದ ಸಿಎಂ ಮಮತಾ ಬ್ಯಾನರ್ಜಿ, ಪಕ್ಷದ ಚುನಾವಣಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ಆಂತರಿಕ ದಾಖಲೆಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಡಿಜಿಟಲ್ ಡೇಟಾವನ್ನು ಇಡಿ ವಶಕ್ಕೆ ಪಡೆಯಲು ಪ್ರಯತ್ನಿಸಿದೆ ಎಂದು ಆರೋಪಿಸಿ ಅಲ್ಲಿದ್ದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ. 
ಇನ್ನೂ ಮಮತಾ ಬ್ಯಾನರ್ಜಿಯವರು ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿ ಇಡಿ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದೆ. ಇಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).