ಬಂಗಾಳದಲ್ಲಿ ಟಿಎಂಸಿ ಸಂಸದನ ಮೇಲೆ ಹಲ್ಲೆ!; ನನ್ನನ್ನು ಕೊಲ್ಲಲು ಸಿಎಂ ಸುವೇಂದು ಸಂಚು ರೂಪಿಸಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆಕ್ರೋಶ! 
ದೇಶ

ಬಂಗಾಳದಲ್ಲಿ ಟಿಎಂಸಿ ಸಂಸದನ ಮೇಲೆ ಹಲ್ಲೆ!; ನನ್ನನ್ನು ಕೊಲ್ಲಲು ಸಿಎಂ ಸುವೇಂದು ಸಂಚು ರೂಪಿಸಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆಕ್ರೋಶ! Kayan Banerjee Attacked

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 25 ದಿನಗಳಲ್ಲೇ ಟಿಎಂಸಿ ನಾಯಕರ ಮೇಲೆ ದಾಳಿಯಾಗಿವೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಶನಿವಾರವಷ್ಟೇ ಟಿಎಂಸಿ ಯುವ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಕಣ್ಣಿಗೆ ಇಟ್ಟಿಗೆಯಿಂದ ಹೊಡೆದು ಗಾಯಗೊಳಿಸಿದ್ದ ದುಷ್ಕರ್ಮಿಗಳು, ಭಾನುವಾರ ಹೂಗ್ಲಿ ಜಿಲ್ಲೆಯಲ್ಲಿ ಹಿರಿಯ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ತಲೆಗೆ ಕಲ್ಲು ಹೊಡೆದು ರಕ್ತಸಿಕ್ತಗೊಳಿಸಿದ್ದಾರೆ. ಈ ಭೀಕರ ದಾಳಿಯನ್ನು ತಮಗೆ ನಡೆದ ಕೊಲೆ ಯತ್ನ ಎಂದು ಕರೆದಿರುವ ಕಲ್ಯಾಣ್ ಬ್ಯಾನರ್ಜಿ(Kayan Banerjee Attacked), ಬಿಜೆಪಿ ಗೂಂಡಾಗಳು ಹಾಗೂ ಸಿಎಂ ಸುವೇಂದು ಅಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

‘ಚೋರ್, ಚೋರ್’ ಘೋಷಣೆ; ಕೇಸರಿ ಧಾರಿಗಳಿಂದ ಭೀಕರ ಕಲ್ಲು ತೂರಾಟ!

ಘಟನೆಯ ಭೀಕರ ಕ್ಷಣಗಳನ್ನು ವಿವರಿಸಿದ ಸಂಸದ ಕಲ್ಯಾಣ್ ಬ್ಯಾನರ್ಜಿ, ತಾವಿಂದು ಹೂಗ್ಲಿ ಜಿಲ್ಲೆಯ ಚಂಡೀತಲ ಪೊಲೀಸ್ ಠಾಣೆಯ ಅಧಿಕಾರಿಯನ್ನು ಭೇಟಿ ಮಾಡಲು ಮತ್ತು ನಿಯೋಗದ ಮನವಿ ಸಲ್ಲಿಸಲು ತೆರಳಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ನಾನು ಚಂಡೀತಲ ಕ್ರಾಸ್ ಬಳಿ ನನ್ನ ವೈಯಕ್ತಿಕ ಭದ್ರತಾ ಅಧಿಕಾರಿ (PSO) ಜೊತೆ ನಡೆದುಕೊಂಡು ಹೋಗುತ್ತಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ಕೇಸರಿ ಬಟ್ಟೆ ಧರಿಸಿದ್ದ 10 ರಿಂದ 15 ಬಿಜೆಪಿ ಗೂಂಡಾಗಳು ನನ್ನನ್ನು ಮುತ್ತಿಗೆ ಹಾಕಿದರು. ಅವರು ನನ್ನ ವಿರುದ್ಧ ಅತ್ಯಂತ ಅಶ್ಲೀಲ ಪದಗಳಿಂದ ನಿಂದಿಸುತ್ತಾ, ಭೀಕರ ಜಗಳದ ವಾತಾವರಣ ಸೃಷ್ಟಿಸಿದರು. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಭಾರಿ ಗಾತ್ರದ ಕಲ್ಲೊಂದನ್ನು ನನ್ನ ತಲೆಗೆ ಎಸೆಯಲಾಯಿತು ಎಂದು ಕಲ್ಯಾಣ್ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಸದರು ನಡೆದು ಹೋಗುತ್ತಿದ್ದಾಗ ಬೃಹತ್ ಗುಂಪೊಂದು ಚೋರ್, ಚೋರ್, ಚೋರ್ ಎಂದು ಕಿರುಚುತ್ತಾ ಮುತ್ತಿಗೆ ಹಾಕಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಕಲ್ಲು ತಲೆಗೆ ತಗುಲುತ್ತಿದ್ದಂತೆಯೇ ಕಲ್ಯಾಣ್ ಬ್ಯಾನರ್ಜಿ ಅವರು ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ರಸ್ತೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.

ಬಂಗಾಳ ಪೊಲೀಸರು ಮೂಕಪ್ರೇಕ್ಷಕ; ಪ್ರಾಣ ಉಳಿಸಿದ ಸಿಆರ್‌ಪಿಎಫ್ ಸಿಬ್ಬಂದಿ!

ದಾಳಿಯ ತೀವ್ರತೆಗೆ ಸಂಸದರ ಬಟ್ಟೆಯಲ್ಲಾ ರಕ್ತಸಿಕ್ತವಾಗಿತ್ತು. ಈ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದನ್ನು ಖಂಡಿಸಿದ ಟಿಎಂಸಿ ಸಂಸದ, ನಾನು ರಸ್ತೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಂಗಾಳದ ಸ್ಥಳೀಯ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ನಿಂತಿದ್ದರು, ಗೂಂಡಾಗಳಿಗೆ ದಾಳಿ ಮಾಡಲು ಸಂಪೂರ್ಣ ಮುಕ್ತ ಅವಕಾಶ ನೀಡಿದ್ದರು. ಆದರೆ ಅಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ತಕ್ಷಣವೇ ಧಾವಿಸಿ ಬಂದು ನನ್ನನ್ನು ಆ ಗೂಂಡಾಗಳಿಂದ ರಕ್ಷಿಸಿದರು. ಅವರಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ ಎಂದಿದ್ದಾರೆ.
ಬಂಗಾಳದ ಇಂದಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ವಿರೋಧ ಪಕ್ಷದ ನಾಯಕರನ್ನು ಮಟ್ಟಹಾಕಲು ಸರ್ಕಾರವೇ ಗೂಂಡಾಗಿರಿ ಮಾಡುತ್ತಿದೆ ಎಂದು ಕಲ್ಯಾಣ್​ ಬ್ಯಾನರ್ಜಿ ದೂರಿದ್ದಾರೆ.

ಮುಖ್ಯಮಂತ್ರಿ ಸುವೇಂದು ಒಬ್ಬ ಕೊಲೆಗಡುಕ- ಕಲ್ಯಾಣ್ ಬ್ಯಾನರ್ಜಿ ವಾಗ್ದಾಳಿ!

ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭೀಕರ ದಾಳಿ ನಡೆಸಿರುವ ಕಲ್ಯಾಣ್ ಬ್ಯಾನರ್ಜಿ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಹಿಂದೆ ಅತ್ಯಂತ ಅಸೂಯೆ ಪಡುವ, ಸರ್ವಾಧಿಕಾರಿ ಮುಖ್ಯಮಂತ್ರಿಯ ಕೈವಾಡವಿದೆ. ಅವರು ತೃಣಮೂಲ ಕಾಂಗ್ರೆಸ್ ನಾಯಕರನ್ನು ಕೊಲ್ಲಲು ಬಯಸಿದ್ದಾರೆ. ನಿನ್ನೆ ಅಭಿಷೇಕ್ ಬ್ಯಾನರ್ಜಿ ಮೇಲಾದ ದಾಳಿ ಮತ್ತು ಇಂದು ನನ್ನ ಮೇಲಾದ ಕೊಲೆ ಯತ್ನದ ಹಿಂದಿರುವ ಅಸಲಿ ಮಾಸ್ಟರ್ ಮೈಂಡ್ ಸುವೇಂದು ಅಧಿಕಾರಿಯಾಗಿದ್ದಾರೆ. ಆತ ಒಬ್ಬ ಕೊಲೆಗಡುಕ. ಕೇವಲ 25 ದಿನಗಳ ಬಿಜೆಪಿ ಆಡಳಿತದಲ್ಲೇ ಬಂಗಾಳದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇವಲ 24 ಗಂಟೆಗಳ ಅಂತರದಲ್ಲಿ ಬಂಗಾಳದ ಇಬ್ಬರು ಪ್ರಮುಖ ಸಂಸದರ ಮೇಲೆ ನಡೆದಿರುವ ಈ ಭೀಕರ ಭೌತಿಕ ದಾಳಿಗಳು ದೇಶದ ಸಂಸದೀಯ ವ್ಯವಸ್ಥೆಗೆ ದೊಡ್ಡ ಆಘಾತ ತಂದಿದ್ದು, ಮುಂಬರುವ ದಿನಗಳಲ್ಲಿ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಯುದ್ಧಕ್ಕೆ ನಾಂದಿ ಹಾಡಿದೆ,(ಏಜೆನ್ಸೀಸ್).