West Bengal Elections | ಬಂಗಾಳ ಎಣಿಕೆ ಸಂಘರ್ಷ ಸುಪ್ರೀಂ ಅಂಗಳಕ್ಕೆ
West Bengal Elections: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕೇವಲ ಎರಡು ದಿನ ಬಾಕಿ ಇರುವ ಬೆನ್ನಲ್ಲೇ, ಎಣಿಕೆ ಮೇಲ್ವಿಚಾರಕರ ನೇಮಕಾತಿ ವಿಚಾರವು ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದು, ಮತ ಎಣಿಕೆ ವೇಳೆ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ನೌಕರರನ್ನು ಮಾತ್ರ ಮೇಲ್ವಿಚಾರಕರನ್ನಾಗಿ ನೇಮಿಸಬೇಕು ಎಂಬ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಕೊಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದೆ.
ಈ ಆದೇಶದ ಬೆನ್ನಲ್ಲೇ ಟಿಎಂಸಿ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಶನಿವಾರ ಬೆಳಿಗ್ಗೆ 10:30ಕ್ಕೆ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ವಿಶೇಷ ಪೀಠವು ಈ ಅರ್ಜಿಯ ತುರ್ತು ವಿಚಾರಣೆ ನಡೆಸಲಿದೆ.
ನಿಷ್ಪಕ್ಷಪಾತ ತತ್ವಕ್ಕೆ ವಿರುದ್ಧ ಎಂದ ಟಿಎಂಸಿ..
ರಾಜ್ಯ ಸರ್ಕಾರಿ ನೌಕರರನ್ನು ಎಣಿಕೆ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದು ನಿಷ್ಪಕ್ಷಪಾತ ತತ್ವಕ್ಕೆ ವಿರುದ್ಧವಾಗಿದೆ ಎಂಬುದು ಟಿಎಂಸಿಯ ಮುಖ್ಯ ವಾದವಾಗಿದ್ದು, ಈ ವಾದವನ್ನು ತಿರಸ್ಕರಿಸಿರುವ ಕೊಲ್ಕತ್ತಾ ಹೈಕೋರ್ಟ್, ಯಾರನ್ನು ನೇಮಿಸಿಕೊಳ್ಳಬೇಕು ಎಂಬುದು ಸಂಪೂರ್ಣವಾಗಿ ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಇದರಲ್ಲಿ ಯಾವುದೇ ಕಾನೂನುಬಾಹಿರ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರಿ ನೌಕರರು ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಾರೆ ಎಂಬ ಶಂಕೆಗೆ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ತೀರ್ಪನ್ನು ಸ್ವಾಗತಿಸಿರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್, ಚುನಾವಣಾ ಪ್ರಕ್ರಿಯೆಯಲ್ಲಿ ಸಿಬ್ಬಂದಿಗಳ ನಿಯೋಜನೆ ಆಯೋಗದ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ, ರಾಜ್ಯದಲ್ಲಿನ ಚುನಾವಣಾ ವಾತಾವರಣವು ಸಾಕಷ್ಟು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಕೇಂದ್ರ ಪಡೆಗಳು ಮತ್ತು ಹೊರ ರಾಜ್ಯದ ಅಧಿಕಾರಿಗಳನ್ನು ಬಳಸಿ ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ಪೊಲೀಸರ ಅರಿವಿಲ್ಲದೆಯೇ ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯಕರ್ತರ ಮನೆಗಳಿಗೆ ನುಗ್ಗುತ್ತಿದ್ದಾರೆ ಎಂಬುದು ಟಿಎಂಸಿ ನಾಯಕರ ವಾದವಾಗಿದೆ. ಇದಷ್ಟೆ ಅಲ್ಲದೇ, ಯುಪಿ ಕೇಡರ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾರನ್ನು ಪೊಲೀಸ್ ವೀಕ್ಷಕ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೂ ಸಲ್ಲಿಕೆಯಾಗಿದ್ದು, ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆಯು ಬಂಗಾಳ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್).