ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಚುನಾವಣೆ ಆಯೋಗ ನಡೆಸಿದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದ(SIR) ಆಡಳಿತರೂಢ ತೃಣಮೂಲ ಕಾಂಗ್ರೆಸ್ ಭಯಗೊಂಡಿರಬಹುದು, ನಮಗೆ ಯಾವುದೇ ಭಯ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್(Nitin Nabin) ಹೇಳಿದ್ದಾರೆ.
ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವಾದ ಎನ್ಡಿಟಿವಿ ಸಂಪಾದಕರ ಜೊತೆ ಮಾತನಾಡಿರುವ ಅವರು, ರಾಜ್ಯದಲ್ಲಿ ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ. ಎಸ್ಐಆರ್ ಬಗ್ಗೆ ಟಿಎಂಸಿಗೆ ಆತಂಕವಿರಬಹುದು ಎಂದು ತಿಳಿಸಿದ್ದಾರೆ.
ಬಂಗಾಳವು ಗಡಿ ಪ್ರದೇಶ. ಚುನಾವಣಾ ಆಯೋಗದ ನಿರ್ಧಾರವು ಸ್ಥಳೀಯ ಅಧಿಕಾರಿಗಳ ಮೂಲ ಮಾಹಿತಿಯನ್ನು ಆಧರಿಸಿದೆ. ಆದರೆ ಮಮತಾ ಬ್ಯಾನರ್ಜಿ ಎಸ್ಐಆರ್ ವಿರುದ್ಧ ನಾಟಕವಾಡುತ್ತಿದ್ದಾರೆ. ಬಾಂಗ್ಲಾದೇಶದ ಜನರಿಗೆ ಮತದಾನದ ಹಕ್ಕನ್ನು ನೀಡಬೇಕೇ? ಎಸ್ಐಆರ್ ಬಂಗಾಳದ ಜನರಿಗೆ ಪ್ರಯೋಜನವಾಗುವ ನಿರ್ಧಾರ ಎಂದಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿರುವ ಅವರು, ಬಿಹಾರದಲ್ಲಿ ನಡೆದಂತೆ ಬಂಗಾಳದಲ್ಲಿ ಎಸ್ಐಆರ್ ಅನ್ನು ನಡೆಸಿದೆ. ಆಯೋಗವು ಇಡೀ ಪ್ರಕ್ರಿಯೆಯಲ್ಲಿ ಎಲ್ಲರಿಗೂ ತಮ್ಮ ವಾದವನ್ನು ಮಂಡಿಸಲು ಸಮಯವನ್ನು ನೀಡುತ್ತದೆ. ತಮಿಳುನಾಡು, ಕೇರಳ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆಗಳಿವೆ ಮತ್ತು ಅಲ್ಲಿ ಎಸ್ಐಆರ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವು ಅರಾಜಕತೆಯನ್ನು ಸೃಷ್ಟಿಸಿದ್ದು, ಅಭಿವೃದ್ಧಿಯನ್ನು ಉತ್ತೇಜಿಸುವ ಬದಲು, ನುಸುಳುಕೋರರಿಗೆ ಪ್ರೋತ್ಸಾಹ ನೀಡಿದೆ ಎಂದು ಆರೋಪಿಸಿದ ಅವರು, ಟಿಎಂಸಿ ನಾಯಕರು ಹತಾಶರಾಗಿದ್ದು, ಆಯೋಗದ ವಿರುದ್ಧ ಆರೋಪಗಳನ್ನು ಮಾಡಿ ಈ ಕಾರಣಕ್ಕಾಗಿ ನಾವು ಸೋಲುತ್ತಿದ್ದೇವೆ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).