ಜಹಾಂಗೀರ್ ಖಾನ್ 
ದೇಶ

ಪತಿ ಬಿಡುಗಡೆಗಾಗಿ ಪೊಲೀಸರ ಮೇಲೆ ಹಲ್ಲೆ ಆರೋಪ; ಟಿಎಂಸಿ ನಾಯಕ ಜಹಾಂಗೀರ್ ಖಾನ್ ಪತ್ನಿ ಬಂಧನ | Jahangir Khan's wife

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪತಿಯನ್ನು ಬಿಡುಗಡೆ ಮಾಡುವಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಟಿಎಂಸಿಯ ಫಾಲ್ಟಾ ಮಾಜಿ ಶಾಸಕ ಮತ್ತು ಚುನಾವಣೆ ವೇಳೆ ನಾನು ಪುಷ್ಪ ಎಂದು ಅಬ್ಬರಿಸಿದ್ದ ಜಹಾಂಗೀರ್ ಖಾನ್ ಅವರ ಪತ್ನಿಯನ್ನು(Jahangir Khan's wife) ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಜೂ. 20) ವರದಿಯಾಗಿದೆ.
ಜೂನ್ 8 ರಿಂದ ಬಂಧನದಲ್ಲಿರುವ ತನ್ನ ಪತಿ ಜಹಾಂಗೀರ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪತ್ನಿ ಸರೀನಾ ಬೀಬಿ ನೇತೃತ್ವದಲ್ಲಿ ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಭಾರಿ ಗಲಾಟೆ ನಡೆದಿತ್ತು. ಈ ವೇಳೆ ಖಾನ್ ಬೆಂಬಲಿಗರು ಕೆಲವು ಪೊಲೀಸರ ಮೇಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಇಂದು ಬೆಳಗ್ಗೆ ಅವರನ್ನು ಬಂಧಿಸಲಾಗಿದೆ.
ಭಾರತದಿಂದ ಪಲಾಯನ ಮಾಡಲು ಯತ್ನಿಸುವಾಗ ನೇಪಾಳ ಗಡಿಯಲ್ಲಿ ಜಹಾಂಗೀರ್ ಖಾನ್ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಕೋರ್ಟ್​ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ನಡುವೆ ಪೊಲೀಸರು ಅವರನ್ನು ಒಟ್ಟು ಮೂರು ಬಾರಿ ಬರ್ಮೋಡಾದಲ್ಲಿ ಬೀದಿಯಲ್ಲಿ ಮೆರವಣಿಗೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಜಹಾಂಗೀರ್ ಪತ್ನಿಯೇ ಪೊಲೀಸ್ ಠಾಣೆಯ ಮೇಲಿನ ದಾಳಿಯನ್ನು ಯೋಜಿಸಿದ್ದಳು, ತನ್ನ ಪತಿಯನ್ನು ಸೊಂಟಕ್ಕೆ ಹಗ್ಗ ಕಟ್ಟಿ ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಿದ್ದ ರೀತಿಯಿಂದ ಕೋಪಗೊಂಡು ಠಾಣೆಗೆ ಮುತ್ತಿಗೆ ಹಾಕಿದ್ದಳು ಎನ್ನಲಾಗಿದೆ.
ಪ್ರತಿಭಟನೆ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಜಹಾಂಗೀರ್ ಖಾನ್ ಅವರ ಪತ್ನಿ ವಿರುದ್ಧ ರಾಜ್ಯ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪ್ರಕರಣ ದಾಖಲಿಸುವಂತೆ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಆದೇಶಿಸಿದ್ದರು.
ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಸಹಾಯಕರಾದ ಜಹಾಂಗೀರ್ ಖಾನ್, ಬ್ಯಾನರ್ಜಿಯವರ ಲೋಕಸಭಾ ಕ್ಷೇತ್ರವಾದ ಡೈಮಂಡ್ ಹಾರ್ಬರ್ ವ್ಯಾಪ್ತಿಗೆ ಬರುವ ಫಾಲ್ಟಾದಲ್ಲಿ ಹಲವು ಭಾರಿ ಗೆದ್ದಿದ್ದರು. ಚುನಾವಣೆಯ ಸಮಯದಲ್ಲಿ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರೊಂದಿಗಿನ ಸಾರ್ವಜನಿಕ ಘರ್ಷಣೆಯ ಬಳಿಕ ರಾಷ್ಟ್ರೀಯ ಸುದ್ದಿಗಳಲ್ಲಿ ಸ್ಥಾನ ಪಡೆದಿದ್ದರು (ಏಜೆನ್ಸೀಸ್).