TMC  
ದೇಶ

ಸಿನಿಮೀಯ ಶೈಲಿಯಲ್ಲಿ TMC ನಾಯಕನ ಬಂಧನ: ನೇಪಾಳಕ್ಕೆ ಓಡಿಹೋಗುವಾಗ ಸಿಕ್ಕಿಬಿದ್ದ ‘ಬಂಗಾಳದ ಪುಷ್ಪ’!

ನವದೆಹಲಿ:ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ತೃಣಮೂಲ ಕಾಂಗ್ರೆಸ್ (TMC) ಪ್ರಭಾವಿ ನಾಯಕ(ಮಾಜಿ ಶಾಸಕ) ಜಹಾಂಗೀರ್ ಖಾನ್ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಹಲವು ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಜಹಾಂಗೀರ್ ಖಾನ್‌ನನ್ನು ಭಾರತ-ನೇಪಾಳ ಗಡಿಯ ಬಳಿ ಪಶ್ಚಿಮ ಬಂಗಾಳ ಪೊಲೀಸರು ಸಿನಿಮೀಯ ಶೈಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಹೌದು, ದಕ್ಷಿಣ 24 ಪರಗಣ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕನಾಗಿದ್ದ ಜಹಾಂಗೀರ್ ಖಾನ್ ವಿರುದ್ಧ ಹಫ್ತಾ ವಸೂಲಿ (ಸುಲಿಗೆ), ಜನರಿಗೆ ಬೆದರಿಕೆ ಹಾಗೂ ಚುನಾವಣಾ ಹಿಂಸಾಚಾರ ಸೇರಿದಂತೆ ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ನೇಪಾಳ ಗಡಿಯಲ್ಲಿ ಹೆಡೆಮುರಿ ಕಟ್ಟಿದ ಪೊಲೀಸರು

ಖಾನ್ ಮತ್ತು ಆತನ ಬೆಂಬಲಿಗರ ವಿರುದ್ಧ ಸರಣಿ ದೂರುಗಳು ದಾಖಲಾದ ಬೆನ್ನಲ್ಲೇ ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದರು. ಬಂಧನದಿಂದ ತಪ್ಪಿಸಿಕೊಳ್ಳಲು ಜಹಾಂಗೀರ್ ಖಾನ್ ನಿರಂತರವಾಗಿ ಜಾಗ ಬದಲಾಯಿಸುತ್ತಿದ್ದ. ಕೊನೆಗೆ ಆತನ ಮೊಬೈಲ್ ಲೊಕೇಶನ್ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ತಂಡ, ಉತ್ತರ ಬಂಗಾಳದ ಭಾರತ-ನೇಪಾಳ ಗಡಿಯ ಬಳಿ ಆತನನ್ನು ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹಫ್ತಾ ವಸೂಲಿ, ಗೂಂಡಾಗಿರಿ ಆರೋಪ

ಫಾಲ್ಟಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ(ಮಾಜಿ ಶಾಸಕ) ಜಹಾಂಗೀರ್ ಖಾನ್ ಭಾರಿ ಪ್ರಭಾವ ಹೊಂದಿದ್ದ. ಆದರೆ, ಈತನ ವಿರುದ್ಧ ಸ್ಥಳೀಯ ಸಾರ್ವಜನಿಕರು ಮತ್ತು ರಾಜಕೀಯ ವಿರೋಧಿಗಳು ಸಾಲು ಸಾಲು ದೂರುಗಳನ್ನು ನೀಡಿದ್ದರು. ವ್ಯಾಪಾರಿಗಳಿಂದ ಮತ್ತು ಜನರಿಂದ ಬಲವಂತವಾಗಿ ಹಣ ವಸೂಲಿ ಮಾಡುವುದು (Extortion), ಮಾತು ಕೇಳದಿದ್ದರೆ ಹಲ್ಲೆ ನಡೆಸುವುದು ಹಾಗೂ ಪ್ರಾಣ ಬೆದರಿಕೆ ಹಾಕುತ್ತಿದ್ದ ಆರೋಪಗಳು ಈತನ ಮೇಲಿವೆ. ಇತ್ತೀಚೆಗೆ ನಡೆದ ಚುನಾವಣೆಯ ಸಂದರ್ಭದಲ್ಲೂ ಈತ ಭಾರಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಖಾನ್ ಆಪ್ತರು ಈಗಾಗ್ಲೇ ಜೈಲಿಗೆ!

ಜಹಾಂಗೀರ್ ಖಾನ್ ಒಬ್ಬನೇ ಅಲ್ಲ, ಆತನ ಇಡೀ ಗ್ಯಾಂಗ್ ವಿರುದ್ಧ ಪೊಲೀಸರು ಈಗ ಕಣ್ಣಿಟ್ಟಿದ್ದಾರೆ. ಕಳೆದ ಕೆಲವು ವಾರಗಳ ಹಿಂದಷ್ಟೇ ಖಾನ್‌ನ ಅತ್ಯಂತ ಆಪ್ತನಾಗಿದ್ದ ಗ್ರಾಮ ಪಂಚಾಯಿತಿ ಮುಖ್ಯಸ್ಥ ಇಸ್ರಾಫಿಲ್ ಚಕ್ದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತನೂ ಕೂಡ ಹಣ ವಸೂಲಿ ಮತ್ತು ಜನರಿಗೆ ಹೆದರಿಸುತ್ತಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಇವರೆಲ್ಲರೂ ಸೇರಿ ಒಂದು ದೊಡ್ಡ ಜಾಲವನ್ನೇ ಮಾಡಿಕೊಂಡಿದ್ದರಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಖಾನ್‌ನ ಇನ್ನೂ ಕೆಲವು ಬೆಂಬಲಿಗರು ಜೈಲು ಸೇರುವ ಸಾಧ್ಯತೆ ಇದೆ.

ಫಾಲ್ಟಾ ಕ್ಷೇತ್ರದಲ್ಲಿ ಹೈಡ್ರಾಮಾ

ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರವು ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಇಲ್ಲಿ ನಡೆದ ಚುನಾವಣಾ ಅಕ್ರಮ ಹಾಗೂ ಗೂಂಡಾಗಿರಿ ಇಡೀ ರಾಜ್ಯದ ಗಮನ ಸೆಳೆದಿತ್ತು. ತನ್ನ ವಿರುದ್ಧ ಸರಣಿ ಎಫ್‌ಐಆರ್‌ಗಳು ದಾಖಲಾಗುತ್ತಿದ್ದಂತೆ ಜಹಾಂಗೀರ್ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿ ರಕ್ಷಣೆ ಕೋರಿದ್ದ. "ನನ್ನ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಕೇಸ್ ಹಾಕಲಾಗುತ್ತಿದೆ" ಎಂದು ಖಾನ್ ವಾದಿಸಿದ್ದ. ಆದರೆ ಕಾನೂನಿನ ಹೋರಾಟದ ನಡುವೆಯೇ ಪೊಲೀಸರು ಈಗ ಆತನನ್ನು ಬಂಧಿಸಿ ಕಲ್ಕತ್ತಾಗೆ ಕರೆತರುತ್ತಿದ್ದಾರೆ.
ಸದ್ಯ ಬಂಧಿತ ನಾಯಕನನ್ನು ಕೋರ್ಟ್‌ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).