Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ಅಡಗಿಕೊಳ್ಳಲು ಜಾಗ ಸಿಗಲ್ಲ, ನಿಮ್ಮನ್ನು ಯಾರೂ ರಕ್ಷಿಸಲ್ಲ; ಗೂಂಡಾಗಳಿಗೆ ಪ್ರಧಾನಿ ಮೋದಿ ಮರಣಶಾಸನ! | Narendra Modi

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದ ಅಖಾಡಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಮೇ 4ರ ಫಲಿತಾಂಶ ಪ್ರಕಟವಾದ ಬಳಿಕ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ನಿಶ್ಚಿತ ಎಂದಿದ್ದಾರೆ.
ಡಮ್ ಡಮ್‌ನಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿಯವರೆಗೆ ಜನರ ಮೇಲೆ ದೌರ್ಜನ್ಯ ಎಸಗಿದ ಟಿಎಂಸಿಯ ಗೂಂಡಾಗಳಿಗೆ ಅಡಗಿಕೊಳ್ಳಲು ಯಾವುದೇ ಸ್ಥಳವಿರುವುದಿಲ್ಲ ಮತ್ತು ಯಾರೂ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆದ ಪ್ರತಿಯೊಂದು ಅನ್ಯಾಯ ಮತ್ತು ಭ್ರಷ್ಟಾಚಾರದ ಕಡತಗಳನ್ನು ತೆರೆಯಲಾಗುವುದು ಎಂಬುದು ಮೋದಿಯವರ ಭರವಸೆ ಎಂದು ಘೋಷಿಸಿದ ಮೋದಿ, ಮೊದಲ ಹಂತದ ಮತದಾನದಲ್ಲಿ ದಾಖಲಾದ ಶೇಕಡಾ 92.89 ರಷ್ಟು ಅಭೂತಪೂರ್ವ ಮತದಾನವು ಟಿಎಂಸಿಯ ಮಹಾ ಜಂಗಲ್ ರಾಜ್ ಅಂತ್ಯಕ್ಕೆ ಬರೆದ ಮರಣಶಾಸನ ಎಂದು ಮೋದಿ ಕರೆದಿದ್ದಾರೆ.
ಕಳೆದ 2021ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಶೇಕಡಾ 10ಕ್ಕಿಂತ ಹೆಚ್ಚಿನ ಏರಿಕೆಯಾಗಿರುವುದು ಬದಲಾವಣೆಯ ಅಲೆಯನ್ನು ದೃಢಪಡಿಸಿದ್ದು, ಇದು ಬಂಗಾಳದ ಶ್ರೇಯಸ್ಸಿಗಾಗಿ ಜನರು ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಬಂಗಾಳ ಮತ್ತು ತಮಿಳುನಾಡಿನ ಮತದಾರರು ಪ್ರಜಾಪ್ರಭುತ್ವದ ಮೇಲಿಟ್ಟಿರುವ ನಂಬಿಕೆಯನ್ನು ಅಭಿನಂದಿಸಿದ ಪ್ರಧಾನಿ, ಈ ಹಂತದ 152 ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಕ್ಕಿರುವ ಬೆಂಬಲವು ಪಕ್ಷದ ಭವ್ಯ ವಿಜಯದ ಮುನ್ಸೂಚನೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಧ್ಯಮ ವರ್ಗದ ಜನರ ಕಲ್ಯಾಣದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ತೆರಿಗೆ ಸುಧಾರಣೆಗಳನ್ನು ನೆನಪಿಸಿದರು. 2014ಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರಕ್ಕೆ ಟಿಎಂಸಿ ಬೆಂಬಲ ನೀಡಿದ್ದ ಕಾಲದಲ್ಲಿ ಕೇವಲ 2 ಲಕ್ಷ ರೂಪಾಯಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಮಧ್ಯಮ ವರ್ಗದವರ ಜೀವನವನ್ನು ಸುಲಭಗೊಳಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಪ್ರಸ್ತುತ ವಾರ್ಷಿಕ 12 ಲಕ್ಷ ರೂಪಾಯಿಗಳವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡಲಾಗಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಂತಹ ಅಭಿವೃದ್ದಿ ಯೋಜನೆಗಳು ನೇರವಾಗಿ ಪ್ರತಿಯೊಬ್ಬರಿಗೂ ತಲುಪಲಿವೆ ಎಂದು ಭರವಸೆ ನೀಡಿದರು.

ಬಂಗಾಳದಲ್ಲಿ ದಾಖಲೆಯ ಮತದಾನ!...

ಗುರುವಾರ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಹಂತದಲ್ಲಿ ರಾಜ್ಯವು ಅಚ್ಚರಿಯ ರೀತಿಯಲ್ಲಿ ಶೇಕಡಾ 91.88 ರಷ್ಟು ಮತದಾನವನ್ನು ದಾಖಲಿಸಿದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿಯೇ ದಾಖಲಾದ ಅತ್ಯಧಿಕ ಮತದಾನವಾಗಿದೆ. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಎರಡನೇ ಹಂತದ ಮತದಾನವು ಏಪ್ರಿಲ್ 29 ರಂದು ನಡೆಯಲಿದ್ದು, ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿರುವ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ(ಏಜೆನ್ಸೀಸ್​).