ಬಂಗಾಳದಲ್ಲಿ ಟಿಎಂಸಿ ನಕಲಿ ಸಹಿ ಹಗರಣ!; ಸಿಐಡಿ ಸಮನ್ಸ್ ವಿರುದ್ಧ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ದೀದಿ ಅಳಿಯ!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ನಾಯಕರ ನಡುವಿನ ಆಂತರಿಕ ಕಲಹ ಹಾಗೂ ನಕಲಿ ಸಹಿ ವಿವಾದ ಈಗ ನ್ಯಾಯಾಲಯದ ಅಂಗಳ ತಲುಪಿದೆ. ರಾಜ್ಯ ಅಪರಾಧ ತನಿಖಾ ಇಲಾಖೆ (CID) ತಮಗೆ ನೀಡಿರುವ ಸಮನ್ಸ್ ನೋಟಿಸ್ ಅನ್ನು ಸವಾಲು ಮಾಡಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಬುಧವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಕಾನೂನು ಸಮರ ಸಾರಿದ್ದಾರೆ. ಸಿಐಡಿಯಿಂದ ಯಾವುದೇ ರೀತಿಯ ಕಠಿಣ ಕ್ರಮಗಳು ಜರುಗದಂತೆ ತಮಗೆ ತಕ್ಷಣವೇ ಮಧ್ಯಂತರ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.
ಜೂನ್ 5 ರಂದು ವಿಚಾರಣೆ; ಮಧ್ಯಂತರ ರಕ್ಷಣೆಗಾಗಿ ತಂತ್ರ!
ಅಭಿಷೇಕ್ ಬ್ಯಾನರ್ಜಿ ಪರ ವಕೀಲರಾದ ಪ್ರಭನ್ಯ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್‌ನ ರಜೆ ಕಾಲದ ಪೀಠದ ನ್ಯಾಯಮೂರ್ತಿ ಅಪೂರ್ವ ಸಿನ್ಹಾ ರಾಯ್ ಅವರ ಮುಂದೆ ತುರ್ತಾಗಿ ಅರ್ಜಿ ಸಲ್ಲಿಸಲು ಅನುಮತಿ ಕೋರಿದರು. ಕೋರ್ಟ್ ಈ ಮನವಿಯನ್ನು ಪುರಸ್ಕರಿಸಿದ್ದು, ಈ ಹೈ-ಪ್ರೊಫೈಲ್ ಪ್ರಕರಣದ ವಿಚಾರಣೆಯು ಜೂನ್ 5 ರಂದು ಬೇಸಿಗೆ ರಜೆ ಪೀಠದ ಮುಂದೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ತನಿಖಾ ಸಂಸ್ಥೆಗಳು ತಮ್ಮನ್ನು ಬಂಧಿಸದಂತೆ ಕಾನೂನು ರಕ್ಷಣೆ ಪಡೆಯುವುದು ಅಭಿಷೇಕ್ ಅವರ ಈ ಅರ್ಜಿಯ ಮುಖ್ಯ ಉದ್ದೇಶವಾಗಿದೆ.
ಏನಿದು ನಕಲಿ ಸಹಿ ಹಗರಣ? ಕರಗಿದ ಟಿಎಂಸಿ ಶಿಸ್ತು!
ಈ ರಾಜಕೀಯ ಬಿರುಗಾಳಿಗೆ ಕಾರಣವಾಗಿದ್ದು ಟಿಎಂಸಿ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರು ವಿಧಾನಸಭೆಯ ಸ್ಪೀಕರ್‌ಗೆ ನೀಡಿದ ಅಧಿಕೃತ ದೂರು. ಮೇ 6 ರಂದು ಪಕ್ಷದ ವತಿಯಿಂದ ಯಾವುದೇ ಅಧಿಕೃತ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ, ಆದರೆ ಅಂದು ಬಿಡುಗಡೆಯಾದ ಆಫೀಶಿಯಲ್ ಡಾಕ್ಯುಮೆಂಟ್ ಕಂಪ್ಲೀಟ್ ಆಗಿ ನಕಲಿಯಾಗಿದ್ದು, ಅದರಲ್ಲಿರುವ ಹಲವು ಶಾಸಕರ ಸಹಿಗಳನ್ನು ಬ್ಲಾಕ್ ಲೆಟರ್ಸ್‌ನಲ್ಲಿ ನಕಲು ಮಾಡಲಾಗಿದೆ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದರು.
ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಯವರ ಪ್ರಾಥಮಿಕ ತನಿಖೆಯ ನಂತರ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ, ತನಿಖೆಯನ್ನು ರಾಜ್ಯ ಸಿಐಡಿಗೆ ವಹಿಸಲಾಯಿತು. ಸಿಐಡಿ ಇದರ ತನಿಖೆಗಾಗಿ ಡಿಐಜಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಅಲ್ಲದೆ, ತನಿಖೆಯ ವೇಳೆ 13 ಟಿಎಂಸಿ ಶಾಸಕರ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಅವರಲ್ಲಿ ಬಹರುಲ್ ಇಸ್ಲಾಂ, ಅರುಪ್ ರಾಯ್ ಮತ್ತು ಸುಭಾಸಿಸ್ ದಾಸ್ ಎಂಬ ಮೂವರು ಪ್ರಮುಖ ಶಾಸಕರು ತಮಗೆ ಸಂಬಂಧಿಸಿದ ಸಹಿಗಳನ್ನು ಅಧಿಕೃತವಾಗಿ ನಿರಾಕರಿಸಿದ್ದಾರೆ. ಸಿಎಂ ಸುವೇಂದು ಅಧಿಕಾರಿ ಈ ಭ್ರಷ್ಟಾಚಾರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ, ಟಿಎಂಸಿ ಪಕ್ಷವು ದೂರು ನೀಡಿದ್ದ ಇಬ್ಬರು ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಉಚ್ಛಾಟಿಸಿದೆ.
ಸಿಐಡಿ ಅಧಿಕಾರಿಗಳ ಬ್ಯಾಕ್-ಟು-ಬ್ಯಾಕ್ ನೋಟಿಸ್; 15 ದಿನಗಳ ಗಡುವು ನಿರಾಕರಣೆ!
ಕಳೆದ ಮೇ 30 ರಂದು ಕಾಲಿಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿದ್ದ ಸಿಐಡಿ ಅಧಿಕಾರಿಗಳು ಮೊದಲ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಜೂನ್ 1 ರಂದು ಮಧ್ಯಾಹ್ನ ಭವಾನಿ ಭವನದಲ್ಲಿರುವ ಸಿಐಡಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ಅವರಿಗೆ ನಿರ್ದೇಶಿಸಲಾಗಿತ್ತು.
ಆದರೆ, ಜೂನ್ 1 ರಂದು ಬೆಳಗ್ಗೆ ಅಭಿಷೇಕ್ ಸಿಐಡಿಗೆ ಪತ್ರ ಬರೆದು, ತಾವು ಇತ್ತೀಚೆಗೆ ಮೃತಪಟ್ಟ ಪಕ್ಷದ ಕಾರ್ಯಕರ್ತನ ಕುಟುಂಬವನ್ನು ಭೇಟಿ ಮಾಡಲು ಸೋನಾರ್‌ಪುರಕ್ಕೆ ಹೋಗಿದ್ದಾಗ ತಮ್ಮ ಮೇಲೆ ಹಲ್ಲೆ ನಡೆದಿತ್ತು, ಹೀಗಾಗಿ ವೈದ್ಯಕೀಯ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ತಮಗೆ 14 ದಿನಗಳ ಕಾಲಾವಕಾಶ ಬೇಕು ಎಂದು ವಿನಂತಿಸಿದ್ದರು. ಆದರೆ ಸಿಐಡಿ ಈ ವಿನಂತಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದು, ಕೇವಲ 7 ದಿನಗಳ ಅಂತಿಮ ಗಡುವು ನೀಡಿ ಎರಡನೇ ನೋಟಿಸ್ ನೀಡಿದೆ. ಅದರಂತೆ ಜೂನ್ 8 ರಂದು ತನಿಖಾಧಿಕಾರಿಗಳ ಮುಂದೆ ಖುದ್ದಾಗಿ ಹಾಜರಾಗಬೇಕಿದೆ.
ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ರಾಜಕೀಯ ಬೆಳವಣಿಗೆಗಳ ನಡುವೆ, ಮಮತಾ ಅವರ ಕುಟುಂಬದ ಪ್ರಮುಖ ನಾಯಕನೇ ಸಿಐಡಿ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರಾ ಅಥವಾ ಹೈಕೋರ್ಟ್ ಅವರಿಗೆ ರಿಲೀಫ್ ನೀಡಲಿದೆಯೇ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್).