TMCvsECI | ಸಂಸದ ಡೆರೆಕ್ ಒ'ಬ್ರಿಯಾನ್‌ಗೆ ಗೆಟ್ ಲಾಸ್ಟ್ ಅಂದ್ರಾ ಸಿಇಸಿ..?  
ದೇಶ

ಟಿಎಂಸಿ ನಿಯೋಗ Vs ಚುನಾವಣಾ ಆಯೋಗ..ಸಂಸದ ಡೆರೆಕ್ ಒ'ಬ್ರಿಯಾನ್‌ಗೆ ಗೆಟ್ ಲಾಸ್ಟ್ ಅಂದ್ರಾ ಸಿಇಸಿ..? ಸಂಜೆ ಸ್ಫೋಟವಾಗಲಿದೆ ಸತ್ಯ! | TMCvsECI

ನವದೆಹಲಿ: ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ ಎಂದೂ ಕಾಣದಂತಹ ಸಂಘರ್ಷವೊಂದು ಬುಧವಾರ ಭಾರತ ಚುನಾವಣಾ ಆಯೋಗ ಮತ್ತು ತೃಣಮೂಲ ಕಾಂಗ್ರೆಸ್ ನಿಯೋಗದ (TMCvsECI) ನಡುವೆ ನಡೆದಿದ್ದು, ಚುನಾವಣಾ ಪ್ರಕ್ರಿಯೆಗಳ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯು ಅಕ್ಷರಶಃ ಮಾತಿನ ಚಕಮಕಿ ಮತ್ತು ಉದ್ವಿಗ್ನತೆಗೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ.
ಸಭೆಯು ಆರಂಭವಾದ ಕೆಲವೇ ಕ್ಷಣಗಳಲ್ಲಿ ವಾಗ್ವಾದಕ್ಕೆ ಕಾರಣವಾಗಿದ್ದು, ಹಿರಿಯ ಟಿಎಂಸಿ ನಾಯಕ ಡೆರೆಕ್ ಒ'ಬ್ರೇನ್ ಸಭೆಯಲ್ಲಿ ಕೂಗಾಡಿದರು ಎನ್ನಲಾಗಿದೆ. ಈ ವೇಳೆ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ (ಸಿಇಸಿ) ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬೇಡಿ ಎಂದು ಎಚ್ಚರಿಸುವ ಮೂಲಕ ವಾತಾವರಣವು ಮತ್ತಷ್ಟು ಹದಗೆಡುವಂತೆ ಮಾಡಿತು ಎಂದು ವರದಿಯಾಗಿದೆ.
ಪಕ್ಷವು ಪದೇ ಪದೇ ಚುನಾವಣಾ ಆಯೋಗವನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಟಿಎಂಸಿಯ ನಿಯೋಗ ಹೇಳಿಕೊಂಡಿದ್ದು, ಚುನಾವಣಾ ಅಕ್ರಮಗಳು ಮತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಟಿಎಂಸಿ ಈವರೆಗೆ ಒಂಬತ್ತು ಪತ್ರಗಳನ್ನು ಕಳುಹಿಸಿದೆ ಮತ್ತು ಆರು ನಿರ್ದಿಷ್ಟ ಉದಾಹರಣೆಗಳನ್ನು ನೀಡಿದೆ. ನಾವು ಈ ಗಂಭೀರ ವಿಷಯಗಳನ್ನು ಎತ್ತಲು ಅಲ್ಲಿಗೆ ಹೋಗಿದ್ದೆವು, ಆದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಟಿಎಂಸಿ ನಾಯಕರು ಆಕ್ರೋಶ ಹೊರಹಾಕಿದ್ದು, ತಮ್ಮ ಕಳವಳಗಳನ್ನು ಆಯೋಗ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ಈ ಸಭೆಯು ಕೇವಲ ಏಳು ನಿಮಿಷಗಳಲ್ಲಿ ಮುಗಿದಿದ್ದು, ಸಿಇಸಿ ನಮಗೆ ಗೆಟ್ ಲಾಸ್ಟ್ (ಇಲ್ಲಿಂದ ಹೊರನಡೆಯಿರಿ) ಎಂದರು. ನಾವು ಸಂಸತ್ತಿನಲ್ಲಿ ಎರಡನೇ ಅತಿದೊಡ್ಡ ವಿರೋಧ ಪಕ್ಷ ಎಂಬ ಕನಿಷ್ಠ ಗೌರವವೂ ನಮಗೆ ಸಿಗಲಿಲ್ಲ ಎಂದು ಡೆರೆಕ್ ಒ'ಬ್ರೇನ್ ಸಮಾಧಾನ ಹೊರಹಾಕಿದ್ದಾರೆ. ಟಿಎಂಸಿ ನಾಯಕರು ಈ ವರ್ತನೆಯನ್ನು ಸರಿಯಾದ ನಡೆ ಅಲ್ಲ ಎಂದು ಕರೆದಿದ್ದು, ಇದು ಚುನಾವಣಾ ಆಯೋಗದಂತಹ ಸಂಸ್ಥೆಯ ಘನತೆಗೆ ಕುಂದು ತರುತ್ತದೆ ಎಂದು ಹೇಳಿದ್ದಾರೆ.

ವಿಡಿಯೋ ಬಿಡುಗಡೆಗೆ ಒತ್ತಾಯ

ಸಭೆಯಲ್ಲಿ ನಡೆದಿದ್ದೇನು ಎನ್ನುವುದನ್ನು ಬಹಿರಂಗಗೊಳಿಸಲು ವಿಡಿಯೋ ಅಥವಾ ಆಡಿಯೋ ರೆಕಾರ್ಡಿಂಗ್ ಬಿಡುಗಡೆಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸವಾಲು ಹಾಕಿರುವ ಡೆರೆಕ್ ಒಬ್ರೇನ್, ಇಂದು ಸಭೆಯ ಒಳಗೆ ಏನಾಯಿತು ಎಂಬುದು ಜನರಿಗೆ ತಿಳಿಯಲಿ, ಆಯೋಗಕ್ಕೆ ಧೈರ್ಯವಿದ್ದರೆ ನಾವು ಕೇಳಿದ್ದನ್ನು ಬಿಡುಗಡೆ ಮಾಡಲಿ ಎಂದು ಗುಡುಗಿದ್ದಾರೆ. ಚುನಾವಣಾ ಆಯೋಗವು ಸಭೆಯ ಆಯ್ದ ಭಾಗಗಳನ್ನು ತನಗೆ ಬೇಕಾದಂತೆ ಮಾಧ್ಯಮಗಳಿಗೆ ಸೋರಿಕೆ ಮಾಡಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದು, ಅನೌಪಚಾರಿಕ ಮಾರ್ಗಗಳ ಮೂಲಕ ಆಯೋಗವು ತನ್ನ ಪರವಾದ ನಿರೂಪಣೆಗಳನ್ನು ಪ್ರಸಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಇಂದು ಸಂಜೆ ಪತ್ರಿಕಾಗೋಷ್ಠಿ

ಈ ಘಟನೆಯನ್ನು ರಾಷ್ಟ್ರೀಯ ಮಟ್ಟದ ಪ್ರತಿಭಟನೆಯನ್ನಾಗಿ ರೂಪಿಸಲು ಇಂಡಿಯಾ ಒಕ್ಕೂಟ ನಿರ್ಧರಿಸಿದ್ದು, ಎಲ್ಲಾ ಸಮಾನ ಮನಸ್ಕ ಬಿಜೆಪಿ ವಿರೋಧಿ ಪಕ್ಷಗಳು ಒಗ್ಗೂಡಿ ಇಂದು ಸಂಜೆ 4:00 ರಿಂದ 4:30 ರ ಸುಮಾರಿಗೆ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಿವೆ ಎಂದು ಬ್ರಿಯಾನ್ ಮಾಹಿತಿ ನೀಡಿದ್ದಾರೆ. ಈ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಮಹಾಭಿಯೋಗ (Impeachment) ಪ್ರಕ್ರಿಯೆಯ ಒತ್ತಾಯದ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ(ಏಜೆನ್ಸೀಸ್​).