Jhalmuri Controversy | ಝಲ್ಮುರಿ ಸವಿದ ಮೋದಿ 
ದೇಶ

ಮೋದಿ ಸ್ನ್ಯಾಕ್ ಬ್ರೇಕ್ ಮಜಾ, ಸೊರೇನ್ ದಂಪತಿಗೆ ಹೆಲಿಕಾಪ್ಟರ್ ಸಜಾ!..ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಟಿಎಂಸಿ ಕಿಡಿ | Jhalmuri Controversy

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಝಲ್ಮುರಿ ತಿನ್ನುತ್ತಿದ್ದ ದೃಶ್ಯಗಳು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಪತ್ನಿ ಕಲ್ಪನಾ ಸೊರೇನ್​ರ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನ ಮಂತ್ರಿಯವರು ಜಾರ್ಗ್ರಾಮ್‌ನಲ್ಲಿ ತಮ್ಮ ಪೂರ್ವಸಿದ್ಧತಾ ಆಹಾರ ನಿಲುಗಡೆ ವೇಳಾಪಟ್ಟಿಯನ್ನು ವಿಸ್ತರಿಸಿದ್ದರಿಂದ ಹೇಮಂತ್ ಸೊರೇನ್ ಮತ್ತು ಅವರ ಪತ್ನಿ ಇಬ್ಬರೂ ರಾಂಚಿಗೆ ಮರಳಬೇಕಾಯಿತು ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಿಡಿಕಾರಿದೆ.
ಟಿಎಂಸಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಪ್ರಧಾನ ಸೇವಕರು ಝಲ್ಮುರಿ ತಿನ್ನಲು ಜಾರ್ಗ್ರಾಮ್‌ನಲ್ಲಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಲು ನಿರ್ಧರಿಸಿದ್ದರಿಂದ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಹಾಗೂ ಶಾಸಕಿ ಕಲ್ಪನಾ ಸೊರೆನ್​ಗೆ ಮೋದಿ ಇರುವಾಗ ಜಾರ್ಗ್ರಾಮ್‌ಗೆ ತಮ್ಮ ಹೆಲಿಕಾಪ್ಟರ್ ಹಾರಿಸಲು ಅನುಮತಿ ನಿರಾಕರಿಸಲಾಯಿತು ಎಂದು ಬರೆದುಕೊಂಡಿದೆ.
ಟಿಎಂಸಿ ಮೂಲಗಳ ಪ್ರಕಾರ, ಸೊರೆನ್ ದಂಪತಿಗಳು ಭಾನುವಾರ ಮಧ್ಯಾಹ್ನ ಜಾರ್ಗ್ರಾಮ್‌ನ ದಂತನ್ ಮತ್ತು ಕೇಶಿಯಾರಿಯಲ್ಲಿ ನಡೆಯಲಿರುವ ತೃಣಮೂಲ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಆಗಮಿಸಬೇಕಿತ್ತು, ಆದರೆ ಪ್ರಧಾನ ಮಂತ್ರಿಯವರ ಫೋಟೋಶೂಟ್​ ಪ್ರಜಾಪ್ರಭುತ್ವ ಹಕ್ಕುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿವೆ ಎಂದು ದೂರಿದೆ.
ಈ ಮೂಲಕ ನರೇಂದ್ರ ಮೋದಿಯವರ ಆದಿವಾಸಿ ವಿರೋಧಿ ಮನಸ್ಥಿತಿ ಎಲ್ಲರ ಮುಂದೂ ಬಹಿರಂಗವಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಇಬ್ಬರು ನಾಯಕರು ನೆಲಕಚ್ಚಿ ಗಂಟೆಗಟ್ಟಲೆ ಕಾಯುತ್ತಿದ್ದರು. ಅಂತಿಮವಾಗಿ ತಮ್ಮ ನಿಗದಿತ ಕಾರ್ಯಕ್ರಮವನ್ನು ಪೂರ್ಣಗೊಳಿಸದೆ ರಾಂಚಿಗೆ ಹಿಂತಿರುಗಬೇಕಾಯಿತು. ಏಕೆಂದರೆ ಪ್ರಧಾನ ಮಂತ್ರಿಯವರ ವಿಸ್ತೃತ ಉಪಾಹಾರ ವಿರಾಮ ಮತ್ತು ಫೋಟೋ ತೆಗೆದುಕೊಳ್ಳುವುದು ಅವರ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಸಾಂವಿಧಾನಿಕ ಸ್ಥಾನಮಾನಕ್ಕಿಂತ ಹೆಚ್ಚಿನ ಆದ್ಯತೆ ಪಡೆಯಿತು ಎಂದು ಟಿಎಂಸಿ ಹೇಳಿದೆ.

ಝಲ್ಮುರಿ ಸವಿದ ಮೋದಿ

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ರಸ್ತೆಬದಿಯ ಸಣ್ಣ ಅಂಗಡಿಯೊಂದಕ್ಕೆ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬಂಗಾಳದ ಅತ್ಯಂತ ಜನಪ್ರಿಯ ತಿಂಡಿಯಾದ ಝಲ್ಮುರಿ ಅಂಗಡಿಯ ಮುಂದೆ ನಿಂತ ಪ್ರಧಾನಿ, ಅಲ್ಲಿನ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತರು. ಅಂಗಡಿಯ ಮಾಲೀಕರು ಮೋದಿ ಸಮ್ಮುಖದಲ್ಲೇ ತಾಜಾ ಝಲ್ಮುರಿಯನ್ನು ಸಿದ್ಧಪಡಿಸಿದರು. ಇದನ್ನು ಕುತೂಹಲದಿಂದ ಗಮನಿಸಿದ ಪ್ರಧಾನಿ ಮೋದಿ ತಿಂಡಿಯ ರುಚಿ ನೋಡಿದರು.
ಇದು ಕೇವಲ ತಿಂಡಿ ಸವಿಯುವುದಕ್ಕೆ ಸೀಮಿತವಾಗದೆ, ಅಂಗಡಿಯ ಮಾಲೀಕರು ಮತ್ತು ಸುತ್ತಮುತ್ತಲ ನಿವಾಸಿಗಳೊಂದಿಗೆ ಅತ್ಯಂತ ಸಹಜವಾಗಿ ಸಂವಹನ ನಡೆಸಿದರು. ಅವರ ದೈನಂದಿನ ಜೀವನೋಪಾಯ ಮತ್ತು ಕೆಲಸದ ಬಗ್ಗೆ ವಿಚಾರಿಸಿದರು. ಈ ಅನಿರೀಕ್ಷಿತ ಭೇಟಿಯಿಂದ ಉತ್ತೇಜಿತರಾದ ಸ್ಥಳೀಯರು ಮೋದಿ, ಮೋದಿ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವ ಮೂಲಕ ಆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು. ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​​).