Jahangir Khan | ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಜಹಾಂಗೀರ್ ಖಾನ್ 
ದೇಶ

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್...ನೀನು ಸಿಂಘಂ ಆದ್ರೆ, ನಾನು ಪುಷ್ಪಾ ಎಂದಿದ್ದ ಪಾಲ್ತಾ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಕಣದಿಂದ ಔಟ್!​ | Jahangir Khan

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಅಖಾಡದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಜಹಾಂಗೀರ್ ಖಾನ್ (Jahangir Khan) ಮಂಗಳವಾರ ದಿಢೀರನೆ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಆಡಳಿತಾರೂಢ ಟಿಎಂಸಿ ಪಕ್ಷದ ಪ್ರಮುಖ ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ ಭದ್ರಕೋಟೆ ಎಂದೇ ಕರೆಯಲ್ಪಡುವ ಡೈಮಂಡ್ ಹಾರ್ಬರ್ ಲೋಕಸಭಾ ವ್ಯಾಪ್ತಿಯಲ್ಲೇ ಈ ಘಟನೆ ಸಂಭವಿಸಿರುವುದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಭಾರಿ ಆಘಾತ ತಂದಿಟ್ಟಿದೆ.
ಜಹಾಂಗೀರ್ ಖಾನ್ ಈ ದಿಢೀರ್ ನಿರ್ಧಾರದಿಂದಾಗಿ ಈಗ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ದೇಬಾಂಶು ಪಾಂಡಾ, ಕಾಂಗ್ರೆಸ್‌ನಿಂದ ಅಬ್ದುರ್ ರಜಾಕ್ ಮೊಲ್ಲಾ ಹಾಗೂ ಸಿಪಿಐ(ಎಂ) ಅಭ್ಯರ್ಥಿಯಾಗಿ ಶಂಭು ನಾಥ್ ಕುರ್ಮಿ ಮಾತ್ರ ಕಣದಲ್ಲಿ ಉಳಿದುಕೊಳ್ಳಲಿದ್ದಾರೆ.

ಸಂಪೂರ್ಣ ಮರುಮತದಾನಕ್ಕೆ ಆಯೋಗದ ಬಿಗಿ ಕ್ರಮ

ಕಳೆದ ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ಚುನಾವಣೆಯ ವೇಳೆ ಫಾಲ್ತಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಕ್ರಮಗಳು ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಗಂಭೀರ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗವು, ಕ್ಷೇತ್ರದ ಒಟ್ಟು 285 ಮತಗಟ್ಟೆಗಳಲ್ಲೂ ಮೇ 21 ರಂದು ಪೂರ್ಣ ಪ್ರಮಾಣದ ಮರುಮತದಾನ ನಡೆಸಲು ಆದೇಶಿಸಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ನಡುವೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗ ಸಜ್ಜಾಗಿದ್ದು, ಮೇ 24 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ವಿವಾದಕ್ಕೆ ಕಾರಣವಾಗಿತ್ತು ಆ ಒಂದು ಬಟನ್!

ಏಪ್ರಿಲ್‌ನಲ್ಲಿ ನಡೆದಿದ್ದ ಮತದಾನದ ವೇಳೆ ಫಾಲ್ತಾ ಕ್ಷೇತ್ರದಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ವಿಶೇಷವಾಗಿ ದೇಬಿಪುರದ ಮತಗಟ್ಟೆ ಸಂಖ್ಯೆ 177 ರಲ್ಲಿ ಇವಿಎಂ (EVM) ಯಂತ್ರದ ಮೇಲಿದ್ದ ಬಿಜೆಪಿ ಪಕ್ಷದ ಬಟನ್‌ಗೆ ಬಿಳಿ ಬಣ್ಣದ ಸ್ಟಿಕ್ಕರ್​ ಹಾಕಿ ಮುಚ್ಚಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಮತದಾರರು ತಮಗೆ ಮತ ನೀಡುವುದನ್ನು ತಡೆಯಲು ಈ ರೀತಿ ಕುತಂತ್ರ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಪಾಂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಪ್ರಮುಖ ಭಾಗವಾಗಿರುವ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಮತದಾನದ ಪ್ರಚಾರದ ಕಣವು ಚಿತ್ರರಂಗದ ಮಾಸ್ ಸಂಭಾಷಣೆಗಳಿಗೆ ಸಾಕ್ಷಿಯಾಗಿತ್ತು. ಫಾಲ್ತಾದಲ್ಲಿ ಹಾಲಿ ಸಂಸದ ಅಭಿಷೇಕ್ ಬ್ಯಾನರ್ಜಿ ಅನುಪಸ್ಥಿತಿಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮರುಮತದಾನದ ಪ್ರಚಾರದ ವೇಳೆ ತೃಣಮೂಲ ಕಾಂಗ್ರೆಸ್‌ನ (TMC) ಯಾವುದೇ ಪ್ರಮುಖ ಉನ್ನತ ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಕಾರಣ, ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಅಭಿಷೇಕ್ ಬ್ಯಾನರ್ಜಿ ಎಲ್ಲಿದ್ದಾರೆ? ಎಂದು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದರು.
ಇದೇ ವೇಳೆ ವಾರಾಂತ್ಯದ ಪ್ರಚಾರದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇರವಾಗಿ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್​ರನ್ನೇ ಗುರಿಯಾಗಿಸಿಕೊಂಡು ಪುಷ್ಪಾ ಎಲ್ಲಿದ್ದಾನೆ..? ಎಂದು ವ್ಯಂಗ್ಯವಾಗಿ ಕೇಳಿದ್ದು ರಾಜಕೀಯ ಸಂಚಲನ ಮೂಡಿಸಿತ್ತು.

ಅವರು ಸಿಂಘಂ ಆದ್ರೆ, ನಾನು ಪುಷ್ಪಾ!

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಜಹಾಂಗೀರ್ ಖಾನ್‌ನನ್ನು ಪುಷ್ಪಾ ಎಂದು ಕರೆಯುವುದರ ಹಿಂದೆ ಒಂದು ಸ್ವಾರಸ್ಯಕರ ಹಿನ್ನೆಲೆಯಿದೆ. ಚುನಾವಣೆಗೂ ಮುನ್ನ ಈ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾರನ್ನು ನೇಮಕ ಮಾಡಲಾಗಿತ್ತು. ಮತದಾನದ ದಿನದಂದು ಮತದಾರರನ್ನು ಬೆದರಿಸದಂತೆ ಎಚ್ಚರಿಕೆ ನೀಡಲು ಅಧಿಕಾರಿ ಶರ್ಮಾ ಖಾನ್ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಮಾತನಾಡಿದ್ದರು.
ಈ ಘಟನೆಯಿಂದ ಕೆರಳಿದ್ದ ಜಹಾಂಗೀರ್ ಖಾನ್, ಐಪಿಎಸ್ ಅಧಿಕಾರಿಗೆ ಬಹಿರಂಗ ಸವಾಲು ಹಾಕುತ್ತಾ, ಅವರು ಸಿಂಘಂ ಆಗಿದ್ದರೆ, ನಾನು ಪುಷ್ಪಾ ಎಂದು ಸಿನಿಮೀಯ ಶೈಲಿಯಲ್ಲಿ ಡೈಲಾಗ್ ಹೊಡೆದುಕೊಂಡಿದ್ದರು. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ಪುಷ್ಪಾ ಎಲ್ಲಿದ್ದಾನೆ? ಎಂದು ಕಾಲೆಳೆದಿದ್ದರು. ಬಂಗಾಳದ ಇತರ ಕ್ಷೇತ್ರಗಳ ಫಲಿತಾಂಶ ಈಗಾಗಲೇ ಮೇ 4 ರಂದೇ ಹೊರಬಿದ್ದಿದ್ದು, ಇದೀಗ ಫಾಲ್ತಾ ಕ್ಷೇತ್ರದ ಮರುಮತದಾನ ಇಡೀ ದೇಶದ ಗಮನ ಸೆಳೆದಿದೆ(ಏಜೆನ್ಸೀಸ್​​).