ಟಿಎಂಸಿ ದೊಡ್ಡ ಇಬ್ಬಾಗ: ಮಮತಾ ಉಚ್ಚಾಟನೆ, ನೂತನ ಚೇರ್ಮನ್ ಆಗಿ ಅರೂಪ್ ರಾಯ್ ಆಯ್ಕೆ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮೂರು ದಶಕಗಳ ಕಾಲ ಏಕಸ್ವಾಮ್ಯ ಹೊಂದಿದ್ದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ರಾಜಕೀಯ ಸಾಮ್ರಾಜ್ಯಕ್ಕೆ ಈಗ ಅವರದೇ ಪಕ್ಷದ ನಾಯಕರು ಮರಣಶಾಸನ ಬರೆದಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಮೇಲೆ ಪೂರ್ಣ ಹಿಡಿತ ಸಾಧಿಸಲು ಹೊಂಚು ಹಾಕುತ್ತಿದ್ದ ಬಂಡಾಯ ಶಾಸಕರ ನಾಯಕ ರಿತಬ್ರತಾ ಬ್ಯಾನರ್ಜಿ, ಸೋಮವಾರ ಹಿರಿಯ ಶಾಸಕ ಅರೂಪ್ ರಾಯ್(Arup Roy) ಅವರನ್ನು ಅಸಲಿ ಟಿಎಂಸಿಯ ನೂತನ ರಾಷ್ಟ್ರೀಯ ಅಧ್ಯಕ್ಷ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಪಕ್ಷದ ಸಂಸ್ಥಾಪಕಿ ಮಮತಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ 1998 ರಲ್ಲಿ ಮಮತಾ ಬ್ಯಾನರ್ಜಿ ಅವರು ರಕ್ತ ಕಣ್ಣೀರಿಟ್ಟು ಕಟ್ಟಿ ಬೆಳೆಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವು ಈಗ ಅವರ ಕೈಯಿಂದ ಸಂಪೂರ್ಣವಾಗಿ ಜಾರಿಹೋಗಿದೆ.
ಫೈವ್ ಸ್ಟಾರ್ ಹೋಟೆಲ್‌ನಲ್ಲಿ ದಂಗೆಯ ಕ್ಲೈಮ್ಯಾಕ್ಸ್!
ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲಿನ ಬಳಿಕ ಟಿಎಂಸಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಈಗ ತುತ್ತತುದಿಗೆ ತಲುಪಿದೆ. ಕೋಲ್ಕತಾದ ನ್ಯೂ ಟೌನ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಸೋಮವಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಭಾರಿ ಸಭೆ ನಡೆಯಿತು. ಈ ಸಭೆಯಲ್ಲಿ ಹೌರಾ ಸೆಂಟ್ರಲ್ ಕ್ಷೇತ್ರದ ಹಿರಿಯ ಶಾಸಕ ಅರೂಪ್ ರಾಯ್, ಪ್ರಭಾವಿ ನಾಯಕರಾದ ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಜಾವೇದ್ ಖಾನ್ ಸೇರಿದಂತೆ ಬರೋಬ್ಬರಿ 60ಕ್ಕೂ ಹೆಚ್ಚು ಶಾಸಕರು ಹಾಗೂ ಕೋಲ್ಕತಾ ಮಹಾನಗರ ಪಾಲಿಕೆಯ ನೂರಾರು ಕೌನ್ಸಿಲರ್‌ಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ದೀದಿ ನಾಯಕತ್ವವನ್ನು ತಿರಸ್ಕರಿಸಿ, ಧ್ವನಿ ಮತದ ಮೂಲಕ ಅರೂಪ್ ರಾಯ್ ಅವರನ್ನು ಹೊಸ ಬಾಸ್ ಆಗಿ ಆಯ್ಕೆ ಮಾಡಿದ್ದಾರೆ.
ಪಕ್ಷದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿತ್ತು
ತಮ್ಮ ಈ ದಂಗೆಯನ್ನು ಸಂವಿಧಾನದ ನಿಯಮಗಳ ಮೂಲಕ ರಿತಬ್ರತಾ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಮರುಚುನಾವಣೆ ಮೂಲಕ ರಚಿಸಬೇಕು. ಆದರೆ, 2022ರ ಫೆಬ್ರವರಿಯಲ್ಲಿ ರಚನೆಯಾಗಿದ್ದ ಸಮಿತಿಯ ಅವಧಿ ಮುಗಿದಿದ್ದರೂ ಮಮತಾ ಯಾವುದೇ ಹೊಸ ಸಮಿತಿ ರಚಿಸಿರಲಿಲ್ಲ. ಪಕ್ಷದ ನಾಯಕತ್ವ ಕಾನೂನುಬಾಹಿರವಾಗಿ ಮುಂದುವರಿದಿದ್ದರಿಂದ ನಾವು ಸಂವಿಧಾನ ಬದ್ಧವಾಗಿ ಪಕ್ಷವನ್ನು ಪುನರ್ ನಿರ್ಮಾಣ ಮಾಡಲು ಈ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಪರ್ಯಾಯ ಹೈಕಮಾಂಡ್ ಸಮಿತಿ ರಚನೆ:
ಸಭೆಯಲ್ಲಿ ಒಟ್ಟು 30 ಸದಸ್ಯರ ನೂತನ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರು: ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ರಥಿನ್ ಘೋಷ್, ಸಬೀನಾ ಯಾಸ್ಮಿನ್
ಪ್ರಧಾನ ಕಾರ್ಯದರ್ಶಿಗಳು: ರಿತಬ್ರತಾ ಬ್ಯಾನರ್ಜಿ, ಜಾವೇದ್ ಖಾನ್, ಸಂದೀಪನ್ ಸಹಾ
ಖಜಾಂಚಿ: ಅಖ್ರುಜ್ಜಮಾನ್ ಅನ್ಸಾರಿ
ಈ ಹೊಸ ಸಮಿತಿಯೇ ಇನ್ಮುಂದೆ ಅಧಿಕೃತ ತೃಣಮೂಲ ಕಾಂಗ್ರೆಸ್ ಆಗಿರಲಿದ್ದು, ಹಳೆಯ ನಾಯಕರು ಮಾಡಿರುವ ಆರ್ಥಿಕ ವ್ಯವಹಾರಗಳನ್ನು ತನಿಖೆ ಮಾಡಲು ಸ್ವತಂತ್ರ ಆಡಿಟರ್‌ಗಳನ್ನು ನೇಮಿಸುವುದಾಗಿ ಬಂಡಾಯ ಪಡೆ ಸಾರಿದೆ.
ವಿಧಾನಸಭೆ ಬೆನ್ನಲ್ಲೇ ಸಂಸತ್ತಿನಲ್ಲೂ ‘ದೀದಿ’ಗೆ ಭಾರಿ ಮುಖಭಂಗ!
15 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಇಂತಹ ಭೀಕರ ದಂಗೆ ನಡೆದಿಲ್ಲ. ಕೆಲವು ವಾರಗಳ ಹಿಂದಷ್ಟೇ ಬಹುತೇಕ ಶಾಸಕರು ಮಮತಾ ಅವರ ಆಪ್ತನನ್ನು ತಿರಸ್ಕರಿಸಿ, ರಿತಬ್ರತಾ ಬ್ಯಾನರ್ಜಿ ಅವರನ್ನು ವಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಸದ್ಯ ಬಂಡಾಯ ಪಾಳಯದಲ್ಲಿ 65 ಕ್ಕೂ ಹೆಚ್ಚು ಶಾಸಕರ ಬಲವಿದೆ.
ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೆ ದೆಹಲಿಯ ಸಂಸತ್ತಿನಲ್ಲೂ ಮಮತಾ ಅವರಿಗೆ ಭಾರಿ ಆಘಾತ ಎದುರಾಗಿದೆ. ಟಿಎಂಸಿಯ ಒಟ್ಟು 28 ಲೋಕಸಭಾ ಸಂಸದರ ಪೈಕಿ 20 ಜನ ಸಂಸದರು ಈಗಾಗಲೇ ಮಮತಾ ಕೈಬಿಟ್ಟು ಹೊರನಡೆದಿದ್ದಾರೆ. ಇವರೆಲ್ಲರೂ ಒಟ್ಟಾಗಿ ‘ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷದೊಂದಿಗೆ ವಿಲೀನಗೊಂಡಿದ್ದು, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರಿಂದಾಗಿ ಲೋಕಸಭೆಯಲ್ಲೂ ಮಮತಾ ಬ್ಯಾನರ್ಜಿ ಅವರ ಶಕ್ತಿ ಸಂಪೂರ್ಣ ಉಡುಗಿಹೋಗಿದೆ.
ಬಂಗಾಳದ ಅಧಿಪತಿ ಎನಿಸಿಕೊಂಡಿದ್ದ ಮಮತಾ ಇಂದು ತಮ್ಮದೇ ಮನೆಯಲ್ಲಿ ಪರಕೀಯರಾಗಿದ್ದಾರೆ. ಇಡೀ ಪಕ್ಷ ಹಾಗೂ ಚಿಹ್ನೆ ಈಗ ಬಂಡಾಯಗಾರರ ಪಾಲಾಗುತ್ತಿದ್ದು, ಬಂಗಾಳದ ರಾಜಕೀಯ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ,(ಏಜೆನ್ಸೀಸ್).