TMC 
ದೇಶ

TMCಗೆ ಭಾರೀ ಶಾಕ್: ₹440 ಕೋಟಿ ಇರುವ 3 ಬ್ಯಾಂಕ್ ಖಾತೆಗಳು ಫ್ರೀಜ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿ ಇದ್ದ ಸುಮಾರು ₹440 ಕೋಟಿ ಹಣದ ವ್ಯವಹಾರವನ್ನು ಪೊಲೀಸರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಬಂಡಾಯ ಶಾಸಕರು ನೀಡಿದ ದೂರಿನ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಖಾತೆಗಳ ಮೇಲೆ "ಡೆಬಿಟ್ ಫ್ರೀಜ್" ವಿಧಿಸಲಾಗಿದೆ. ಅಂದರೆ ಖಾತೆಯಿಂದ ಹಣವನ್ನು ತೆಗೆಯಲು ಅಥವಾ ಬೇರೆ ಖಾತೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಆದರೆ ಹೊಸ ಹಣ ಜಮೆಯಾಗಲು ಅವಕಾಶ ಇರುತ್ತದೆ.

10 ಶಾಸಕರಿಂದ ದೂರು

ವಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ಬೆಂಬಲಿಗರಾದ 10 ಮಂದಿ ಶಾಸಕರು ಬಿಧಾನನಗರ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾರೆ. ಖಾತೆಗಳಲ್ಲಿ ಜಮೆಯಾಗಿರುವ ಹಣ ಎಲ್ಲಿಂದ ಬಂದಿದೆ ಮತ್ತು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ದೂರಿನಲ್ಲಿ ಅಕ್ರಮ ಹಣ ಸಂಗ್ರಹ, ಸಾರ್ವಜನಿಕ ಹಣದ ದುರುಪಯೋಗ ಹಾಗೂ ಹಗರಣಗಳ ಹಣ ಈ ಖಾತೆಗಳಿಗೆ ಬಂದಿರಬಹುದೆಂಬ ಅನುಮಾನ ವ್ಯಕ್ತಪಡಿಸಲಾಗಿದೆ.

ಟಿಎಂಸಿಯಲ್ಲಿ ಒಳಜಗಳ ತೀವ್ರ

ಇತ್ತೀಚಿನ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಟಿಎಂಸಿಯಲ್ಲಿ ನಾಯಕತ್ವ ಮತ್ತು ಹಣಕಾಸಿನ ನಿಯಂತ್ರಣ ಕುರಿತಾಗಿ ಒಳಜಗಳ ಹೆಚ್ಚಾಗಿದೆ. ಮಾಜಿ ಸಚಿವ ಅರೂಪ್ ಬಿಸ್ವಾಸ್ ಹಾಗೂ ರಿತಬ್ರತಾ ಬ್ಯಾನರ್ಜಿ ಬಣಗಳ ನಡುವೆ ಅಧಿಕಾರದ ಪೈಪೋಟಿ ನಡೆಯುತ್ತಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆಯೇ ಅರೂಪ್ ಬಿಸ್ವಾಸ್ ಪಕ್ಷದ ಬ್ಯಾಂಕ್ ಖಾತೆಗಳ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗೆ ಪತ್ರ ಬರೆದಿದ್ದರು. ಪಕ್ಷದ ನಾಯಕತ್ವ ವಿವಾದ ಬಗೆಹರಿಯುವವರೆಗೆ ಹಣ ಬಳಕೆ ಮಾಡಬಾರದು ಎಂದು ಅವರು ಮನವಿ ಮಾಡಿದ್ದರು.

ಮಮತಾ ಬಣದ ಪ್ರತಿಕ್ರಿಯೆ

ಮಮತಾ ಬ್ಯಾನರ್ಜಿ ಬಣದ ನಾಯಕರು, ಅರೂಪ್ ಬಿಸ್ವಾಸ್ ಈಗ ಪಕ್ಷದ ಖಜಾಂಚಿ ಅಲ್ಲ ಎಂದು ಹೇಳಿದ್ದಾರೆ. ಜೂನ್ 5ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಭಾಶಿಶ್ ಚಕ್ರವರ್ತಿ ಅವರನ್ನು ಹೊಸ ಖಜಾಂಚಿಯಾಗಿ ನೇಮಕ ಮಾಡಲಾಗಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಟಿಎಂಸಿಯ ಒಳಜಗಳ ಈಗ ಹಣಕಾಸಿನ ತನಿಖೆಯ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ರಾಜಕೀಯ ಮಹತ್ವ ಪಡೆಯುವ ಸಾಧ್ಯತೆ ಇದೆ,(ಏಜೆನ್ಸೀಸ್​​).