ಚೆನ್ನೈ: ಮಧುರೈ ಬಳಿಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪತೂನ್ನಲ್ಲಿ ಒಂದು ಬಾರಿ ದೀಪ ಹಚ್ಚಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಧಿಕ್ಕರಿಸಿದೆ. ಮತ್ತು ಪ್ರತಿ ವರ್ಷದ ಸಂಪ್ರದಾಯದಂತೆ ಉಚಿಪಿಳ್ಳೈಯರ್ ದೇವಸ್ಥಾನದ ಬಳಿಯ ಸಾಂಪ್ರದಾಯಿಕ ಸ್ಥಳದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ.
ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ, ಟಿವಿಕೆ ಸರ್ಕಾರವು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದೆ ಎಂದು ಆರೋಪಿಸಿರುವ ಬಿಜೆಪಿ, ಟಿವಿಕೆ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದೆ. ಇತ್ತ ಸರ್ಕಾರದ ನಿರ್ಧಾರವನ್ನು ಅವರ ಮಿತ್ರ ಪಕ್ಷಗಳಾದ ಕಾಂಗ್ರೆಸ್, ವಿಸಿಕೆ ಹಾಗೂ ಎಡಪಕ್ಷಗಳು ಧಾರ್ಮಿಕ ಸಾಮರಸ್ಯವನ್ನು ರಕ್ಷಿಸಿದ್ದಾಗಿ ಶ್ಲಾಘಿಸಿವೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸರ್ಕಾರವು ತನ್ನ ಮೈತ್ರಿ ಪಾಲುದಾರರನ್ನು ಸಮಾಧಾನಪಡಿಸಲು ಕೋಟ್ಯಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ಉಚ್ಚಿಪಿಳ್ಳೈಯಾರ್ ದೇವಾಲಯದ ಬಳಿ ದೀಪ ಬೆಳಗುವ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ನೀಡಿದ ಹೇಳಿಕೆಯನ್ನು ಟೀಕಿಸಿರುವ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಉಲ್ಲಂಘಿಸಿದೆ. ಕಾನೂನು ಸಚಿವರು ಹೇಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಸಹ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಅಲ್ಪಸಂಖ್ಯಾತರನ್ನು ಓಲೈಸಲು ಮತ್ತು ಮುಂಬರುವ ಉಪಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರವು ಪತನಗೊಳ್ಳಲಿದೆ . ಡಿಎಂಕೆಗೆ ಆದ ಗತಿಯೇ ಈ ಸರ್ಕಾರಕ್ಕೂ ಬರಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮತ್ತೊಂದೆಡೆ, ಸಾಂಪ್ರದಾಯಿಕ ಸ್ಥಳದಲ್ಲಿ ದೀಪ ಬೆಳಗಿಸಲಾಗಿದ್ದು, ಹಬ್ಬವನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದವರು ನಿರಾಶೆಗೊಂಡಿದ್ದಾರೆ ಎಂದು ಟಿಎನ್ಸಿಸಿ ಮುಖ್ಯಸ್ಥ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ ಷಣ್ಮುಗಂ ಕೂಡ ಸರ್ಕಾರವನ್ನು ಶ್ಲಾಘಿಸಿದ್ದು, ಸಂಘ ಪರಿವಾರವು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್ ಅವರು, ಎಕ್ಸ್ನಲ್ಲಿ ಸಂಘ ಪರಿವಾರದ ಪಿತೂರಿಯನ್ನು ವಿಫಲಗೊಳಿಸಿದ್ದಕ್ಕಾಗಿ ಸಿಎಂ ವಿಜಯ್ ಅವರನ್ನು ಅಭಿನಂದಿಸಿದ್ದು, ಸರ್ಕಾರವು "ನ್ಯಾಯಾಂಗ ಭಯೋತ್ಪಾದನೆ"ಗೆ ಬಲಿಯಾಗಬಾರದು ಎಂದು ಒತ್ತಾಯಿಸಿದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ತಕ್ತವಾಗಿದೆ (ಏಜೆನ್ಸೀಸ್).