ತಿರುಪತಿ ತಿಮ್ಮಪ್ಪನ ದೇವಸ್ಥಾನ 
ದೇಶ

ತಿರುಪತಿ ವೈಕುಂಠ ದ್ವಾರ ದರ್ಶನ: ಮೊದಲ 3 ದಿನ ಇ-ಟೋಕನ್​ ಪಡೆದವರಿಗೆ ಮಾತ್ರ ಅವಕಾಶ, ಟಿಟಿಡಿ ಘೋಷಣೆ! Tirupati

ಪ್ರಮುಖ ಮುಖ್ಯಾಂಶಗಳು

  • ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ನೀಡಿದ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ
  • ವೈಕುಂಠ ಏಕಾದಶಿಯದಂದು ವೈಕುಂಠ ದ್ವಾರ ದರ್ಶನಕ್ಕೆ ವಿಶೇಷ ವ್ಯವಸ್ಥೆ
  • ಮೊದಲ ಮೂರು ದಿನ ಇ ಟೋಕನ್​ ಪಡೆದವರಿಗೆ ಮಾತ್ರ ಅವಕಾಶ
  • ಒಟ್ಟು 182 ಗಂಟೆಗಳ ದರ್ಶನದಲ್ಲಿ 164 ಗಂಟೆ ಸಾಮಾನ್ಯ ಭಕ್ತರಿಗೆ ಮೀಸಲು
ತಿರುಪತಿ: ತಿರುಮಲ ಬೆಟ್ಟದ ಮೇಲೆ ನೆಲೆಗೊಂಡಿರುವ ತಿರುಪತಿ ( Tirupati ) ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ನೀಡುವ ನಿಟ್ಟಿನಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ವೈಕುಂಠ ಏಕಾದಶಿಯ ಮೊದಲ ಮೂರು ದಿನಗಳು ಇ ಟೋಕನ್​ ಪಡೆದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಹತ್ತು ದಿನಗಳವರೆಗೆ ವೈಕುಂಠ ದ್ವಾರದ ಮೂಲಕ ದರ್ಶನ ನೀಡಲಾಗುವುದು ಎಂದು ಟಿಟಿಡಿ ಘೋಷಣೆ ಮಾಡಿದೆ. ಇದೇ ಡಿಸೆಂಬರ್ 30 ರಿಂದ ಮುಂದಿನ ವರ್ಷ ಜನವರಿ 8 ರವರೆಗೆ ಭಕ್ತರಿಗೆ ಈ ವಿಶೇಷ ದರ್ಶನ ಅವಕಾಶ ಲಭ್ಯವಿರುತ್ತದೆ. ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ, ಭಕ್ತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಹತ್ತು ದಿನಗಳ ವೈಕುಂಠ ಏಕಾದಶಿ ಅವಧಿಯ ಮೊದಲ ಮೂರು ದಿನಗಳಲ್ಲಿ (ಡಿಸೆಂಬರ್ 30, 31 ಮತ್ತು 2026 ಜನವರಿ 1) ಆನ್‌ಲೈನ್ ಇ-ಡಿಪ್ ವ್ಯವಸ್ಥೆಯ ಮೂಲಕ ಸರ್ವ ದರ್ಶನ ಟೋಕನ್‌ಗಳನ್ನು ಪಡೆದ ಭಕ್ತರಿಗೆ ಮಾತ್ರ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ.
ಮುಂಬರುವ ವೈಕುಂಠ ಏಕಾದಶಿ ಮತ್ತು ಹೊಸ ವರ್ಷದ ಸಂಭ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಟಿಟಿಡಿ ಟ್ರಸ್ಟ್ ಮಂಡಳಿಯು ಮಂಗಳವಾರ ತುರ್ತು ಸಭೆ ನಡೆಸಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು, ಜನಸಂದಣಿಯ ಒತ್ತಡವನ್ನು ನಿರ್ವಹಿಸಲು ಮತ್ತು ಸುಗಮ ದರ್ಶನವನ್ನು ಖಚಿತಪಡಿಸಿಕೊಳ್ಳಲು ಮೊದಲ ಮೂರು ದಿನಗಳನ್ನು ಆನ್‌ಲೈನ್ ಟೋಕನ್ ಹೊಂದಿರುವವರಿಗೆ ಮಾತ್ರ ಮೀಸಲಿಡಲಾಗುವುದು ಎಂದು ಹೇಳಿದರು.
ಆನ್‌ಲೈನ್ ಇ-ಡಿಪ್‌ಗಾಗಿ ನೋಂದಣಿಗಳು ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ತೆರೆದಿರುತ್ತವೆ ಮತ್ತು ಡಿಸೆಂಬರ್ 2 ರಂದು ಡಿಪ್ ಪ್ರಕ್ರಿಯೆಯ ಮೂಲಕ ಟೋಕನ್‌ಗಳನ್ನು ಹಂಚಲಾಗುತ್ತದೆ. ಇ-ಡಿಪ್ ಟೋಕನ್‌ಗಳನ್ನು ಹೊಂದಿರುವವರನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ದರ್ಶನಗಳನ್ನು ಮೊದಲ ಮೂರು ದಿನಗಳವರೆಗೆ ರದ್ದುಗೊಳಿಸಲಾಗುತ್ತದೆ. ಜನವರಿ 2 ರಿಂದ 8 ರವರೆಗೆ, ಟಿಕೆಟ್ ಅಥವಾ ಟೋಕನ್‌ಗಳಿಲ್ಲದ ಭಕ್ತರಿಗೆ ಎಂದಿನಂತೆ ಸರ್ವ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ನಿರ್ದೇಶನಗಳಿಗೆ ಅನುಗುಣವಾಗಿ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲಾಗುತ್ತದೆ. ಒಟ್ಟು ಎಂಟು ಲಕ್ಷ ವೈಕುಂಠ ದರ್ಶನ ಟೋಕನ್‌ಗಳನ್ನು ನೀಡಲಾಗುವುದು. ಹತ್ತು ದಿನಗಳಲ್ಲಿ ಒಟ್ಟು 182 ಗಂಟೆಗಳ ದರ್ಶನದಲ್ಲಿ 164 ಗಂಟೆಗಳನ್ನು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ ಎಂದು ನಾಯ್ಡು ಹೇಳಿದರು,
ಜನವರಿ 1 ರ ನಂತರದ ಏಳು ದಿನಗಳವರೆಗೆ, ಟಿಟಿಡಿ ಪ್ರತಿದಿನ 15,000 ವಿಶೇಷ ಪ್ರವೇಶ ದರ್ಶನ (300 ರೂ.) ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಇದರ ಜೊತೆಗೆ 1,000 ಶ್ರೀವಾಣಿ ಟ್ರಸ್ಟ್ ಲಿಂಕ್ಡ್ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ವೈಯಕ್ತಿಕವಾಗಿ ಭೇಟಿ ನೀಡುವ ಪ್ರೋಟೋಕಾಲ್ ಗಣ್ಯರನ್ನು ಹೊರತುಪಡಿಸಿ, ಈ ದಿನಗಳಲ್ಲಿ ಎಲ್ಲಾ ಶಿಫಾರಸು ಆಧಾರಿತ ದರ್ಶನಗಳನ್ನು ರದ್ದುಗೊಳಿಸಲಾಗುತ್ತದೆ. ತಿರುಮಲ ಸ್ಥಳೀಯರಿಗೆ, ಜನವರಿ 6, 7 ಮತ್ತು 8 ರಂದು ಪ್ರತಿದಿನ 5,000 ಸರ್ವ ದರ್ಶನ ಟೋಕನ್‌ಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ ಎಂದು ನಾಯ್ಡು ಹೇಳಿದರು, (ಏಜೆನ್ಸೀಸ್​).