ಪ್ರಮುಖ ಮುಖ್ಯಾಂಶಗಳು
ಅಮರಾವತಿ: ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ಪ್ರಸಾದದ ಲಡ್ಡುಗಳನ್ನು ತಯಾರಿಸಲು ಐದು ವರ್ಷ ಬಾತ್ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಬೆರೆತಿದ್ದ ಕಲಬೆರಕೆ ತುಪ್ಪ ಬಳಕೆ ಮಾಡಲಾಗಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಕಲಬೆರಕೆ ತುಪ್ಪವನ್ನು ಶ್ರೀಶೈಲಂ ದೇವಸ್ಥಾನಕ್ಕೂ ಪೂರೈಸಲಾಗುತ್ತಿತ್ತು. ಇದಲ್ಲದೆ ಪ್ರಾಣಿಗಳ ಕೊಬ್ಬನ್ನೂ ಬಳಕೆ ಮಾಡಲಾಗುತ್ತಿತ್ತು ಎಂದು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ವರದಿ ತಿಳಿಸಿರುವುದಾಗಿಯೂ ನಾಯ್ಡು ಹೇಳಿದರು. ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಾತ್ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳು ಬೆರೆತಿದ್ದ ಕಲಬೆರಕೆ ತುಪ್ಪ ಬಳಕೆ ಮಾಡಲಾಗಿತ್ತು ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಆಂಧ್ರದ ಕರ್ನಲು ಜಿಲ್ಲೆಯ ಕಲುಗೋಟಲ ಗ್ರಾಮದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, "ಹಿಂದಿನ ಸರ್ಕಾರ ಕಲಬೆರಕೆ ಲಡ್ಡು ಪ್ರಸಾದ ವನ್ನು ವಿತರಿಸುವ ಮೂಲಕ ವೆಂಕಟೇಶ್ವರ ಸ್ವಾಮಿಯ ಘನತೆ ಯನ್ನು ಕುಗ್ಗಿಸಲು ಪ್ರಯತ್ನಿಸಿದೆ. ವೈಎಸ್ಆರ್ಸಿಪಿ ಆಡಳಿತದ ಅವಧಿಯಲ್ಲಿ ಶ್ರೀಶೈಲ ದೇವಾಲಯಕ್ಕೂ ಕಲಬೆರಕೆ ತುಪ್ಪ ಪೂರೈಸಲಾಗಿತ್ತು. ಬಾತ್ ರೂಂ ಸ್ವಚ್ಛಗೊಳಿಸುವ ರಾಸಾಯನಿಕಗಳಿಂದ ತಯಾರಿಸಿದ ಕಲಬೆರಕೆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಲಾಗಿತ್ತು. ಹಿಂದಿನ ಸರ್ಕಾರದ 5 ವರ್ಷದ ಅವಧಿಯಲ್ಲೂ ರಾಸಾಯನಿಕ ಬೆರೆತಿದ್ದ ತುಪ್ಪವನ್ನು ಬಳಸಲಾಗಿತ್ತು" ಎಂದಿದ್ದಾರೆ.
"ಸಸ್ಯ ಜನ್ಯ ರಾಸಾಯನಿಕಗಳು ದುಬಾರಿ, ಆದರೆ ಪ್ರಾಣಿಗಳ ಕೊಬ್ಬಿನ ಬೆಲೆ ಕಡಿಮೆ. ಪ್ರಾಣಿಗಳ ಕೊಬ್ಬನ್ನು ತುಪ್ಪದಲ್ಲಿ ಬಳಸಲಾಗಿತ್ತು ಎಂದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ವರದಿ ನೀಡಿತ್ತು. ವೆಂಕಟೇಶ್ವರ ಸ್ವಾಮಿಯ ಪಾವಿತ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ನಾವು ಈ ವಿಚಾರವಾಗಿ ಹೆಚ್ಚು ಮಾತನಾಡಬಾರದು ಎಂದು ಚಂದ್ರಬಾಬು ನಾಯ್ಡು ತಿಳಿಸಿದರು. ಪ್ರಾಣಿಜನ್ಯ ಕೊಬ್ಬಿನ ಕಲಬೆರಕೆ ನಡೆದಿಲ್ಲ ಎಂದು ಸಿಬಿಐ ನೇತೃತ್ವದ ಎಸ್ಐಟಿ ಕ್ಲೀನ್ ಚಿಟ್ ನೀಡಿರುವುದಾಗಿ ವೈಎಸ್ಆರ್ಸಿಪಿ ನಾಯಕರು ವಾದಿಸುತ್ತಿದ್ದಾರೆ. ಆದರೆ ಕಲಬೆರಕೆ ನಡೆದಿದೆ ಎಂದು ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ವಿ. ಸುಬ್ಬಾರೆಡ್ಡಿ ಅವರೇ ಹೇಳಿದ್ದಾರೆ. ಕಲಬೆರಕೆ ತುಪ್ಪ ಬಳಕೆ ಮಾಡಿದ ಪ್ರಸಾದದಿಂದ ತಿರುಪತಿಯ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಇದನ್ನು ಸರಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ನಾಯ್ಡು ತಿಳಿಸಿದರು.