ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿನ ಆಡಳಿತರೂಢ ಡಿಎಂಕೆ ಸರ್ಕಾರ ಹಿನ್ನಡೆಯಾಗಿದ್ದು, ಮಧುರೈ ಪಕ್ಕದ ತಿರುಪರಂಕುಂದ್ರಂ(Tiruparankundram) ಬೆಟ್ಟದ ಮೇಲೆ ದೀಪ ಹಚ್ಚುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಇಂದು(ಜ. 06) ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಎತ್ತಿ ಹಿಡಿದಿದೆ.
ನ್ಯಾ. ಜಿ ಜಯಚಂದ್ರನ್ ಮತ್ತು ನ್ಯಾ. ಕೆ ಕೆ ರಾಮಕೃಷ್ಣನ್ ನೇತೃತ್ವದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಬೆಟ್ಟದ ಮೇಲೆ ದೀಪ ಹಚ್ಚುವುದರಿಂದ ಶಾಂತಿಗೆ ಭಂಗ ಆಗುತ್ತದೆ ಎಂಬ ರಾಜ್ಯ ಸರ್ಕಾರದ ಆತಂಕವನ್ನು ತಳ್ಳಿ ಹಾಕಿದೆ. ದೇವಸ್ತಾನದ ಪ್ರತಿನಿಧಿಗಳಿಗೆ ದೀಪ ಹಚ್ಚಲು ಅವಕಾಶ ನೀಡುವುದರಿಂದ ತೊಂದರೆಯಾಗುತ್ತದೆ ಎಂಬ ಸರ್ಕಾರದ ಭಯ ಹಾಸ್ಯಾಸ್ಪದ. ಅಂತಹ ಅಡಚಣೆಯನ್ನು ಸರ್ಕಾರವೇ ಪ್ರಾಯೋಜಿಸಿದರೆ ಮಾತ್ರ ಅದು ಸಂಭವಿಸಬಹುದು ಎಂದು ಕಿಡಿಕಾರಿದೆ.
ಗಲಭೆ ನಡೆಯುವ ಸಾಧ್ಯತೆಯನ್ನು ಉಲ್ಲೇಖಿಸಿ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗುವುದನ್ನು ನಿಲ್ಲಿಸುವುದು ಸರಿಯಲ್ಲ. ಶೈವರ ಆಗಮ ಶಾಸ್ತ್ರವು ಗರ್ಭಗುಡಿಯಲ್ಲಿ ದೇವರ ಮೇಲ್ಭಾಗದಲ್ಲಿ ನೇರವಾಗಿರದ ಸ್ಥಳದಲ್ಲಿ ದೀಪ ಹಚ್ಚುವುದನ್ನು ನಿಷೇಧಿಸುತ್ತದೆ ಎಂದು ತೋರಿಸಲು, ಪುರಾವೆಗಳನ್ನು ಒದಗಿಸಲು ಮೇಲ್ಮನವಿದಾರರರು ವಿಫಲರಾಗಿದ್ದಾರೆ. ಈ ಹಿನ್ನೆಲೆ ಏಕಸದಸ್ಯ ಪೀಠದ ಆದೇಶದಂತೆ ಬೆಟ್ಟದ ಮೇಲಿನ ದೀಪಥೂನ್ನಲ್ಲಿ ದೀಪ ಬೆಳಗಿಸಬೇಕು ಎಂದು ಹೇಳಿದೆ.
ಕಾರ್ತಿಕ ದೀಪೋತ್ಸವ ಸಮಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ತಮ್ಮ ತಂಡದೊಂದಿಗೆ ದೀಪಥೂನ್ನಲ್ಲಿ ದೀಪ ಬೆಳಗಿಸಬೇಕು. ಆದರೆ ಯಾವುದೇ ಸಾರ್ವಜನಿಕರಿಗೆ ಹೋಗಲು ಅನುನಮತಿಸಬಾರದು. ಜೊತೆಗೆ ಬೆಟ್ಟದ ಮೇಲಿನ ಸ್ಮಾರಕಗಳನ್ನು ರಕ್ಷಿಸಲು ಎಎಸ್ಐ ಜೊತೆ ಸಮಾಲೋಚಿಸಬೇಕು. ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ಸಂಘಟಿಸಿ, ಮೇಲ್ವಿಚಾರಣೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಏನಿದು ತಿರುಪನಕುಂದ್ರ ಕಾರ್ತಿಕ ದೀಪಂ ವಿವಾದ
ತಿರುಪನಕುಂದ್ರಂನಲ್ಲಿರುವ ಪ್ರಸಿದ್ದ ಗುಹಾಂತರ ಮುರುಗನ್ ದೇವಾಲಯದಲ್ಲಿ ಪ್ರತಿವರ್ಷದಂತೆ ಕಾರ್ತಿಕ ದೀಪಂ ಹಬ್ಬವನ್ನು ಆಚರಿಸಲಾಗ್ತಿದೆ. ಬೆಟ್ಟದ ಮೇಲೆ ಒಂದು ದೀಪಥೂನ್ ಇದೆ. ಅಲ್ಲಿಂದ 50 ಮೀಟರ್ ದೂರದಲ್ಲಿ ಮತ್ತೊಂದು ದರ್ಗಾವಿದೆ. 1920ರಿಂದ ಬೆಟ್ಟದ ಮೇಲಿನ ಮಾಲಿಕತ್ವದ ಬಗ್ಗೆ ಹಿಂದೂ-ಮುಸ್ಲಿಂ ನಡುವೆ ವಿವಾದವಿದೆ ಎನ್ನಲಾಗಿದೆ.
ಇತ್ತೀಚೆಗೆ ಕಾರ್ತಿಕ ದೀಪಂ ಹಬ್ಬದಲ್ಲಿ ಬೆಟ್ಟದ 'ದೀಪಥೂನ್' ಸ್ತಂಭದಲ್ಲಿ ಭಕ್ತರಿಗೆ 'ದೀಪ' ಬೆಳಗಲು ಅವಕಾಶ ನೀಡುವಂತೆ ಕೋರಿ ಹಿಂದೂ ತಮಿಳರ್ ಕಚ್ಚಿ ಸಂಸ್ಥಾಪಕ ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಡಿ. 01ರಂದು ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ ಸ್ವಾಮಿನಾಥನ್ ಬೆಟ್ಟದ ಮೇಲೆ ದೀಪ ಬೆಳಗಲು ಅವಕಾಶ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಸಮಾಜದ ಶಾಂತಿಭಂಗದ ನೆಪವೊಡ್ಡಿ ತಮಿಳುನಾಡು ಸರ್ಕಾರ ಡಿ. 03ರಂದು ನಡೆದ ಕಾರ್ತಿಕ ದೀಪಂ ಹಬ್ಬದ ವೇಳೆ ಬೆಟ್ಟದ ಮೇಲೆ ದೀಪ ಹಚ್ಚದೇ ಪ್ರತಿ ವರ್ಷ ನಡೆದು ಬಂದ ರೀತಿಯಲ್ಲಿ ದೇವಾಲಯದಲ್ಲಿ ಮಾತ್ರ ದೀಪ ಬೆಳಗಿಸಿತ್ತು. ಈ ಕ್ರಮವನ್ನು ಖಂಡಿಸಿದ್ದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ದೇವಾಲಯದ ಆಡಳಿತ ಮಂಡಳಿ ಪ್ರತಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಬೆಟ್ಟದ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಹೈಕೋರ್ಟ್ ಏಕಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಜೊತೆಗೆ ನ್ಯಾಯಾಲಯದ ಆದೇಶದ ಪಾಲಿಸದ ಅಧಿಕಾರಿಗಳ ವಿರುದ್ದ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆಯ ಅರ್ಜಿಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು (ಏಜೆನ್ಸೀಸ್).