ತಿರುಮಲ : ಗೋವಿಂದಾ... ಗೋವಿಂದಾ... ಎಂಬ ನಾಮಸ್ಮರಣೆಯೊಂದಿಗೆ ತಿರುಮಲ ಬೆಟ್ಟ ಏರುವ ಭಕ್ತರು, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಬಳಿಕ ಹುಂಡಿಗೆ ತಮ್ಮ ಕೈಲಾದ ಕಾಣಿಕೆಯನ್ನು ಸಮರ್ಪಿಸುತ್ತಾರೆ. ತಿರುಮಲದಲ್ಲಿ ಶ್ರೀವಾರಿಯ ದರ್ಶನ ಪಡೆಯುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಹುಂಡಿ ಆದಾಯವೂ ಹೊಸ ದಾಖಲೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕೇವಲ 9 ತಿಂಗಳಲ್ಲಿ ಸಂಗ್ರಹವಾದ ಕಾಣಿಕೆಯಿಂದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಹುಂಡಿ ಆದಾಯದಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ.
ತಿರುಮಲ ತಿರುಪತಿ ದೇವಸ್ಥಾನ (TTD) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ 9 ತಿಂಗಳಲ್ಲಿ ಹುಂಡಿಗೆ 1,129.04 ಕೋಟಿ ಕಾಣಿಕೆ ಸಂಗ್ರಹವಾಗಿದೆ. ತಿರುಮಲಕ್ಕೆ ಪ್ರತಿದಿನ ಹರಿದುಬರುವ ಭಕ್ತ ಸಾಗರ ಮತ್ತು ಅವರು ಶ್ರೀವಾರಿಗೆ ಸಮರ್ಪಿಸುವ ಕಾಣಿಕೆಯ ಪ್ರಮಾಣವೇ ಈ ದಾಖಲೆ ಮೊತ್ತಕ್ಕೆ ಪ್ರಮುಖ ಕಾರಣವಾಗಿದೆ.
ಈ ವರ್ಷದ ಜುಲೈ ತಿಂಗಳು ತಿರುಮಲದ ಹುಂಡಿ ಆದಾಯಕ್ಕೆ ವಿಶೇಷವಾಗಿತ್ತು. ಒಂದೇ ತಿಂಗಳಲ್ಲಿ 140.28 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಇದು TTD ಇತಿಹಾಸದಲ್ಲೇ ಅತ್ಯಧಿಕ ಮಾಸಿಕ ಹುಂಡಿ ಆದಾಯಗಳಲ್ಲಿ ಒಂದಾಗಿದೆ.
ಜುಲೈ ಬಳಿಕ ಆಗಸ್ಟ್ ತಿಂಗಳಲ್ಲೂ ಭಕ್ತರ ಕಾಣಿಕೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಆಗಸ್ಟ್‌ನಲ್ಲಿ ಹುಂಡಿಗೆ 137.44 ಕೋಟಿ ಆದಾಯ ಹರಿದುಬಂದಿದೆ. ಅಂದರೆ ಸತತ ಎರಡು ತಿಂಗಳಲ್ಲೇ 277 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಇನ್ನು ಅಚ್ಚರಿ ಮೂಡಿಸುವ ಮತ್ತೊಂದು ಅಂಕಿ ಎಂದರೆ, ಸೆಪ್ಟೆಂಬರ್‌ನ ದೀರ್ಘ ರಜೆಗಳ ಅವಧಿಯಲ್ಲಿ ಕೇವಲ ಒಂದೇ ದಿನದಲ್ಲಿ 6.93 ಕೋಟಿ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಒಂದೇ ದಿನ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಹರಿದುಬಂದಿರುವುದು ತಿರುಮಲದ ಭಕ್ತರ ನಂಬಿಕೆಯ ಆಳವನ್ನು ತೋರಿಸುತ್ತದೆ.
ಕೋವಿಡ್ ಬಳಿಕ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಗಮನಾರ್ಹ ಏರಿಕೆಯಾಗಿದೆ. ಈ ಹಿಂದೆ ಸರಾಸರಿ 20 ಲಕ್ಷದಷ್ಟಿದ್ದ ಭಕ್ತರ ಸಂಖ್ಯೆ 24.5 ಲಕ್ಷದವರೆಗೆ ಏರಿಕೆಯಾಗಿದೆ. ವ್ಯವಸ್ಥಿತ ಕ್ಯೂ ನಿರ್ವಹಣೆ ಹಾಗೂ ದರ್ಶನ ವ್ಯವಸ್ಥೆಯ ಸುಧಾರಣೆಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ದರ್ಶನದ ಬಳಿಕ ಹುಂಡಿಗೆ ಕಾಣಿಕೆ ಸಲ್ಲಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿರುವುದರಿಂದ ದೇವಸ್ಥಾನದ ಹುಂಡಿ ಆದಾಯದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ.
ತಿರುಮಲದ ಹುಂಡಿಗೆ ಸೇರುತ್ತಿರುವ ಕೋಟ್ಯಂತರ ರೂಪಾಯಿ ಕೇವಲ ಹಣದ ಲೆಕ್ಕವಲ್ಲ. ಪ್ರತಿಯೊಂದು ನಾಣ್ಯ, ಪ್ರತಿಯೊಂದು ನೋಟಿನ ಹಿಂದೆ ಒಬ್ಬ ಭಕ್ತನ ಹರಕೆ, ನಂಬಿಕೆ ಮತ್ತು ಪ್ರಾರ್ಥನೆ ಅಡಗಿದೆ. 9 ತಿಂಗಳಲ್ಲಿ 1,129 ಕೋಟಿ. ಒಂದೇ ದಿನ 6.93 ಕೋಟಿ. ತಿರುಮಲದ ಹುಂಡಿಯಲ್ಲಿ ದಾಖಲಾಗುತ್ತಿರುವ ಈ ಅಂಕಿಗಳು ಶ್ರೀವಾರಿಯ ಮೇಲಿನ ಕೋಟ್ಯಂತರ ಭಕ್ತರ ಅಚಲ ನಂಬಿಕೆಗೆ ಮತ್ತೊಂದು ಸಾಕ್ಷಿಯಾಗಿ ನಿಂತಿವೆ, (ಏಜೆನ್ಸೀಸ್).