ನಮ್ಮ ರಿಯಲ್​ ಟಾರ್ಗೆಟ್ ಇದ್ದಿದ್ದು... ಕೊನೇ ಕ್ಷಣದಲ್ಲಿ ಪ್ಲ್ಯಾನ್​ ಬದಲಾದ ಬಗ್ಗೆ ಸತ್ಯ ಬಾಯ್ಬಿಟ್ಟ ಆರೋಪಿಗಳು | Tiger Shroff  
ದೇಶ

ನಮ್ಮ ರಿಯಲ್​ ಟಾರ್ಗೆಟ್ ಇದ್ದಿದ್ದು... ಕೊನೇ ಕ್ಷಣದಲ್ಲಿ ಪ್ಲ್ಯಾನ್​ ಬದಲಾದ ಬಗ್ಗೆ ಸತ್ಯ ಬಾಯ್ಬಿಟ್ಟ ಆರೋಪಿಗಳು | Tiger Shroff

ಆರಂಭದಲ್ಲಿ ಶ್ರಾಫ್​ ಹತ್ಯೆಗೈಯಲು ನಡೆಸಿದ ಗುಂಡಿನ ದಾಳಿ ಬಂದೂಕಿನಿಂದ ವಿಫಲಗೊಂಡ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತರು. ಆದರೆ, ಮುಂಬೈ ಪೊಲೀಸರ 15 ತಂಡಗಳು, ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್ ಕಡೆಯವರಾದ ಮೂವರನ್ನು ಬಂಧಿಸಿ, ಇದೀಗ ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಮೂವರು ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ತನಿಖೆಯಲ್ಲಿ ಆರೋಪಿಗಳು ಶಾಕಿಂಗ್ ವಿಷಯಗಳನ್ನೇ ಹಂಚಿಕೊಂಡಿರುವುದು ಇದೀಗ ಪೊಲೀಸರಿಗೆ ತೀವ್ರ ಗೊಂದಲ ಮೂಡಿಸಿದೆ.

ಆರಂಭದಲ್ಲಿ ಶ್ರಾಫ್​ ಹತ್ಯೆಗೈಯಲು ನಡೆಸಿದ ಗುಂಡಿನ ದಾಳಿ ಬಂದೂಕಿನಿಂದ ವಿಫಲಗೊಂಡ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತರು. ಆದರೆ, ಮುಂಬೈ ಪೊಲೀಸರ 15 ತಂಡಗಳು, ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್ ಕಡೆಯವರಾದ ಮೂವರನ್ನು ಬಂಧಿಸಿ, ಇದೀಗ ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದ್ದು, ನಮ್ಮ ಅಸಲಿ ಟಾರ್ಗೆಟ್​ ಟೈಗರ್ ಶ್ರಾಫ್ ಆಗಿರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.

ನಮ್ಮ ಟಾರ್ಗೆಟ್​ ಬಾಲಿವುಡ್​ನ ಬೇರೊಬ್ಬ ನಟನ ಮೇಲಿತ್ತು. ಆದರೆ, ಮುಂಬೈಗೆ ಬಂದ ನಂತರ ಆ ವ್ಯಕ್ತಿಯನ್ನು ಟ್ರೇಸ್​ ಮಾಡುವುದು ನಮಗೆ ಕಷ್ಟಸಾಧ್ಯ ಎಂಬುದು ಗೊತ್ತಾಯಿತು. ಅದಕ್ಕೆ, ತಕ್ಷಣವೇ ನಾವು ಹಾಕಿಕೊಂಡ ಪ್ಲ್ಯಾನ್​ ಅನ್ನು ಬದಲಾಯಿಸಿದೆವು. ಅವರ ಬದಲಿಗೆ ಟೈಗರ್​ ಶ್ರಾಫ್​ ಮೇಲೆ ಕಣ್ಣಿಟ್ಟೆವು. ಅವರ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಫ್ಯಾನ್ಸ್ ಪೇಜ್​ಗಳು ಹಂಚಿಕೊಂಡಿದ್ದ ಪೋಸ್ಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದೆವು ಎಂದಿದ್ದಾರೆ.

ಟೈಗರ್ ಶ್ರಾಫ್ ಅವರ ಚಲನವಲನಗಳ ಬಗ್ಗೆ ತಿಳಿದುಕೊಂಡ ನಂತರವೇ, ಅವರು ಯಾವ ಕಡೆಗೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ನಾವು ಮಾಹಿತಿ ಕಲೆಹಾಕಿದೆವು. ಶ್ರಾಫ್​ಗೆ ಯಾವುದೇ ಭದ್ರತೆ ಇಲ್ಲವೆಂಬುದು ನಮ್ಮ ಗಮನಕ್ಕೆ ಬಂದಿತು. ವಿಶೇಷವಾಗಿ, ಮುಂಬೈನ ಜುಹುದಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಟೈಗರ್ ಪ್ರತಿ ಭಾನುವಾರ ಬರುತ್ತಾರೆ ಎಂಬ ವಿಷಯವನ್ನು ಅಭಿಮಾನಿಗಳ ಪೋಸ್ಟ್‌ಗಳ ಮೂಲಕ ಪತ್ತೆಹಚ್ಚಿದೆವು. ನಟನ ಚಲನವಲನಗಳ ಮೇಲೆ ನಿಗಾ ಇಡಲು ಅವರ ಅಭಿಮಾನಿಗಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಆಗಾಗ್ಗೆ ಚೆಕ್​ ಮಾಡಿದ್ದೆವು ಎಂದು ಆರೋಪಿಗಳು ಬಾಯ್ಬಿಟ್ಟಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಏನಿದು ಘಟನೆ?

ದಾಳಿಕೋರರು ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಒಟ್ಟು ಐದು ಸುತ್ತುಗಳ ಗುಂಡುಗಳನ್ನು ಹಾರಿಸಿದರು. ಆದರೆ, 6ನೇ ಹಾಗೂ ಅಂತಿಮ ಸುತ್ತಿನ ಗುಂಡು ಹಾರಿಸಲು ಕಾರಿನ ಹತ್ತಿರ ಬಂದಾಗ ದುಷ್ಕರ್ಮಿಯ ಬಂದೂಕು (ಗನ್) ಅನಿರೀಕ್ಷಿತವಾಗಿ ಜ್ಯಾಮ್ ಆಗಿದೆ. ಈ ತಾಂತ್ರಿಕ ದೋಷದಿಂದಾಗಿ ಟೈಗರ್​ ಶ್ರಾಫ್​ ಮತ್ತಷ್ಟು ಅಪಾಯದಿಂದ ಬಚಾವ್​ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿತು. ಸಿಸಿಟಿವಿ ದೃಶ್ಯಾವಳಿಗಳಲ್ಲೂ ಸಹ ಶೂಟರ್ ಹತ್ತಿರದಿಂದ ಗುಂಡು ಹಾರಿಸಲು ಯತ್ನಿಸುತ್ತಿರುವಾಗ ಗನ್ ಕೈಕೊಟ್ಟಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ದಾಳಿಯ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ಡ್ರೈವರ್ ಫಿರ್ದೌಸ್ ಅವರಿಗೆ ಗಾಯಗಳಾಗಿದ್ದು, ದಾಳಿಕೋರರು ಮೂರನೇ ವ್ಯಕ್ತಿ ಸಿದ್ಧಪಡಿಸಿಟ್ಟಿದ್ದ ಬೈಕ್‌ನಲ್ಲಿ ಪರಾರಿಯಾದರು. ಕೇವಲ 18 ಸೆಕೆಂಡುಗಳ ವಿಡಿಯೋದಲ್ಲಿ ಡ್ರೈವರ್ ಗಾಯಗೊಂಡು ಕಾರಿನಿಂದ ಓಡಿಹೋಗುವುದು ಮತ್ತು ದಾಳಿಕೋರರು ಬೈಕ್‌ನಲ್ಲಿ ಪರಾರಿಯಾಗುವ ದೃಶ್ಯಗಳಿವೆ. ಮುಂಬೈ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).