Railway Corruption (ಚಿತ್ರ X) 
ದೇಶ

ವಂದೇ ಭಾರತ್‌ನಲ್ಲಿ ಟಿಕೆಟ್ ದಂಧೆ: 700 ರೂ. ಸೀಟು 380 ಕ್ಕೆ ಡೀಲ್ ಕುದುರಿಸುತ್ತಿದ್ದ ರೈಲ್ವೆ ಅಧಿಕಾರಿಗೆ ಗೇಟ್ ಪಾಸ್! Railway Corruption

ನವದೆಹಲಿಭಾರತದ ಹೈಟೆಕ್ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಡಿಮೆ ದರಕ್ಕೆ ಅನಧಿಕೃತವಾಗಿ ಟಿಕೆಟ್ ನೀಡಿ ಹಣ ಮಾಡುತ್ತಿರುವ (Railway Corruption) ಟಿಕೆಟ್ ಪರೀಕ್ಷಕನ ವಿಡಿಯೋ ವೈರಲ್ ಆಗಿದ್ದು ಈ ಅಕ್ರಮವನ್ನು ಗಂಭೀರವಾಗಿ ತೆಗೆದುಕೊಂಡಿರುವ ಇಲಾಖೆ, ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರಿಯನ್ನು ಅಮಾನತುಗೊಳಿಸಿದೆ.

ಘಟನೆ ಏನು?

ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ರೈಲ್ವೆ ಅಧಿಕಾರಿಯೊಬ್ಬರು ರೈಲು ಕೋಚ್​ನೊಳಗೆ ಪ್ರಯಾಣಿಕರೊಂದಿಗೆ ಟಿಕೆಟ್ ವ್ಯವಸ್ಥೆ ಮಾಡುವ ಕುರಿತು ಗುಟ್ಟಾಗಿ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಸಂಭಾಷಣೆಯ ಪ್ರಕಾರ, ಆ ನಿರ್ದಿಷ್ಟ ಪ್ರಯಾಣಕ್ಕೆ ಅಧಿಕೃತವಾಗಿ ರೂ. 700 ದರ ಇತ್ತು. ಆದರೆ, ಟಿಟಿಇ ಕೇವಲ ರೂ. 380 ನೀಡಿದರೆ ಸೀಟು ವ್ಯವಸ್ಥೆ ಮಾಡಿಕೊಡುವುದಾಗಿ ಪ್ರಯಾಣಿಕರಿಗೆ ತಿಳಿಸಿದ್ದಾರೆ.
ಈ ವೇಳೆ ಅಲ್ಲಿದ್ದ ಸಹ ಪ್ರಯಾಣಿಕರು ಈ ಕುರಿತು ಟಿಟಿಗೆ ಪ್ರಶ್ನೆ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಯಾಣಿಕರಿಗೆ ವಿನಂತಿಯನ್ನು "ಅನುಮತಿಸಲಾಗಿಲ್ಲ" ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಈ ಕೃತ್ಯವು ನಿಯಮಬಾಹಿರ ಎಂಬುದು ಸ್ವತಃ ಟಿಟಿಇಗೆ ತಿಳಿದಿದ್ದರೂ, ಅವರು ಪ್ರಯಾಣಿಕರನ್ನು ನಿಯಮಿತ ಬುಕಿಂಗ್ ಚಾನೆಲ್‌ಗಳ ಮೂಲಕ ಟಿಕೆಟ್ ಪಡೆಯಲು ಹೇಳುವ ಬದಲು ಕಡಿಮೆ ಮೊತ್ತಕ್ಕೆ ವೈಯಕ್ತಿಕವಾಗಿ ಹಣ ಪಡೆದು ಪ್ರಯಾಣಕ್ಕೆ ಅನುವು ಮಾಡಿಕೊಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿದ್ದಂತೆಯೇ ಶೀಘ್ರವಾಗಿ ಆಕ್ರೋಶಕ್ಕೆ ಕಾರಣವಾಯಿತು. ರೈಲ್ವೆ ಸೇವಾ ಮತ್ತು ಡಿಆರ್​ಎಂ ದಾನಾಪುರ ವಿಭಾಗ ಸೇರಿದಂತೆ ರೈಲ್ವೆ ಅಧಿಕಾರಿಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟಿಟಿಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಅನೇಕ ಬಳಕೆದಾರರು ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗದ ಆರೋಪವನ್ನು ಕಟುವಾಗಿ ಟೀಕಿಸಿದ್ದಾರೆ. ಇನ್ನೂ ಕೆಲವರು ಇಂತಹ ಹೊಂದಾಣಿಕೆಯನ್ನು ಹಳೆಯ ರೈಲ್ವೆ ಪದ್ಧತಿಗಳಿಗೆ ಹಿಂತಿರುಗುವಿಕೆ ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ಟಿಟಿಇ ಕೇವಲ ಪ್ರಯಾಣಿಕರಿಗೆ "ಸಹಾಯ" ಮಾಡುತ್ತಿದ್ದಾನೆ ಎಂದು ಅಧಿಕಾರಿಯ ಪರ ಮಾತನಾಡಿದ್ದಾರೆ. 
ಆದಾಗ್ಯೂ, ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಮತ್ತು ದರ ಸಂಗ್ರಹವನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊಂದಿದೆ. ವೇಟಿಂಗ್​​ ಲಿಸ್ಟ್​ನಲ್ಲಿರುವ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವುದು ಅಥವಾ ಖಾಲಿ ಸೀಟುಗಳನ್ನು ನಿಯೋಜಿಸುವಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಟಿಟಿಇಗಳು ಆನ್​ಬೋರ್ಡ್​ ಟಿಕೆಟ್​ಗಳನ್ನು ನೀಡುವ ಅಧಿಕಾರವನ್ನು ಹೊಂದಿದ್ದರೂ ನಿಗದಿತ ಕಾರ್ಯವಿಧಾನಗಳು ಅಥವಾ ದರ ರಚನೆಗಳಿಂದ ಯಾವುದೇ ವಿಚಲನವನ್ನು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ (ಏಜೆನ್ಸೀಸ್​).