ಮಿಕ್ಸ್ಚರ್ ತಿನ್ನುವಾಗ ಗಂಟಲಿನಲ್ಲಿ ಕಡಲೇ ಬೀಜ ಸಿಲುಕಿ ಮೂರು ವರ್ಷದ ಕಂದಮ್ಮ ದುರಂತ ಸಾವು! Peanut Stuck In Throat
- ಗಂಟಲಿನಲ್ಲಿ ಕಡಲೇ ಬೀಜ ಸಿಲುಕಿ ಮೂರು ವರ್ಷದ ಕಂದಮ್ಮ ದುರಂತ ಅಂತ್ಯ
- ಮಿಕ್ಸ್ಚರ್ ತಿನ್ನುವಾಗ ಗಂಟಲಿಗೆ ಕಡಲೇ ಬೀಜ ಸಿಲುಕಿ ಪುಟ್ಟ ಬಾಲಕ ಸಾವು
- ಇಡೀ ಕುಟುಂಬದ ಸಂತೋಷವನ್ನು ಕಸಿದುಕೊಂಡ ಕೇವಲ ಒಂದು ಸಣ್ಣ ಕಡಲೇ ಬೀಜ
- ಕೇರಳದ ಮಲಪ್ಪುರಂನ ಕೊಂಡೋಟಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆ
Peanut Stuck In Throat : ಆಟವಾಡುತ್ತಾ, ನಗುತ್ತಾ ಮನೆಯ ತುಂಬಾ ಬೆಳಕಾಗಬೇಕಿದ್ದ ಆ ಮುದ್ದಾದ ಕಂದನ ಮುಖದಲ್ಲಿ ಈಗ ಶಾಶ್ವತ ಮೌನ ಆವರಿಸಿದೆ. ತಂದೆ-ತಾಯಿಯ ಆಶಾದೀಪವಾಗಿದ್ದ ಆ ಪುಟ್ಟ ಬಾಲಕನ ಬದುಕು ಹೀಗೆ ಕ್ಷಣಾರ್ಧದಲ್ಲಿ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೇವಲ ಒಂದು ಸಣ್ಣ ಕಡಲೇ ಬೀಜ ಇಡೀ ಕುಟುಂಬದ ಸಂತೋಷವನ್ನು ಕಸಿದುಕೊಂಡು, ಎಂದಿಗೂ ಮರೆಯದ ಕತ್ತಲನ್ನು ತುಂಬುತ್ತದೆ ಎಂಬುದು ವಿಧಿಯ ಕ್ರೂರ ಆಟವೇ ಸರಿ. ಕೇರಳದ ಮಲಪ್ಪುರಂನ ಕೊಂಡೋಟಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
ಮಲಪ್ಪುರಂ ಜಿಲ್ಲೆಯ ಕುನ್ನುಂಪುರಂನ ಚೆಂಗಣಿ ನಿವಾಸಿಗಳಾದ ಮುನೀರ್ ಮತ್ತು ಫರ್ಸಿನಾ ದಂಪತಿಯ ಮೂರು ವರ್ಷದ ಮುದ್ದಾದ ಮಗ ಮುಹಮ್ಮದ್ ರಿಝಾನ್ ಈ ದುರಂತಕ್ಕೆ ಬಲಿಯಾದ ದುರ್ದೈವಿ.
ಸೋಮವಾರ ಬೆಳಗ್ಗೆ ಮನೆಯಲ್ಲಿ ಮಗುವಿಗೆ ತಿನ್ನಲು ನೀಡಲಾಗಿದ್ದ ಮಿಕ್ಸ್ಚರ್ ಸೇವಿಸುತ್ತಿದ್ದಾಗ, ಅದರಲ್ಲಿನ ಕಡಲೇ ಬೀಜ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತಕ್ಷಣವೇ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಒದ್ದಾಡಲಾರಂಭಿಸಿದ್ದಾನೆ.
ಮಗು ಉಸಿರುಗಟ್ಟಿ ತಡಕಾಡುವುದನ್ನು ಕಂಡು ಗಾಬರಿಯಾದ ಪಾಲಕರು ತಕ್ಷಣವೇ ಆತನನ್ನು ಕುನ್ನುಂಪುರಂನ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ವೈದ್ಯರು ಕಂದನ ಪ್ರಾಣ ಉಳಿಸಲು ತೀವ್ರವಾಗಿ ಶ್ರಮಿಸಿದರಾದರೂ, ತಜ್ಞ ಚಿಕಿತ್ಸೆಯ ಹೊರತಾಗಿಯೂ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.
ಮಿಕ್ಸ್ಚರ್ನಲ್ಲಿದ್ದ ಕಡಲೇ ಬೀಜ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸ್ಥಗಿತಗೊಂಡಿದ್ದೇ ಸಾವಿಗೆ ನೇರ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಕಣ್ಣೆದುರೇ ಆಟವಾಡುತ್ತಿದ್ದ ಮಗ ಹೆಣವಾಗಿ ಮಲಗಿರುವುದನ್ನು ಕಂಡು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಬಾಲಕ ರಿಝಾನ್‌ನ ಅಂತ್ಯಸಂಸ್ಕಾರವನ್ನು ಕುನ್ನುಂಪುರಂನ ಕರತ್ತಲುಂಗಲ್ ಜುಮಾ ಮಸೀದಿಯಲ್ಲಿ ನೆರವೇರಿಸಲಾಯಿತು. ಇಡೀ ಗ್ರಾಮವೇ ಈ ದುರಂತ ಘಟನೆಯಿಂದ ಕಣ್ಣೀರಿನಲ್ಲಿ ಮುಳುಗಿದ್ದು, ಪುಟ್ಟ ಮಕ್ಕಳಿಗೆ ತಿಂಡಿಗಳನ್ನು ನೀಡುವಾಗ ಪೋಷಕರು ಎಷ್ಟು ಎಚ್ಚರಿಕೆಯಿಂದ ಇರಬೇಕೆಂಬುದಕ್ಕೆ ಈ ಕರುಣಾಜನಕ ಘಟನೆ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ, (ಏಜೆನ್ಸೀಸ್).