ಒಬ್ಬನನ್ನೇ ವರಿಸಿದ ಮೂವರು ಸೋದರಿಯರು: ಭಾರಿ ಚರ್ಚೆಗೀಡಾದ ಈ ವಿಚಿತ್ರ ಮದುವೆಯ ಬೃಹನ್ನಾಟಕ ಇದೀಗ ಬಯಲು! Three Sisters Married Same Person 
ದೇಶ

ಒಬ್ಬನನ್ನೇ ವರಿಸಿದ ಮೂವರು ಸೋದರಿಯರು: ಭಾರಿ ಚರ್ಚೆಗೀಡಾದ ಈ ವಿಚಿತ್ರ ಮದುವೆಯ ಬೃಹನ್ನಾಟಕ ಇದೀಗ ಬಯಲು! Three Sisters Married Same Person

ಪ್ರಮುಖ ಮುಖ್ಯಾಂಶಗಳು

  • ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಿದ್ದೇವೆಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಯುಪಿ ಮೂಲದ ಮೂವರು ಯುವತಿಯರು
  • ಲೈಕ್ಸ್ ಮತ್ತು ವೀವ್ಸ್‌ಗಾಗಿ ಸುಳ್ಳು ಮದುವೆ ನಾಟಕ ಆಡಿದ್ದಾಗಿ ಬಾಲ ವಿಕಾಸ ಸಮಿತಿ ಮುಂದೆ ಒಪ್ಪಿಕೊಂಡ ಯುವತಿಯರು
  • ಕ್ಯಾಮೆರಾಮನ್ ವಿಕಾಸ್ ಜೊತೆ ಮದುವೆ ಕಟ್ಟುಕಥೆ ಸೃಷ್ಟಿಸಿ ಸಾರ್ವಜನಿಕರ ಆಕ್ರೋಶಕ್ಕೆ ಈಡಾದ ಸೋಶಿಯಲ್ ಮೀಡಿಯಾ ತಾರೆಯರು
  • ದೇವಾಲಯದಲ್ಲಿ ಮದುವೆಯಾಗಿದ್ದೇವೆಂದು ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಪಬ್ಲಿಸಿಟಿ ಗಿಟ್ಟಿಸಿಕೊಂಡ ಸೋದರಸಂಬಂಧಿಗಳು
Three Sisters Married Same Person : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಹುಚ್ಚು ಇತ್ತೀಚೆಗೆ ಮಿತಿಮೀರುತ್ತಿದೆ. ಲೈಕ್ಸ್ ಮತ್ತು ವೀವ್ಸ್‌ಗಾಗಿ ಯಾವುದೇ ಹಂತಕ್ಕೂ ಇಳಿಯಲು ಸಿದ್ಧರಿರುವ ಇಂದಿನ ಯುವಪೀಳಿಗೆ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರ ದೊಡ್ಡ ನಾಟಕ ಇದೀಗ ಬಯಲಿಗೆ ಬಂದಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಮೂವರು ಸಹೋದರಿಯರು ಒಬ್ಬನೇ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಸ್ಥಳೀಯ ಚಾಮುಂಡಿ ದೇವಾಲಯದಲ್ಲಿ ಈ ಮದುವೆ ನಡೆದಿದೆ ಎಂದು ಬಿಂಬಿಸಲಾಗಿತ್ತು. ವಿಡಿಯೋದಲ್ಲಿ ಹಸನ್‌ಪುರ ಪುರಸಭೆಯ ಅಧ್ಯಕ್ಷರು ಹಾಗೂ ಹಲವು ಮಹಿಳೆಯರು ಕಾಣಿಸಿಕೊಂಡಿದ್ದರಿಂದ ಈ ವಿಷಯ ಮತ್ತಷ್ಟು ವಿವಾದಕ್ಕೆ ತಿರುಗಿ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಮ್ರೋಹಾ ಜಿಲ್ಲೆಯ ದೌರಿಯಾ ಗ್ರಾಮದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋದರಿಯರಾದ ಸರೋಜಾ, ಸಾವಿತ್ರಿ ಹಾಗೂ ಸಂತೋಷ ಎಂಬುವರು ತಮ್ಮ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ ಕ್ಯಾಮೆರಾಮನ್ ವಿಕಾಸ್ (20) ಎಂಬಾತನನ್ನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲ ವಿಡಿಯೋಗಳಲ್ಲಿ ಈ ಯುವತಿಯರ ಪತಿಯ ಪಾತ್ರದಲ್ಲೂ ವಿಕಾಸ್ ಅಭಿನಯಿಸುತ್ತಿದ್ದು, ಈಗ ನಿಜ ಜೀವನದಲ್ಲೂ ಮೂವರಿಗೂ ಪತಿಯಾಗಿದ್ದಾನೆ ಎಂದು ಅನೇಕ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಚಿಕ್ಕಂದಿನಿಂದಲೂ ಜತೆಯಾಗಿಯೇ ಬೆಳೆದ ನಮಗೆ ಮದುವೆಯ ನಂತರ ಪರಸ್ಪರ ಅಗಲಬೇಕಾಗುತ್ತದೆ ಎಂಬ ಭಯ ಕಾಡತೊಡಗಿತ್ತು. ಒಂದು ಹಂತದಲ್ಲಿ ಈ ವಿರಹದ ಭಯಕ್ಕೆ ಜೀವ ಕಳೆದುಕೊಳ್ಳುವ ಆಲೋಚನೆಯೂ ಬಂದಿತ್ತು. ಅಂತಿಮವಾಗಿ ಪ್ರತ್ಯೇಕವಾಗುವುದಕ್ಕಿಂತ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗುವುದು ಸೂಕ್ತ ಎಂದು ನಿರ್ಧರಿಸಿ, ತಮಗೆ ಸೂಕ್ತ ಎನಿಸಿದ ಹಾಗೂ ತಮ್ಮ ಅನುಬಂಧವನ್ನು ಅರ್ಥಮಾಡಿಕೊಂಡ ವಿಕಾಸ್‌ನನ್ನು ವರಿಸಲು ನಿರ್ಧರಿಸಿದ್ದಾಗಿ ಹಿರಿಯ ಸಹೋದರಿ ಸರೋಜಾ ಹೇಳಿದ್ದಾಳೆ ಎಂದು ಮಾಧ್ಯಮಗಳಲ್ಲಿ ವರದಿ ಕೂಡ ಆಗಿತ್ತು.
ಈ ವಿವಾಹ ಮಹೋತ್ಸವದಲ್ಲಿ ಯುವಕನಾಗಲಿ ಅಥವಾ ಯುವತಿಯರ ಕುಟುಂಬಸ್ಥರಾಗಲಿ ಮತ್ತು ಸಂಬಂಧಿಕರಾಗಲಿ ಭಾಗವಹಿಸಿರಲಿಲ್ಲ. ನಾವು ವಯಸ್ಕರಾಗಿದ್ದು ನಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ನಮಗಿದೆ ಎಂದು ಯುವತಿಯರು ಪ್ರತಿಪಾದಿಸಿದ್ದಾರೆ. ಸಹೋದರಿಯರ ಅಪಾರ ಪ್ರೀತಿ ಮತ್ತು ಅನುಬಂಧವನ್ನು ಹತ್ತಿರದಿಂದ ಕಂಡಿದ್ದರಿಂದಲೇ ತಾನು ಈ ಮದುವೆಗೆ ಒಪ್ಪಿಗೆ ನೀಡಿದೆ ಎಂದು ವಿಕಾಸ್ ಹೇಳಿಕೊಂಡಿದ್ದಾನೆ ಎಂಬ ವರದಿಗಳು ಎಲ್ಲೆಡೆ ಹರಿದಾಡಿದ್ದವು.
ಆದರೆ, ಈ ಮದುವೆ ಪ್ರಕರಣದಲ್ಲೀಗ ಅಸಲಿ ಸತ್ಯ ಹೊರಬಿದ್ದಿದ್ದು, ಮದುವೆಯಾದವರಲ್ಲಿ ಒಬ್ಬಳು ಅಪ್ರಾಪ್ತ ವಯಸ್ಕಳು ಎಂಬ ಅನುಮಾನದ ಮೇಲೆ ಉತ್ತರ ಪ್ರದೇಶದ ಬಾಲ ವಿಕಾಸ ಸಮಿತಿ ತನಿಖೆಗೆ ಆದೇಶಿಸಿತ್ತು. ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದ ಯುವತಿಯರು, ತಾವು ಮಾಡಿದ ಮಹಾ ಮೋಸವನ್ನು ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳಲು ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ಸುಳ್ಳು ಮದುವೆಯ ನಾಟಕ ಆಡಿದ್ದಾಗಿ ಅವರು ಲಿಖಿತ ಹೇಳಿಕೆಯಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.
ವಿಚಾರಣೆ ಎದುರಿಸಿದ ದೇವಿಕಾ ಅಲಿಯಾಸ್ ಸಾವಿತ್ರಿ ಎಂಬಾಕೆ, ತಾವು ಸೋದರಸಂಬಂಧಿಗಳೇ ಹೊರತು ಸ್ವಂತ ಸಹೋದರಿಯರಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಪೊಲೀಸ್ ತನಿಖೆ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಹೆದರಿ ನಿಜಾಂಶ ಹೇಳಲು ತಡಮಾಡಿದ್ದಾಗಿ ಆಕೆ ಹೇಳಿದ್ದಾಳೆ. ಇತ್ತ ದೇವಾಲಯದ ಅರ್ಚಕರು ಸಹ ಇಂತಹ ಯಾವುದೇ ಮದುವೆ ತಮ್ಮ ಆವರಣದಲ್ಲಿ ನಡೆದಿಲ್ಲ ಎಂದು ಖಚಿತಪಡಿಸಿದ್ದು, ಫಾಲೋವರ್ಸ್ ಕ್ರೇಜ್‌ಗಾಗಿ ರಚಿಸಿದ ಈ ಕಟ್ಟುಕಥೆ ಈಗ ಬಯಲಾಗಿ ಸಾರ್ವಜನಿಕರ ಆಕ್ರೋಶಕ್ಕೆ ಈಡಾಗಿದೆ, (ಏಜೆನ್ಸೀಸ್​).