ಸಾಂದರ್ಭಿಕ ಚಿತ್ರ 
ದೇಶ

ಆಕಸ್ಮಿಕವಾಗಿ ನಕ್ಸಲರು ಹೂತಿಟ್ಟಿದ್ದ ಐಇಡಿ ಸ್ಫೋಟ; ಮೂವರು ಭದ್ರತಾ ಸಿಬ್ಬಂದಿ ಸಾವು | IED explosion

ರಾಯಪುರ್​: ಛತ್ತೀಸ್​ಗಢದ ಕಾಂಕೇರ್ ಜಿಲ್ಲೆಯಲ್ಲಿ ಶನಿವಾರ(ಮೇ 02) ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ನಿರ್ಮೂಲನೆ ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಐಇಡಿ ಸ್ಫೋಟಗೊಂಡು(IED explosion) ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಓರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಾಂಕೇರ್-ನಾರಾಯಣಪುರ ಅಂತರ ಜಿಲ್ಲಾ ಗಡಿಯ ಬಳಿ ನಡೆದಿದೆ. ಛೋಟೆಬೇಥಿಯಾ ಪೊಲೀಸ್ ಠಾಣೆಯ ಡಿಆರ್‌ಜಿ ತಂಡವು ಶೋಧ ಮತ್ತು ಸ್ಫೋಟಕಗಳ ತೆರವು ಕಾರ್ಯಾಚರಣೆ ನಡೆಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಒಂದು ಐಇಡಿ ಸ್ಪೋಟಗೊಂಡು ಜಿಲ್ಲಾ ಮೀಸಲು ಪಡೆಯ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ಸ್‌ಪೆಕ್ಟರ್ ಸುಖ್‌ರಾಮ್ ವಟ್ಟಿ, ಕಾನ್‌ಸ್ಟೆಬಲ್ ಕೃಷ್ಣ ಕೊಮ್ರಾ ಹಾಗೂ ಕಾನ್‌ಸ್ಟೆಬಲ್ ಸಂಜಯ್ ಗಢ್‌ಪಾಲೆ ಗಾಯಗಳ ತೀವ್ರತೆಯಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಮತ್ತೊಬ್ಬ ಕಾನ್‌ಸ್ಟೆಬಲ್ ಪರಮಾನಂದ ಕೊಮ್ರಾ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಸ್ತಾರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಪಿ. ಸುಂದರರಾಜ್, ಗುಪ್ತಚರ ಮಾಹಿತಿ ಮತ್ತು ಶರಣಾದ ಮಾವೋವಾದಿ ಕಾರ್ಯಕರ್ತರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಇತ್ತೀಚಿನ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ನೂರಾರು ಐಇಡಿಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿವೆ. ಇಂದು ನಡೆದಿದ್ದು ದುರಂತ ಎಂದು ಹೇಳಿದ್ದಾರೆ (ಏಜೆನ್ಸೀಸ್).