ಕೇಂದ್ರ ಗೃಹಸಚಿವ ಅಮಿತ್ ಶಾ 
ದೇಶ

ಪರಾರಿಯಾಗಿದ್ದ ಬಾಂಬಿಹಾ ಗ್ಯಾಂಗ್‌ನ ಮೂವರು ಮಲೇಷಿಯಾದಿಂದ ಗಡಿಪಾರಾಗಿದ್ದು, ದೆಹಲಿಯಲ್ಲಿ ಬಂಧಿಸಲಾಗಿದೆ: ಅಮಿತ್ ಶಾ | Amit Shah

ನವದೆಹಲಿ: ಕೊಲೆ, ಸುಲಿಗೆ, ಗಡಿಯಾಚೆಗಿನ ಶಸ್ತ್ರಾಸ್ತ್ರ, ಮಾದಕ ದ್ರವ್ಯ ಕಳ್ಳಸಾಗಣೆಗಾಗಿ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ದವಿಂದರ್ ಬಾಂಬಿಹಾ ಗ್ಯಾಂಗ್‌ನ ಮೂವರನ್ನು ಮಲೇಷಿಯಾದಿಂದ ಗಡಿಪಾರು ಮಾಡಲಾಗಿದ್ದು, ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಬೆಹ್ಬಾಲ್ ಕಲನ್ ಗ್ರಾಮದ ಜಸ್‌ಪ್ರೀತ್ ಸಿಂಗ್@ಜಾಸ್ ಬೆಹ್ಬಾಲ್, ಅಜಯ್ ಸಿಂಗ್@ ಅಜಯ್ ಮಲೇಷ್ಯಾ ಹಾಗೂ ರಾಜಸ್ಥಾನದ ಶ್ರೀ ಗಂಗಾನಗರದ ಪವನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಮಲೇಷಿಯಾದಿಂದ ಭಾರತಕ್ಕೆ ಬಂದಿಳಿದ ಬಳಿಕ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಪೊಲೀಸರು ಅವರನ್ನು ಬಂಧಿಸಿದರು. ನಂತರ ತನಿಖೆಗಾಗಿ ಅವರನ್ನು ಪಂಜಾಬ್‌ಗೆ ಕರೆದೊಯ್ಯಲಾಗಿದೆ.
ಈ ಕುರಿತು ಸೋಮವಾರ(ಆ. 24) ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಸುರಕ್ಷಿತ ಭಾರತದ ಕುರಿತಾದ ಮೋದಿಜಿ ಅವರ ದೃಷ್ಟಿಕೋನದ ಅಡಿಯಲ್ಲಿ ನಮ್ಮ ಸಂಸ್ಥೆಗಳು 2026ರಲ್ಲೇ 51 ಕುಖ್ಯಾತ ಅಪರಾಧಿಗಳನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿವೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಪೊಲೀಸರು ಬಂಧಿತರಾದ ಮೂವರನ್ನು ದವಿಂದರ್ ಬಾಂಬಿಹಾ ಗ್ಯಾಂಗ್‌ನ ಮಲೇಷ್ಯಾ ಮೂಲದ ಕಾರ್ಯಕರ್ತರು ಎಂದು ಬಣ್ಣಿಸಿದ್ದಾರೆ. ಕೊಲೆ, ಸುಲಿಗೆ, ಸ್ಫೋಟಕಗಳ ಬಳಕೆ ಮತ್ತು ಲುಧಿಯಾನದಲ್ಲಿ ನಡೆಸಲು ಯೋಜಿಸಲಾಗಿದ್ದ ಹ್ಯಾಂಡ್-ಗ್ರೆನೇಡ್ ದಾಳಿಯ ಪ್ರಕರಣಗಳಲ್ಲಿ ಬೇಕಾಗಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).