ಸಾಂದರ್ಭಿಕ ಚಿತ್ರ 
ದೇಶ

ಕಲುಷಿತ ನೀರು ಕುಡಿದು ಮೂವರು ಸಾವು; ಅಸ್ವಸ್ಥಗೊಂಡು ನೂರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು | contaminated water

ಭೋಪಾಲ್: ಮಧ್ಯಪ್ರದೇಶದ ಇಂದೋರ್​ನ ಭಾಗೀರಥಪುರದಲ್ಲಿ ಕಳೆದ ಕೆಲವು ದಿನಗಳಿಂದ ಕಲುಷಿತ ನೀರು(Contaminated water) ಕುಡಿದ ಪರಿಣಾಮ ಮೂವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು (ಡಿ. 31) ವರದಿಯಾಗಿದೆ.
ಆದರೆ ಸ್ಥಳೀಯರ ಮಾಹಿತಿ ಪ್ರಕಾರ, ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾದ ನಾಲ್ವರು ಮಹಿಳೆಯರು ಸೇರಿದಂತೆ ಐದು ಜನರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಡಿಸೆಂಬರ್ 25ರಂದು ಸರಬರಾಜು ಮಾಡಲಾದ ನೀರಿನಲ್ಲಿ ವಾಸನೆ ಬರುತ್ತಿದ್ದು, ಜನರು ಅದನ್ನು ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ ಎಂದು ದೂರಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ನಂದಲಾಲ್ ಪಾಲ್(80), ಸೀಮಾ ಪ್ರಜಾಪತ್(50), ಊರ್ಮಿಳಾ ಯಾದವ್(70) ಮಂಜುಳಾ ದಿಗಂಬರ ವಧೆ(74) ಮತ್ತು ಉಮಾ ಕೋರಿ(29) ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನೂ ಈ ಕುರಿತು ಮಾತನಾಡಿರುವ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ, ಭಾಗೀರಥಪುರ ಪ್ರದೇಶದಲ್ಲಿ ಅತಿಸಾರದಿಂದ ಮೂವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನೀರಿನ ಮಾದರಿ ಪರೀಕ್ಷಾ ವರದಿಗಳು ಇನ್ನೂ ಬರಬೇಕಿದೆ, ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಕುಡಿಯುವ ನೀರು ಸರಬರಾಜು ಪೈಪ್​ನಲ್ಲಿ ಒಳಚರಂಡಿ ನೀರು ಬೆರೆತು ನೀರನ್ನು ಕಲುಷಿತಗೊಂಡಿರಬಹುದು ಎಂದು ತೋರುತ್ತದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪುರಸಭೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ಮಾತನಾಡಿ, ಭಾಗೀರಥಪುರದ ಒಂದು ಸ್ಥಳದಲ್ಲಿ ಮುಖ್ಯ ನೀರು ಸರಬರಾಜು ಪೈಪ್‌ಲೈನ್‌ನಲ್ಲಿ ಸೋರಿಕೆ ಪತ್ತೆಯಾಗಿದ್ದು, ಅದರ ಮೇಲೆ ಶೌಚಾಲಯ ನಿರ್ಮಿಸಿರುವುದು ಕಂಡುಬಂದಿದೆ ಎಂದಿದ್ದಾರೆ.  
ಇನ್ನೂ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು. ಮತ್ತು ಸಂತ್ರಸ್ತರ ವೈದ್ಯಕೀಯ ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).