Rishikesh Train Accident ಸಾಂದರ್ಭಿಕ ಚಿತ್ರ 
ದೇಶ

ಯೋಗ ನಗರಿ ನಿಲ್ದಾಣದ ಬಳಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್‌ಪ್ರೆಸ್‌; ಕೂದಲೆಳೆಯ ಅಂತರದಲ್ಲಿ ಬಚಾವಾದ ಪ್ರಯಾಣಿಕರು! Rishikesh Train Accident

ಪ್ರಮುಖ ಮುಖ್ಯಾಂಶಗಳು

  • ಉತ್ತರಾಖಂಡದ ಋಷಿಕೇಶದಲ್ಲಿ ಸೋಮವಾರ ರಾತ್ರಿ ಭೀಕರ ರೈಲು ಅಪಘಾತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ
  • ಯೋಗ ನಗರಿ ರೈಲು ನಿಲ್ದಾಣದ ಸಮೀಪವಿರುವ ಖಾಂಡ್ ಗಾಂವ್ ಪ್ರದೇಶದಲ್ಲಿ ಉಜ್ಜಯಿನಿ ಎಕ್ಸ್‌ಪ್ರೆಸ್‌ನಲ್ಲಿ ಅವಘಡ
  • ಉಜ್ಜಯಿನಿ ಎಕ್ಸ್‌ಪ್ರೆಸ್ ರೈಲನ್ನು ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆಗಾಗಿ ಸಾಗಿಸುತ್ತಿದ್ದಾಗ ಈ ಅಪಘಾತ
ಉತ್ತರಾಖಂಡ: ಉತ್ತರಾಖಂಡದ ಋಷಿಕೇಶದಲ್ಲಿ ಸೋಮವಾರ (ಮೇ 18) ರಾತ್ರಿ ಭೀಕರ ರೈಲು ಅಪಘಾತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆದಾಗ್ಯೂ, ಇಲ್ಲಿನ ಯೋಗ ನಗರಿ ರೈಲು ನಿಲ್ದಾಣದ ಸಮೀಪವಿರುವ ಖಾಂಡ್ ಗಾಂವ್ ಪ್ರದೇಶದಲ್ಲಿ ಉಜ್ಜಯಿನಿ ಎಕ್ಸ್‌ಪ್ರೆಸ್‌ನ (Rishikesh Train Accident) ಮೂರು ಬೋಗಿಗಳು ಹಳಿ ತಪ್ಪಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ.

ಘಟನೆ ನಡೆದಿದ್ದು ಹೇಗೆ?

ಸೋಮವಾರ ರಾತ್ರಿ 9:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಉಜ್ಜಯಿನಿ ಎಕ್ಸ್‌ಪ್ರೆಸ್ ರೈಲನ್ನು ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆಗಾಗಿ ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ, ರೈಲಿನ ಬ್ರೇಕ್ ವೈಫಲ್ಯ ಉಂಟಾಗಿದ್ದೇ ಈ ಹಳಿತಪ್ಪುವಿಕೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ವರದಿಯಾದ ರೈಲ್ವೆ ಸಂಬಂಧಿತ ಘಟನೆಗಳ ಸರಣಿಗೆ ಈ ಅಪಘಾತವು ಸೇರ್ಪಡೆಯಾಗಿದ್ದು, ಸೋಮವಾರ ಬೆಳಿಗ್ಗೆ, ಸಸಾರಂನಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿತು, ಮತ್ತು ಒಂದು ದಿನದ ಮೊದಲು ರತ್ಲಂ ಜಿಲ್ಲೆಯ ರಾಜಧಾನಿ ಎಕ್ಸ್‌ಪ್ರೆಸ್ 12431 ರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು.
ಏತನ್ಮಧ್ಯೆ, ರೈಲು ಹಳಿ ತಪ್ಪಿದ ಕೂಡಲೇ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದರು. ಆದಾಗ್ಯೂ, ಸರ್ಕಾರಿ ರೈಲ್ವೆ ಪೊಲೀಸರ ಸಿಬ್ಬಂದಿ ಜವಬ್ದಾರಿ ವಹಿಸಿಕೊಂಡು ಹಳಿಗಳನ್ನು ಸುರಕ್ಷಿತಗೊಳಿಸಲು ಗುಂಪನ್ನು ಚದುರಿಸಿದರು. ಈಗಾಗಲೇ ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದ ಎಂದು ಹೇಳಿದ್ದಾರೆ.

ಸಸಾರಾಮ್ ಮತ್ತು ರತ್ಲಂನಲ್ಲಿ ಬೆಂಕಿ ಅವಘಡ

ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಬೋಗಿಯು ಸಸಾರಾಮ್ ರೈಲ್ವೆ ನಿಲ್ದಾಣದ ಆರನೇ ಪ್ಲಾಟ್‌ಫಾರ್ಮ್‌ನಲ್ಲಿದ್ದಾಗ ಅದು ಹೊರಡಲು ನಿಗದಿಪಡಿಸಿದ ಸ್ವಲ್ಪ ಸಮಯ ಮೊದಲು ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಅವಘಡವು ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರಲ್ಲಿ ಭಯಭೀತತೆಯನ್ನು ಉಂಟುಮಾಡಿತ್ತು. ಆದರೆ, ಯಾವುದೇ ಸಾವು ನೋವು ಸಂಭವಿಸಲಿಲ್ಲ.
ಭಾನುವಾರ ಮಧ್ಯಪ್ರದೇಶದ ರತ್ಲಂನಲ್ಲಿ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಗಳಲ್ಲಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಕ್ರಮ್‌ಗಢ ಅಲೋಟ್ ಮತ್ತು ಲುನಿ ರಿಚಾ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಒಂದು ಎಸಿ ಕೋಚ್ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು (ಏಜೆನ್ಸೀಸ್​).