ಮಧ್ಯಪ್ರದೇಶ: ನರ್ಮದಾ ನದಿಯ ದಡದಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಖಾರ್ಗೋನ್ ಜಿಲ್ಲೆಯ ಮಂಡ್ಲೇಶ್ವರ ಘಾಟ್ನಲ್ಲಿ ಈ ಮತದಾರರ ಚೀಟಿಗಳ ರಾಶಿ ಬಿದ್ದಿರುವುದನ್ನು ಸ್ಥಳೀಯರು ಪತ್ತೆಹಚ್ಚಿದ್ದಾರೆ. ಈ ಕಾರ್ಡ್ಗಳಲ್ಲಿ ಹೆಚ್ಚಿನವು ಇಂದೋರ್ನ 'ರೌ' ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸೇರಿದ್ದು ಎನ್ನಲಾಗಿದೆ. ವೋಟರ್ ಐಡಿಗಳು ನದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ತಡ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಮಂಡ್ಲೇಶ್ವರದ ನರ್ಮದಾ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾಗ ನಿಸ್ವಾರ್ತ ಸೇವಾ ಸಮಿತಿ ಸದಸ್ಯರು ಈ ಮತದಾರರ ಚೀಟಿಯನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಹೇಶ್ವರ ಎಸ್ಡಿಎಂ ಪೂರ್ವಾ ಮಾಂಡ್ಲೋಯ್ ಅವರ ಆದೇಶದ ಮೇರೆಗೆ ತಹಸೀಲ್ದಾರರ ತಂಡವು ಸ್ಥಳಕ್ಕೆ ಆಗಮಿಸಿ ಕಾರ್ಡ್ಗಳನ್ನು ವಶಪಡಿಸಿಕೊಂಡು ಅಧಿಕೃತ ಪಂಚನಾಮೆ ನಡೆಸಿತು.
ವಶಪಡಿಸಿಕೊಂಡ ಕಾರ್ಡ್ಗಳ ಸಂಖ್ಯೆ ಮತ್ತು ಅದರಲ್ಲಿರುವ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತಿದ್ದು, ತನಿಖೆಯ ನಂತರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಮತ್ತು ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಡಿಎಂ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಮಂಡ್ಲೇಶ್ವರ ಪೊಲೀಸ್ ಅಧಿಕಾರಿ ಶ್ವೇತಾ ಶುಕ್ಲಾ ತಿಳಿಸಿದ್ದಾರೆ.
ಮತ್ತೊಂದೆಡೆ, ಈ ಘಟನೆ ದೊಡ್ಡ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ನರ್ಮದಾ ನದಿಯ ದಡದಲ್ಲಿ ಅಪಾರ ಸಂಖ್ಯೆಯ ಮತದಾರರ ಚೀಟಿಗಳು ಪತ್ತೆಯಾಗಿದ್ದು, ಮತದಾರರಿಗೆ ವಂಚನೆ ಮತ್ತು ಚುನಾವಣಾ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಮಂಡ್ಲೇಶ್ವರ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದ್ದಾರೆ. ಖಾರಗೋಣೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿ ನಾಯ್ಕ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಸ್ಡಿಒಪಿಗೆ ದೂರು ನೀಡಿ, ತಾವು ಸಂಗ್ರಹಿಸಿರುವ ಇನ್ನೂ ಕೆಲವು ಮತದಾರರ ಚೀಟಿಗಳನ್ನು ಅಧಿಕಾರಿಗಳಿಗೆ ನೀಡಿ ಕೂಡಲೇ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಇಂದೋರ್ ಕ್ಷೇತ್ರದ ಸಾವಿರಾರು ಮತದಾರರ ಕಾರ್ಡ್ಗಳು ಖಾರ್ಗೋನ್ ಜಿಲ್ಲೆಯ ನದಿಯ ದಡದಲ್ಲಿ ಬಿದ್ದಿದ್ದು ಹೇಗೆ? ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್ ಮಾಡಿರುವ ಆರೋಪಗಳು ಸದ್ಯಕ್ಕೆ ಸಾಬೀತಾಗದಿದ್ದರೂ, ಈ ಮತದಾರರ ಗುರುತಿನ ಚೀಟಿಗಳನ್ನು ಬೀಸಾಡಿದವರು ಯಾರು? ನದಿಯ ದಡದಲ್ಲಿ ಏಕೆ ಎಸೆದರು? ಎಷ್ಟು ಇವೆ ಎಂಬ ಬಗ್ಗೆ ಕೂಲಂಕುಷವಾಗಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).