ಮೌಲಾನಾ ಮಸೂದ್ ಅಜರ್ 
ದೇಶ

ಸಾವಿರಾರು ಆತ್ಮಾಹುತಿ ಬಾಂಬರ್​ಗಳು ರೆಡಿ!: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಮಸೂದ್ ಅಜರ್‌ ಆಡಿಯೋ ವೈರಲ್! Masood Azhar

ಪ್ರಮುಖ ಮುಖ್ಯಾಂಶಗಳು

  • ಭಾರತಕ್ಕೆ ಮೌಲಾನಾ ಮಸೂದ್ ಅಜರ್ ಬೆದರಿಕೆ
  • ಸಾವಿರಕ್ಕೂ ಅಧಿಕ ಆತ್ಮಹತ್ಯಾ ಬಾಂಬರ್​ಗಳು ಭಾರತವನ್ನು ಪ್ರವೇಶಿಸಲಿವೆ
  • ಬಹಲ್ವಾಪುರದ ಮೇಲೆ ಭಾರತೀಯ ಸೇನೆಯ ದಾಳಿ ಬಳಿಕ ಮೌಲಾನಾ ಮಸೂದ್ ಅಜರ್ ಬೆದರಿಕೆ
ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ  ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ (Masood Azhar) ಆಡಿಯೋ ಕ್ಲಿಪ್​ವೊಂದು ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಈ ಆಡಿಯೋನಲ್ಲಿ ಮಸೂದ್ ಅಜರ್, ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಬಹಲ್ವಾಪುರದ ಮೂಲಕ ಭಾರತದೊಳಗೆ ನುಸಳಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಆಡಿಯೋದ ಸತ್ಯಾಸತ್ಯತೆ ಮತ್ತು ರೆಕಾರ್ಡಿಂಗ್‌ನ ನಿಖರವಾದ ದಿನಾಂಕ ಇನ್ನೂ ತಿಳಿದುಬಂದಿಲ್ಲ.

ಆಡಿಯೋ ಕ್ಲಿಪ್​ನಲ್ಲಿ ಏನಿದೆ?

ಆಡಿಯೋ ಕ್ಲಿಪ್​ನಲ್ಲಿ  ಮಸೂದ್ ಅಜರ್ ಎಂದು ಹೇಳಿಕೊಳ್ಳುವ ವ್ಯಕ್ತಿ, ನಮ್ಮ ಬಳಿ  ಒಂದು, ಎರಡು, ಸಾವಿರ ಅಲ್ಲ, ನಮ್ಮ ಬಳಿ ಇರುವ  ನಿಜವಾದ ಆತ್ಮಹತ್ಯಾ ಬಾಂಬರ್‌ಗಳ ಅಂಕಿ ಅಂಶವನ್ನು ಬಹಿರಂಗಪಡಿಸಿದರೆ ಜಾಗತಿಕ ಮಾಧ್ಯಮಗಳಲ್ಲಿ ಕೋಲಾಹಲ ಉಂಟಾಗುತ್ತದೆ ಎಂದು ಹೇಳುತ್ತಾರೆ.
ನಮ್ಮ ಬಾಂಬರ್​​ಗಳು ವೀಸಾ, ಸಂಪತ್ತು ಅಥವಾ ವೈಯಕ್ತಿಕ ಲಾಭವನ್ನು ಬಯಸುವುದಿಲ್ಲ, ಬದಲಿಗೆ ಶಹಾದತ್ (ಹುತಾತ್ಮತೆ) ಮಾತ್ರ ಬಯಸುತ್ತಾರೆ ಎಂದು ಹೇಳಿದ್ದಾರೆ. ಆದರೆ, ವೀಕ್ಷಕರು ಈ ಆಡಿಯೋ  ಎಚ್ಚರಿಕೆಗಿಂತ ಹೆಚ್ಚಾಗಿ ಇದೊಂದು ನಕಲಿ ಆಡಿಯೋ ಎಂದು ಕರೆದಿದ್ದಾರೆ.

ಬಹಲ್ವಾಪುರದ ಮೇಲೆ ಭಾರತೀಯ ಸೇನೆಯ ದಾಳಿ

ಭಾರತೀಯ ಪಡೆಗಳು ಬಹಲ್ವಾಪುರದಲ್ಲಿರುವ  ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಸೇರಿದಂತೆ ಪಾಕಿಸ್ತಾನದಲ್ಲಿನ ಜೆಇಎಂ ಕೇಂದ್ರಗಳ ಮೇಲೆ ದಾಳಿ ನಡೆಸಿದ ತಿಂಗಳುಗಳ ನಂತರ ಈ ಆಡಿಯೋ ಹೊರಬಿದ್ದಿದೆ. ಈ ಕಾರ್ಯಾಚರಣೆ ಸಮಯದಲ್ಲಿ  ಜಾಮಿಯಾ ಮಸೀದಿ  ಪ್ರಮುಖ ಹಾನಿಯನ್ನು ಅನುಭವಿಸಿತ್ತು ಎಂದು ವರದಿಯಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಜೆಇಎಂ ಪರೋಕ್ಷವಾಗಿ ನಷ್ಟವನ್ನು ಒಪ್ಪಿಕೊಂಡಿತು. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ಬಹಲ್ವಾಪುರದ ಮೇಲೆ ನಡೆಸಿದ ದಾಳಿಯಲ್ಲಿ ಅಜರ್ ಕುಟುಂಬದ ಹಲವಾರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಕಮಾಂಡರ್ ವೀಡಿಯೊದಲ್ಲಿ ಬಹಿರಂಗ ಪಡಿಸಿದ್ದರು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಭಾರತ ನೀಡಿದ ಪ್ರತಿಕ್ರಿಯೆಯ ನಂತರ ಈ ದಾಳಿಗಳು ನಡೆದವು.
ವರದಿಗಳ ಪ್ರಕಾರ, ಅಜರ್‌ನ ಸಹೋದರಿ, ಆಕೆಯ ಪತಿ, ಸೋದರಳಿಯ, ಸೊಸೆ ಮತ್ತು ಅವರ ಕುಟುಂಬದ ಮಕ್ಕಳು ಸೇರಿದಂತೆ ಸುಮಾರು 10 ಸಂಬಂಧಿಕರು ಬೆಳಗಿನ ಜಾವ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು,(ಏಜನ್ಸೀಸ್).