Mamata Banerjee | ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೊಲ್ಕತ್ತಾ: ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿ ಅಧಿಕಾರ ಕಳೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee), ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಒಟ್ಟಾಗಿ ಸಂಘಟನೆಯನ್ನು ಪುನರ್ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಕೋಲ್ಕತ್ತಾದ ಕಾಲಿಘಾಟ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೀದಿ, ಪಕ್ಷವನ್ನು ತೊರೆಯಲು ಬಯಸುವವರು ಮುಕ್ತವಾಗಿ ಹೋಗಬಹುದು, ಉಳಿದುಕೊಳ್ಳುವವರು ಪಕ್ಷದ ಕಚೇರಿಗಳನ್ನು ಪುನರ್ನಿರ್ಮಿಸಿ, ಬಣ್ಣ ಬಳಿದು ಮತ್ತೆ ಸಕ್ರಿಯಗೊಳಿಸಬೇಕು, ಅಗತ್ಯವಿದ್ದರೆ, ನಾನು ಕೂಡ ಕೈ ಜೋಡಿಸುತ್ತೇನೆ ಎಂದು ತಿಳಿಸಿದರು.
ಜನರ ಆದೇಶವನ್ನು ಲೂಟಿ ಮಾಡಲಾಗಿದೆ ಎಂದ ದೀದಿ...
ಜನರ ಆದೇಶವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಇಂತಹ ಹಿನ್ನಡೆಗಳಿಂದ ಯಾವುದೇ ಕಾರಣಕ್ಕೂ ತೃಣಮೂಲ ಕಾಂಗ್ರೆಸ್ ತಲೆಬಾಗುವುದಿಲ್ಲ ಮತ್ತು ಕಠಿಣ ಪರಿಸ್ಥಿತಿಯಲ್ಲೂ ಒಗ್ಗಟ್ಟಿನಿಂದ ಮತ್ತೆ ಮೇಲೇಳಲಿದೆ ಎಂದು ಅಭ್ಯರ್ಥಿಗಳಲ್ಲಿ ನೈತಿಕ ಸ್ಥೈರ್ಯ ತುಂಬಿದರು. ರಾಜ್ಯದ ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಪಕ್ಷವು ಕೇವಲ 80 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇನ್ನು ಬಹುಕಾಲದಿಂದ ತಮ್ಮ ರಾಜಕೀಯ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಭವಾನಿಪುರ ಕ್ಷೇತ್ರದಲ್ಲೇ ಮಮತಾ ಬ್ಯಾನರ್ಜಿ ಸೋಲು ಅನುಭವಿಸಿದರು. ಟಿಎಂಸಿ ಒಟ್ಟು 291 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು ಡಾರ್ಜಿಲಿಂಗ್ ಬೆಟ್ಟಗಳ ಮೂರು ಸ್ಥಾನಗಳನ್ನು ತನ್ನ ಮಿತ್ರ ಪಕ್ಷವಾದ ಅನಿತ್ ಥಾಪಾ ನೇತೃತ್ವದ ಭಾರತೀಯ ಗೂರ್ಖಾ ಪ್ರಜಾತಂತ್ರಿಕ್ ಮೋರ್ಚಾಗೆ ಬಿಟ್ಟುಕೊಟ್ಟಿತ್ತು.
ಈ ಪೈಕಿ ಕೇವಲ 80 ಅಭ್ಯರ್ಥಿಗಳು ಮಾತ್ರ ಗೆದ್ದರೆ, ಪ್ರಭಾವಿ ನಾಯಕರು ಮತ್ತು ಸಚಿವರು ಸೇರಿದಂತೆ 211 ಅಭ್ಯರ್ಥಿಗಳು ಸೋಲನ್ನು ಅನುಭವಿಸಿದರು. ಈ ಚುನಾವಣಾ ಸೋಲಿನ ಬಳಿಕ ಅಭ್ಯರ್ಥಿಗಳಲ್ಲಿ ಆಂತರಿಕ ಅಸಮಾಧಾನ ಮನೆ ಮಾಡಿದ್ದು, ಅನೇಕರು ಪಕ್ಷಾಂತರ ಮಾಡಬಹುದು ಎಂಬ ಚರ್ಚೆಗಳು ಸಹ ನಡೆದಿವೆ. ಆದ್ದರಿಂದಲೇ ಕಾಲಿಘಾಟ್‌ನಲ್ಲಿ ಈ ತುರ್ತು ಸಭೆಯನ್ನು ಕರೆಯಲಾಗಿತ್ತು ಎಂದು ವರದಿಯಾಗಿದೆ.
ಫಲಿತಾಂಶ ಘೋಷಣೆಯಾದ ಒಂದು ದಿನದ ಬಳಿಕ, ಅಂದರೆ ಮೇ 5 ರಂದು ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಹೇಳಿಕೆಗಳನ್ನು ಈ ಸಭೆಯಲ್ಲಿ ಪುನರುಚ್ಚರಿಸಲಾಯಿತು. ಅಂದು ಸಹ ದೀದಿ, ಹಲವರು ಬೇರೆ ಪಕ್ಷಗಳಿಗೆ ಹೋಗುತ್ತಾರೆ ಎಂಬುದು ತಮಗೆ ತಿಳಿದಿದೆ ಎಂದು ಮತ್ತು ಅವರಿಗೆ ಅವರದೇ ಆದ ಒತ್ತಾಯಗಳಿರಬಹುದು, ಯಾರು ಹೋಗಲು ಬಯಸುತ್ತಾರೋ ಅವರು ಹೋಗಬಹುದು, ತಾವು ಯಾರನ್ನೂ ಬಲವಂತವಾಗಿ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಶುಕ್ರವಾರದ ಸಭೆಯ ಬಳಿಕ ಟಿಎಂಸಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಸಭೆಯ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಚುನಾವಣಾ ಪ್ರಚಾರದ ಸಮಯದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಹೋರಾಟವನ್ನು ಶ್ಲಾಘಿಸಿದ ಪಕ್ಷವು, ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅಭ್ಯರ್ಥಿಗಳನ್ನು ಭೇಟಿಯಾಗಿದ್ದಾರೆ ಎಂದು ಬರೆದುಕೊಂಡಿದೆ.
ಅನೇಕ ರೀತಿಯ ದೌರ್ಜನ್ಯಗಳು ಮತ್ತು ನಿರಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರೂ ಸಹ ನಮ್ಮ ಅಭ್ಯರ್ಥಿಗಳು ಅಚಲ ಧೈರ್ಯದಿಂದ ಹೋರಾಡಿದ್ದಾರೆ ಮತ್ತು ತೃಣಮೂಲ ಕಾಂಗ್ರೆಸ್ ಒಂದೇ ಕುಟುಂಬದಂತೆ ಒಗ್ಗಟ್ಟಿನಿಂದ ನಿಂತಿದೆ, ಜನರ ಆದೇಶವನ್ನು ಲೂಟಿ ಮಾಡುವವರ ಮುಂದೆ ಎಂದಿಗೂ ತಲೆಬಾಗುವುದಿಲ್ಲ, ಅಂತಿಮವಾಗಿ ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ(ಏಜೆನ್ಸೀಸ್).