ಪಾಕ್​ ಪಾಳಯದಲ್ಲಿ ನಡುಕ ಹುಟ್ಟಿಸಿದ ಆ 40 ಎಸೆತಗಳು! ಮೈಕ್ ಹೆಸನ್ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದ್ದೇಕೆ..? 
ದೇಶ

ಪಾಕ್​ ಪಾಳಯದಲ್ಲಿ ನಡುಕ ಹುಟ್ಟಿಸಿದ ಆ 40 ಎಸೆತಗಳು! ಮೈಕ್ ಹೆಸನ್ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದ್ದೇಕೆ..? Mike Hesson

ಕೊಲಂಬೊ: 2026ರ ಟಿ20 ವಿಶ್ವಕಪ್‌ನ ಅತ್ಯಂತ ನಿರೀಕ್ಷಿತ ಪಂದ್ಯದಲ್ಲಿ ಭಾರತದ ವಿರುದ್ಧ 61 ರನ್‌ಗಳ ಭಾರಿ ಅಂತರದ ಸೋಲು ಕಂಡಿರುವ ಪಾಕಿಸ್ತಾನ ತಂಡದಲ್ಲಿ ಈಗ ಹತಾಶೆ ಮನೆಮಾಡಿದೆ. ಆದರೆ, ತಂಡದ ಮುಖ್ಯ ಕೋಚ್ ಮೈಕ್ ಹೆಸನ್(Mike Hesson) ಮಾತ್ರ ತಮ್ಮ ತಂಡದ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲು ಬೌಲಿಂಗ್ ಆಯ್ದುಕೊಂಡ ಟಾಸ್ ನಿರ್ಧಾರ ತಪ್ಪಲ್ಲ, ಬದಲಿಗೆ ಇಶಾನ್ ಕಿಶನ್ ಅವರ ಸ್ಫೋಟಕ ಆಟವೇ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿತು ಎಂದು ಹೇಳಿದ್ದಾರೆ.

ಇಶಾನ್ ಕಿಶನ್ ಆರ್ಭಟಕ್ಕೆ ಬೆಚ್ಚಿದ ಪಾಕಿಸ್ತಾನ

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದ ಸ್ಲೋ ಪಿಚ್‌ನಲ್ಲಿ ಭಾರತ ನೀಡಿದ್ದ 176 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 114 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಬಗ್ಗೆ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಸನ್, ಇಶಾನ್ ಕಿಶನ್ ಯಾವುದೇ ಭಯವಿಲ್ಲದೆ ಆಡಿದರು. ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತಿದ್ದರೂ, ಅವರು ಅದನ್ನು ಲೆಕ್ಕಿಸದೆ ದಾಳಿ ನಡೆಸಿದ್ದು ನಮ್ಮ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಪವರ್ ಪ್ಲೇನಲ್ಲಿ ಅವರು ನೀಡಿದ ಆರಂಭವೇ ಪಂದ್ಯದ ಗತಿಯನ್ನು ಬದಲಿಸಿತು ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.

ಟಾಸ್ ನಿರ್ಧಾರ ಸರಿ ಇತ್ತು ಎಂದ ಹೆಸನ್

ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದನ್ನು ಹಲವು ಕ್ರಿಕೆಟ್ ತಜ್ಞರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ ಕೋಚ್, ಆರಂಭದಲ್ಲಿ ಪಿಚ್ ಮೃದುವಾಗಿತ್ತು ಮತ್ತು ಚೆಂಡು ಎರಡರಷ್ಟು ಹೆಚ್ಚು ಸ್ಪಿನ್ ಆಗುತ್ತಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ನಿಧಾನವಾಗುತ್ತದೆ ಎಂದು ನಾವಂದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಬೌಲಿಂಗ್ ವೈಫಲ್ಯ: ಮೊದಲ ಆರು ಓವರ್‌ಗಳಲ್ಲಿ ಭಾರತದ ಬೌಲಿಂಗ್ ಗುಣಮಟ್ಟ ಅತ್ಯುತ್ತಮವಾಗಿತ್ತು. ನಮ್ಮ ಬ್ಯಾಟರ್‌ಗಳು ಒತ್ತಡಕ್ಕೆ ಮಣಿದರೇ ಹೊರತು ಪಿಚ್ ಸಮಸ್ಯೆಯಿಂದಲ್ಲ ಎಂದು ಹಸನ್​ ತಿಳಿಸಿದ್ದಾರೆ.

ನೊಂದ ಆಟಗಾರರು; ಡ್ರೆಸ್ಸಿಂಗ್ ರೂಂನಲ್ಲಿ ಸ್ಮಶಾನ ಮೌನ

ಸತತ 5 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಪಾಕಿಸ್ತಾನಕ್ಕೆ ಭಾರತದ ಈ ಏಟು ದೊಡ್ಡ ಆಘಾತ ನೀಡಿದೆ. ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ತೀವ್ರವಾಗಿ ನೊಂದಿದ್ದಾರೆ. ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಗೆಲುವು ಎಷ್ಟು ಮುಖ್ಯ ಎಂಬುದು ಅವರಿಗೆ ತಿಳಿದಿದೆ. ಇಂದು ನಮಗೆ ಯಾವುದೂ ಕೈಗೂಡಲಿಲ್ಲ, ನಾವು ಎಲ್ಲಾ ವಿಭಾಗಗಳಲ್ಲೂ ಸೋತಿದ್ದೇವೆ ಎಂದು ಹೆಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಹಾದಿ: ಡು ಆರ್ ಡೈ!

ಈ ಸೋಲಿನೊಂದಿಗೆ ಪಾಕಿಸ್ತಾನ ಗ್ರೂಪ್ ಎ ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಈಗ ಅವರು ಸೂಪರ್-8 ಹಂತಕ್ಕೇರಬೇಕಾದರೆ ಬುಧವಾರ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ಭಾರತ ಸತತ ಮೂರು ಗೆಲುವುಗಳೊಂದಿಗೆ ಅಧಿಕೃತವಾಗಿ ಸೂಪರ್-8 ಪ್ರವೇಶಿಸಿದೆ,(ಏಜೆನ್ಸೀಸ್).