ಶತ್ರುಗಳ ರಡಾರ್ ಕಣ್ಣಿಗೆ ಮಣ್ಣೆರಚಬಲ್ಲ ಈ ಅಸ್ತ್ರ: ಚೀನಾ-ಪಾಕ್ ರಕ್ಷಣಾ ಕೋಟೆಗೆ ಲಗ್ಗೆ ಇಡಲಿದೆ ಭಾರತದ ಹೊಸ ಕ್ಷಿಪಣಿ!
ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಡಿಶಾ ಕರಾವಳಿಯಲ್ಲಿ ಸಂಪೂರ್ಣ ದೇಶೀಯ ತಂತ್ರಜ್ಞಾನದ ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ (LRLACM) ನ ಮೊದಲ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಜಾಗತಿಕ ರಕ್ಷಣಾ ವಲಯದಲ್ಲಿ ಈ ಕ್ಷಿಪಣಿಯನ್ನು ಅಮೆರಿಕದ ಪ್ರಖ್ಯಾತ ಟೊಮಾಹಾಕ್ (Tomahawk missile) ಕ್ಷಿಪಣಿಗೆ ಭಾರತ ನೀಡಿದ ಅತ್ಯಂತ ಶಕ್ತಿಶಾಲಿ ಉತ್ತರ ಎಂದು ಬಣ್ಣಿಸಲಾಗುತ್ತಿದೆ. ಈ ಯಶಸ್ವಿ ಪರೀಕ್ಷೆಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕಾರಣದಲ್ಲಿ ಭಾರತದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಸದ್ಯಕ್ಕೆ ಈ ಕ್ಷಿಪಣಿಯ ನಿಖರ ಸಾಮರ್ಥ್ಯದ ಕುರಿತು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಮೂಲಗಳ ಪ್ರಕಾರ ಇದು 1,000 ದಿಂದ 1,500 ಕಿಲೋಮೀಟರ್ ದೂರದವರೆಗಿನ ಶತ್ರುಗಳ ಇಲಾಖೆಗಳನ್ನು ನಿಖರವಾಗಿ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. ಇದರರ್ಥ, ಭಾರತವು ಈ ಕ್ಷಿಪಣಿಯನ್ನು ತನ್ನ ಗಡಿ ಭಾಗಗಳಲ್ಲಿ ನಿಯೋಜಿಸಿದರೆ, ಪಾಕಿಸ್ತಾನ ಮತ್ತು ಚೀನಾದ ಪ್ರಮುಖ ಸೇನಾ ನೆಲೆಗಳು ಹಾಗೂ ರಾಜಕೀಯ ಕೇಂದ್ರಗಳು ನೇರವಾಗಿ ಭಾರತದ ದಾಳಿಯ ವ್ಯಾಪ್ತಿಗೆ ಬರಲಿವೆ.
ಬೆಂಗಳೂರಿನ ಹೆಮ್ಮೆಯ ಕೊಡುಗೆ; ಸಂಪೂರ್ಣ 'ಮೇಡ್ ಇನ್ ಇಂಡಿಯಾ
ಈ ಕ್ಷಿಪಣಿಯ ಅತ್ಯಂತ ವಿಶೇಷವಾದ ಅಂಶವೆಂದರೆ ಇದು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿದೆ. ಡಿಆರ್‌ಡಿಒದ ವಿವಿಧ ಪ್ರಯೋಗಾಲಯಗಳು ಮತ್ತು ಭಾರತೀಯ ಖಾಸಗಿ ರಕ್ಷಣಾ ಕಂಪನಿಗಳು ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. ವಿಶೇಷವಾಗಿ, ಬೆಂಗಳೂರಿನಲ್ಲಿರುವ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ADE) ಈ ಯೋಜನೆಯ ಪ್ರಮುಖ ನೋಡಲ್ ಪ್ರಯೋಗಾಲಯವಾಗಿ ಕೆಲಸ ಮಾಡಿದೆ. ಕಳೆದ 2016 ರಿಂದ ಹಲವು ವೈಫಲ್ಯಗಳನ್ನು ಕಂಡಿದ್ದ ನಿರ್ಭಯ್ ಕ್ಷಿಪಣಿ ಯೋಜನೆಯ ಮುಂದುವರಿದ ಹಾಗೂ ಅತ್ಯಾಧುನಿಕ ಆವೃತ್ತಿ ಇದಾಗಿದೆ ಎನ್ನಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನು ಹಲವು ಕಠಿಣ ಪರೀಕ್ಷೆಗಳನ್ನು ನಡೆಸಿ, ಇದನ್ನು ಅಧಿಕೃತವಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರಡಾರ್ ಕಣ್ಣಿಗೂ ಸಿಗದ 'ಗೇಮ್ ಚೇಂಜರ್' ಕ್ಷಿಪಣಿ!
ಸಾಮಾನ್ಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮೊದಲು ಬಾಹ್ಯಾಕಾಶಕ್ಕೆ ಜಿಗಿದು, ನಂತರ ಅಲ್ಲಿಂದ ಭೂಮಿಯ ಮೇಲಿರುವ ಗುರಿಯತ್ತ ಧುಮುಕುತ್ತವೆ. ಇದರಿಂದಾಗಿ ಶತ್ರು ದೇಶಗಳ ರಡಾರ್‌ಗಳು ಅವುಗಳನ್ನು ಸುಲಭವಾಗಿ ಪತ್ತೆಹಚ್ಚುತ್ತವೆ. ಆದರೆ, ಭಾರತದ ಈ ಹೊಸ ಕ್ರೂಸ್ ಕ್ಷಿಪಣಿಯು ಟೊಮಾಹಾಕ್ ಮಾದರಿಯಲ್ಲೇ ಭೂಮಿಗೆ ಅತ್ಯಂತ ಹತ್ತಿರವಾಗಿ (ಕಡಿಮೆ ಎತ್ತರದಲ್ಲಿ) ಹಾರಾಟ ನಡೆಸುತ್ತದೆ. ಇದರಿಂದಾಗಿ ಶತ್ರುಗಳ ರಡಾರ್ ಹಾಗೂ ವೈಮಾನಿಕ ರಕ್ಷಣಾ ವ್ಯವಸ್ಥೆಗಳ ಕಣ್ಣಿಗೆ ಮಣ್ಣೆರಚಿ, ಗುರಿಯನ್ನು ಧ್ವಂಸ ಮಾಡಬಲ್ಲದು.
ಇದನ್ನು ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಹಾಗೂ ಭೂಮಿಯ ಮೇಲಿನ ಲಾಂಚರ್‌ಗಳಿಂದಲೂ ಉಡಾವಣೆ ಮಾಡಬಹುದು. ಅಲ್ಲದೆ, ಇದು ಸಾಮಾನ್ಯ ಹಾಗೂ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಪಾಕಿಸ್ತಾನದೊಂದಿಗೆ ನಡೆದ ಸಂಘರ್ಷದ ವೇಳೆ ಭಾರತದ ಬಳಿ ಈ ಕ್ಷಿಪಣಿ ಇರುತ್ತಿದ್ದರೆ, ಮುಂಬೈನ ನೌಕಾಸೇನಾ ನೆಲೆಯಿಂದಲೇ ಇಸ್ಲಾಮಾಬಾದ್‌ನ ಗುರಿಗಳನ್ನು ಸುಲಭವಾಗಿ ಧ್ವಂಸ ಮಾಡಬಹುದಿತ್ತು ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ-ಪಾಕಿಸ್ತಾನದ ಯಾವ ನಗರಗಳು ಇದರ ವ್ಯಾಪ್ತಿಯಲ್ಲಿವೆ?
ಈ ಹೊಸ ಕ್ಷಿಪಣಿಯ ಆಗಮನದಿಂದಾಗಿ ಭಾರತಕ್ಕೆ ಗಡಿ ನಿಯಂತ್ರಣದಲ್ಲಿ ಭಾರಿ ಶಕ್ತಿ ಸಿಕ್ಕಂತಾಗಿದೆ.
ಪಾಕಿಸ್ತಾನ ವಲಯ: ಪಶ್ಚಿಮ ಗಡಿಯಲ್ಲಿ ನಿಯೋಜಿಸಿದರೆ ಇಡೀ ಪಾಕಿಸ್ತಾನ ಇದರ ವ್ಯಾಪ್ತಿಗೆ ಬರಲಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ರಾವಲಪಿಂಡಿ (ಪಾಕ್ ಸೇನಾ ಪ್ರಧಾನ ಕಚೇರಿ ಇರುವ ಜಾಗ), ಲಾಹೋರ್, ಫೈಸಲಾಬಾದ್ ಮತ್ತು ಅವರ ಪ್ರಮುಖ ನೌಕಾಸೇನಾ ಕೇಂದ್ರವಿರುವ ಕರಾಚಿ ನಗರಗಳು ಭಾರತದ ಗುರಿಯಡಿಯಲ್ಲೇ ಇರಲಿವೆ.
ಚೀನಾ ವಲಯ: ಒಂದು ವೇಳೆ ವಾಸ್ತವ ನಿಯಂತ್ರಣ ರೇಖೆ (LAC) ಅಥವಾ ಪೂರ್ವ ಗಡಿಯಲ್ಲಿ ಇದನ್ನು ನಿಯೋಜಿಸಿದರೆ, ಚೀನಾದ ಪಶ್ಚಿಮ ಮತ್ತು ಮಧ್ಯ ಭಾಗದ ಆಯಕಟ್ಟಿನ ಸ್ಥಳಗಳಾದ ಲ್ಹಾಸಾ (ಟಿಬೆಟ್‌ನ ಪ್ರಮುಖ ಸೇನಾ ಕೇಂದ್ರ), ಚೆಂಗ್ಡು (ಬೃಹತ್ ಮಿಲಿಟರಿ ಹಬ್), ಉರುಮ್ಕಿ ಮತ್ತು ಕುನ್ಮಿಂಗ್ ನಗರಗಳನ್ನು ಭಾರತೀಯ ಸೇನೆ ಕುಳಿತಲ್ಲೇ ಹೆದರಿಸಬಹುದಾಗಿದೆ.
ಅಮೆರಿಕವು ಇತ್ತೀಚಿನ ಇರಾನ್ ಯುದ್ಧದಲ್ಲಿ ಟೆಹ್ರಾನ್ ಮೇಲಿನ ದಾಳಿಗೆ ಇದೇ ಮಾದರಿಯ 49 ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿತ್ತು. ಈಗ ಭಾರತವೂ ಅಂತಹದ್ದೇ ಅದ್ಭುತ ಶಕ್ತಿಯನ್ನು ಕೈವಶ ಮಾಡಿಕೊಂಡಿರುವುದು ಭಾರತೀಯ ಸೇನಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ,(ಏಜೆನ್ಸೀಸ್).