ಮಳೆ ಬೀಳುವ ದೃಶ್ಯ 
ದೇಶ

ನೈಋತ್ಯ ಮುಂಗಾರು ಚುರುಕು; ಜೂ.21ರಿಂದ 25 ರವರೆಗೆ ಈ ರಾಜ್ಯಗಳಲ್ಲಿ ಬಿರುಸಿನ ಮಳೆ ಮುನ್ಸೂಚನೆ: ಐಎಂಡಿ

ಪ್ರಮುಖ ಮುಖ್ಯಾಂಶಗಳು

  • ಜೂನ್​ ಮೂರನೇ ವಾರಕ್ಕೆ ಕಾಲಿಟ್ಟರೂ ಇಲ್ಲ ವರುಣನ ಅಬ್ಬರ
  • ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆ ಬೀಳುವ ಮುನ್ಸೂಚನೆ
ನವದೆಹಲಿ: ಜೂನ್​ ಮೂರನೇ ವಾರಕ್ಕೆ ಕಾಲಿಟ್ಟರೂ ಭಾರತದಲ್ಲಿ ಮಳೆಯ ಅಭಾವ ಕಾಡಲಾರಂಭಿಸಿದೆ. ಅದರಲ್ಲೂ, ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿರುವುದು ಸದ್ಯ ಆತಂಕ ಸೃಷ್ಟಿಸಿದೆ. ಮುಂದಿನ ಐದು ದಿನಗಳಲ್ಲಿ ದಕ್ಷಿಣ ಭಾರತ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಜೂ.19ರಿಂದ 23

ದೇಶದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಮಧ್ಯ ಭಾರತದಲ್ಲಿ ಮಳೆ ಮೋಡಗಳು ಮೂಡುತ್ತಿವೆ. ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮುಂದಿನ ವಾರದಲ್ಲಿ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜೂ.19ರಿಂದ 23 ರವರೆಗೆ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್​ನಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ.

ಉತ್ತರ, ಮಧ್ಯ ಭಾರತ

ಇನ್ನು ಜೂನ್ 21ರಿಂದ 25 ರವರೆಗೆ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಜೂನ್ 22 ಮತ್ತು 23ರಂದು ಉತ್ತರ-ದಕ್ಷಿಣ ಒಳನಾಡಿನ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ನಾಳೆ (ಜೂ.21) ಲಕ್ಷದ್ವೀಪದಲ್ಲಿ ವರುಣನ ಆಗಮನ ಇರಲಿದೆ. ಇದು ಜನರಿಗೆ ಕೊಂಚ ನಿರಾಳ ಅನಿಸಿದರೆ, ಅತ್ತ ಉತ್ತರ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ಇನ್ನೂ ಮಳೆಯಾಗಿಲ್ಲ. ಕೇವಲ ಮೋಡ ಕವಿದ ವಾತಾವರಣ ಮಾತ್ರ ಕಾಣಿಸುತ್ತಿದೆ.

ಮಳೆಯ ನಿರೀಕ್ಷೆ

ಐಎಂಡಿ ಪ್ರಕಾರ, ಜೂನ್ 19ರಿಂದ 25 ರವರೆಗೆ ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಮಳೆಯಾಗುವ ಸೂಚನೆಯಿದೆ. ಜೂನ್ 19 ಮತ್ತು 20ರಂದು ಪಶ್ಚಿಮ ಮಧ್ಯಪ್ರದೇಶದಲ್ಲಿ ಗಂಟೆಗೆ 50ರಿಂದ 70 ಕಿಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಭಾಗಗಳಲ್ಲಿ ಜೂ.23 ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ,(ಏಜೆನ್ಸೀಸ್).