- ಸಿಎಂ ಮಮತಾ ಬ್ಯಾನರ್ಜಿಗೆ ಸೋಲಿನ ಕಹಿ
- ಪಶ್ಚಿಮ ಬಂಗಾಳದ ಅಂಗಳದಲ್ಲಿ ಅರಳಿದ ಕಮಲ
- ಮಮತಾ ದರ್ಬಾರ್ ಅಂತ್ಯಕ್ಕೆ ಈ ಎಡವಟ್ಟುಗಳೇ ಕಾರಣ
ಕೋಲ್ಕತ: ಸತತ ಮೂರು ಬಾರಿ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಮಮತಾ ಬ್ಯಾನರ್ಜಿ, ನಾಲ್ಕನೇ ಬಾರಿಯೂ ನಾನೇ ಸಿಎಂ ಎಂಬ ಆಸೆಗೆ ಬಿಜೆಪಿ ತಣ್ಣೀರೆರಚಿದೆ. ಬಂಗಾಳದಲ್ಲಿ ಕೇಸರಿ ಬಾವುಟ ಹಾರಿಸುವ ದಶಕಗಳ ಕಾಲದ ಬಿಜೆಪಿ ಕನಸು 2026ರಲ್ಲಿ ನನಸಾಗಿದ್ದು, ಕಳೆದ 15 ವರ್ಷಗಳಿಂದ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಅಧಿಕಾರ ಅಂತ್ಯಗೊಂಡಿದೆ.
ಮಮತಾ ಪರಾಭವ
ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕಣಕ್ಕೆ ಇಳಿದಿದ್ದ ಸಿಎಂ ಮಮತಾ ಬ್ಯಾನರ್ಜಿ 15,105 ಮತಗಳ ಅಂತದಿಂದ ಸೋಲು ಕಂಡಿದ್ದು, ಭಾರಿ ಮುಖಭಂಗ ಅನುಭವಿಸಿದ್ದಾರೆ. 294 ಕ್ಷೇತ್ರಗಳ ಪೈಕಿ 200ಕ್ಕೂ ಅಧಿಕ ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ. ಚುನಾವಣೆಗೂ ಮೊದಲೇ ಗಟ್ಟಿಯಾಗಿ ನುಡಿದಿದ್ದ ಕಮಲ ಪಡೆ, ಬಂಗಾಳದಲ್ಲಿ ದೀದಿ ಅಧಿಕಾರದ ಯುಗಾಂತ್ಯ ಖಚಿತ ಎಂದಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬ್ಯಾನರ್ಜಿ ತಮ್ಮ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದು ಈಗ ನೆನಪಿಸಿಕೊಳ್ಳಬಹುದು.
ಒಂದು ವರ್ಷ ಮುಂಚೆಯೇ ಪ್ಲ್ಯಾನ್
ಚುನಾವಣೆಗೆ ಬಿಜೆಪಿ ಒಂದು ವರ್ಷ ಮುಂಚಿತವಾಗಿಯೇ ಪೂರ್ವತಯಾರಿ ನಡೆಸಿತ್ತು. ಕಳೆದ ಚುನಾವಣೆಯಲ್ಲಿ 77 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕೇಸರಿ ಪಡೆ, ಈ ಬಾರಿ ಟಿಎಂಸಿ ಸರ್ಕಾರದ ನೂನ್ಯತೆಗಳನ್ನು ಜನರ ಮುಂದೆ ಬಹಿರಂಗಪಡಿಸಿದ್ದಲ್ಲದೆ, ಸೋನಾ ಬಾಂಗ್ಲಾ (ಬಂಗಾರದ ಬಂಗಾಳ) ಎಂಬ ಪರಿಕಲ್ಪನೆಯನ್ನು ಜನರ ಮುಂದಿಟ್ಟು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಹಿಳೆಯರ ರಕ್ಷಣೆ, ಅಭಿವೃದ್ಧಿ ಹಾಗೂ ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ಮಾಸಿಕವಾಗಿ 3000 ರೂ. ನೀಡುವ ಭರವಸೆ ಕೊಟ್ಟಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಟಿಎಂಸಿ ಗೂಂಡಾಗಳು ಜೈಲು ಸೇರಲಿದ್ದಾರೆ. ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಅಭಿವೃದ್ಧಿಯೂ ಆಗಲಿದೆ ಎಂಬ ಆಶ್ವಾಸನೆ ನೀಡಿತ್ತು.
ಟಿಎಂಸಿ ಸೋಲಿಗೆ ಪ್ರಮುಖ ಕಾರಣಗಳು
- ತೀವ್ರವಾದ ಆಡಳಿತ ವಿರೋಧಿ ಅಲೆ
- ಭ್ರಷ್ಟಾಚಾರದ ಆರೋಪಗಳು (ಶಿಕ್ಷಕರ ನೇಮಕಾತಿ ಹಗರಣ, ಪಡಿತರ ಚೀಟಿ ಹಗರಣ ಇತ್ಯಾದಿ).
- ಸಂದೇಶ್ ಖಾಲಿ ಹಾಗೂ ಆರ್ಜಿ ಕರ್ ಅತ್ಯಾಚಾರ ಘಟನೆ
- ಟಿಎಂಸಿ ಕಾರ್ಯಕರ್ತರ ಅತಿಯಾದ ಗೂಂಡಾಗಿರಿ
- ಜನರ ನಿರೀಕ್ಷೆಗಳನ್ನು ಈಡೇರಿಸಲು ದೀದಿ ಸರ್ಕಾರ ವಿಫಲವಾಗಿರುವುದು
- ಸ್ಥಳೀಯ ನಾಯಕರ ಅತಿಯಾದ ಅಧಿಕಾರ ದುರ್ಬಳಕೆ, ದರ್ಪ
- ಹೆಚ್ಚುತ್ತಿದ್ದ ಹಿಂಸಾತ್ಮಕ ಘಟನೆಗಳು, ಮಹಿಳೆಯರ ಮೇಲಿನ ದೌರ್ಜನ್ಯ
- ಯುವಕರಿಗೆ ನಿರುದ್ಯೋಗ ಸಮಸ್ಯೆ
- ಆರ್ಥಿಕತೆ ಮೇಲಿನ ಹೊಡೆತ
- ಅಭಿಷೇಕ್ ಬ್ಯಾನರ್ಜಿ, ಇತರ ನಾಯಕರ ನಡುವಿನ ಶೀತಲ ಸಮರ
- ಚುನಾವಣೆ ವೇಳೆ ಇತರ ಪಕ್ಷಕ್ಕೆ ಮತ ನೀಡಿದವರ ಮೇಲೆ ಹಲ್ಲೆ, ಹತ್ಯೆ
- ಅತಿಯಾದ ಅಲ್ಪಸಂಖ್ಯಾತರ ತುಷ್ಠೀಕರಣ
- ಕುರ್ವಿುಗರ ಸಮುದಾಯದ ಆಕ್ರೋಶದಿಂದ ಮತ ವಿಭಜನೆ
ಬಿಜೆಪಿ ಗೆಲುವಿಗೆ ಪ್ರಮುಖ ಕಾರಣಗಳು
- ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಕಾರ್ಯ
- ಹಿಂದುತ್ವದ ಅಜೆಂಡಾ ಮತ್ತು ಧ್ರುವೀಕರಣ
- ಕೇಂದ್ರದ ಯೋಜನೆಗಳ ಪರಿಣಾಮಕಾರಿ ಪ್ರಚಾರ
- ಕಾನೂನು ಸುವ್ಯವಸ್ಥೆ ಕಾಪಾಡುವ ಆಶ್ವಾಸನೆ
- ಅಕ್ರಮ ನುಸುಳುಕೋರರ ನಿಯಂತ್ರಣ ಭರವಸೆ
- ಬಾಂಗ್ಲಾದಲ್ಲಿ ನಡೆದಿದ್ದ ಹಿಂದೂಗಳ ಹತ್ಯೆ ವಿಚಾರ ಚುನಾವಣೆಯಲ್ಲಿ ಮುಂಚೂಣಿ
- ಮೋದಿ-ಅಮಿತ್ ಷಾ, ಯೋಗಿ ಆದಿತ್ಯನಾಥ್ ಸೇರಿ ಕೇಂದ್ರ ನಾಯಕರ ಆಕ್ರಮಣಕಾರಿ ಪ್ರಚಾರ
- ಸಿಎಎ, ಗಡಿ ಸುರಕ್ಷತೆ, ಅಭಿವೃದ್ದಿಯ ವಾಗ್ದಾನಗಳು
- ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸದೇ, ಬಂಗಾಳಿ ಅಸ್ಮಿತೆ ಬಗ್ಗೆ ಉಲ್ಲೇಖಿಸಿರುವುದು
- ಬಂಗಾಳದ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ
- ಪ್ರತಿಬಾರಿ ಪ್ರಚಾರದಲ್ಲೂ ಸ್ಥಳೀಯ ನಾಯಕರ ಹೆಸರು ಉಲ್ಲೇಖಿಸಿ ಭಾಷಣ