ಬೀಡಿ, ಸಿಗರೇಟ್ ಮತ್ತು ಗುಟ್ಕಾ ಪ್ಯಾಕೆಟ್​ ಇರುವ ಟ್ರೇ ಹಿಡಿದಿರುವ ವ್ಯಕ್ತಿ 
ದೇಶ

ಈ ಮದುವೆ ಮನೇಲಿ ಸಿಗರೇಟ್, ಗುಟ್ಕಾವೇ 'ಸ್ಟಾರ್ಟರ್ಸ್'! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ | Marriage

ಪ್ರಮುಖ ಮುಖ್ಯಾಂಶಗಳು

  • ಮದುವೆ ಮನೆಯಲ್ಲಿ ಬೀಡಿ, ಸಿಗರೇಟ್​ ಹಂಚಿಕೆ
  • ಅತಿಥಿಗಳಿಗೆ ವಿಚಿತ್ರ ಸತ್ಕಾರ ಎಂದ ನೆಟ್ಟಿಗರು
  • ಹರಿಯಾಣಾ, ಯುಪಿಯಲ್ಲಿ ಇದು ಕಾಮನ್​ ಅಂತೆ
  • ವೈರಲ್​ ವಿಡಿಯೋಗೆ ಹರಿದುಬಂದ ಕಮೆಂಟ್​ಗಳು
ಭಾರತೀಯ ವಿವಾಹ (Marriage) ಅಂದಮೇಲೆ ಅಲ್ಲಿ ಅದ್ದೂರಿ ಅಲಂಕಾರ, ತರಹೇವಾರಿ ಖಾದ್ಯಗಳು, ಮೃಷ್ಟಾನ್ನ ಭೋಜನ ಇರೋದು ಕಾಮನ್. ಆದರೆ ಈಗೀನ ಮದುವೆಗಳಲ್ಲಿ ಸಂಪ್ರದಾಯಗಳಿಗಿಂತ ಆಧುನಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುತ್ತದೆ.
ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆ ಮನೆಯೊಂದರ ವಿಡಿಯೋ ವೈರಲ್​ ಆಗಿದ್ದು, ಮದುವೆಗೆ ಬಂದ ಅತಿಥಿಗಳಿಗೆ ನೀಡಿದ 'ಸರ್ಪ್ರೈಸ್' ನೋಡಿ ಸೋಶಿಯಲ್ ಮೀಡಿಯಾ ಮಂದಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವೇಟರ್‌ಗಳು ಟ್ರೇನಲ್ಲಿ ಜ್ಯೂಸ್, ಕಾಫಿ ಅಥವಾ ಸ್ಟಾರ್ಟರ್ಸ್ ತರುತ್ತಾರೆ. ಆದರೆ ಈ ವೈರಲ್ ವಿಡಿಯೋದಲ್ಲಿ ವೇಟರ್ ಹಿಡಿದಿರುವ ಟ್ರೇನಲ್ಲಿ ಏನಿತ್ತು ಎಂದು ತಿಳಿಯಲು ಕೆಳಗಿರುವ ಸ್ಟೋರಿ ಓದಿ.

ಟ್ರೇನಲ್ಲಿ ಏನೇನಿತ್ತು?

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ವೇಟರ್ ಒಬ್ಬ ದೊಡ್ಡ ಟ್ರೇ ಹಿಡಿದು ನಿಂತಿದ್ದಾನೆ. ಆ ಟ್ರೇನಲ್ಲಿ ಬಗೆಬಗೆಯ ಸಿಗರೇಟ್ ಪ್ಯಾಕೆಟ್‌ಗಳು, ಬೀಡಿ ಕಟ್ಟುಗಳು ಮತ್ತು ಸಾಲು ಸಾಲು ಗುಟ್ಕಾ ಪ್ಯಾಕೆಟ್​ಗಳಿದ್ದು, ಮದುವೆಗೆ ಬಂದಿರುವ ಅತಿಥಿಗಳು ತಮಗೆ ಬೇಕಾದ ಬ್ರ್ಯಾಂಡ್​ನ್ನು ಆರಿಸಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹರಿಯಾಣ, ಯುಪಿಯಲ್ಲಿ ಇದು ಕಾಮನ್!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ನಡುವೆ ದೊಡ್ಡ ಚರ್ಚೆಯೇ ಶುರುವಾಗಿದೆ. ಕೆಲವರು ಇದೊಂದು ಕೆಟ್ಟ ಸಂಪ್ರದಾಯ ಎಂದು ಮೂಗು ಮುರಿದರೆ, ಇನ್ನು ಕೆಲವು ಭಾಗದ ಜನರು ಇದು ನಮ್ಮ ಕಡೆ ಸಾಮಾನ್ಯ ಎಂದಿದ್ದಾರೆ.
ನೀವು ಹರಿಯಾಣಕ್ಕೆ ಬರಬೇಕು, ಅಲ್ಲಿ ಮದುವೆಗಳಲ್ಲಿ ಹುಕ್ಕಾ ಮತ್ತು ಸಿಗರೇಟ್ ಸರ್ವ್ ಮಾಡುವುದು ತುಂಬಾ ಹಳೆಯ ಪದ್ಧತಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿ ಕಡೆಯ ಮದುವೆಗಳಲ್ಲಿ ಚಹಾ, ನಿಂಬು ನೀರಿನ ಜೊತೆಗೆ ಹುಕ್ಕಾ ಮತ್ತು ಸಿಗರೇಟ್ ವ್ಯವಸ್ಥೆ ಇರುತ್ತದೆ. ಹೀಗೆ ಮಾಡಿದರೆ ಜನ ಜಾಸ್ತಿ ಹೊತ್ತು ಕುಳಿತು ಮದುವೆ ಎಂಜಾಯ್ ಮಾಡುತ್ತಾರೆ ಎಂದು ಮತ್ತೊಬ್ಬರು ಸಮರ್ಥಿಸಿಕೊಂಡಿದ್ದಾರೆ.
ಗರ್ವಾಲ್ ಮತ್ತು ಬೆಟ್ಟದ ಪ್ರದೇಶಗಳಲ್ಲಿ ಮದುವೆ ಮೊದಲಾದ ಶುಭಕಾರ್ಯಗಳಿಗೆ ಬರುವವರಿಗೆ ಸಿಗರೇಟ್, ಬೀಡಿ ಮತ್ತು ಅಡಿಕೆ ಪುಡಿ ಕೊಡುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯವಾಗಿದೆ ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ.

ವಿಡಿಯೋಗೆ ಕಮೆಂಟ್​ಗಳ ಮಹಾಪೂರ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋಗೆ ಕಮೆಂಟ್​ಗಳ ಮಹಾಪೂರವೇ ಹರಿದುಬಂದಿದೆ. ಭಾರತ ಸರ್ಕಾರದ ಹೊಸ ಟ್ಯಾಕ್ಸ್​​ ನೀತಿಯಿಂದಾಗಿ ಸಿಗರೇಟ್​ ಈಗ ಶ್ರೀಮಂತಿಕೆಯ ಸಂಕೇತವಾಗಿದೆ ಎಂದು ಒಬ್ಬರೆಂದರೆ, ಮದುವೆ ಮನೆಯವರು ಚಟಗಾರರ ಮೇಲೆ ಎಷ್ಟು ಕಾಳಜಿ ಇಟ್ಟುಕೊಂಡಿದ್ದಾರೆ ನೋಡಿ ಮತ್ತೊಬ್ಬರು ವ್ಯಂಗ್ಯಮಾಡಿದ್ದಾರೆ,(ಏಜನ್ಸೀಸ್​).