ಕೇಂದ್ರ ಬಜೆಟ್​ 2026  
ದೇಶ

9ನೇ ಕೇಂದ್ರ ಬಜೆಟ್​ ಮಂಡಿಸಲು ವಿತ್ತ ಸಚಿವೆ ರೆಡಿ! ಇವರೇ ನೋಡಿ ನಿರ್ಮಲಾ ಸೀತಾರಾಮನ್​ ಹಿಂದಿರುವ ಶಕ್ತಿ

ಪ್ರಮುಖ ಮುಖ್ಯಾಂಶಗಳು

  • 9ನೇ ಬಜೆಟ್​ ಮಂಡನೆಗೆ ವಿತ್ತ ಸಚಿವೆ ರೆಡಿ
  • ಫೆ.01ರ ಭಾನುವಾರ ಕೇಂದ್ರ ಬಜೆಟ್​
  • ನಿರ್ಮಲಾ ಸೀತಾರಾಮನ್​ ಅವರ ಬಜೆಟ್ ತಂಡದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ
ನವದೆಹಲಿ: ದೇಶದ ಜನತೆಯ ಕಣ್ಣು ಸದ್ಯ ಫೆ.01ರಂದು ನಡೆಯಲಿರುವ ಕೇಂದ್ರ ಬಜೆಟ್ ಮೇಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿರುವುದು ವಿಶೇಷ. ಪ್ರತಿ ವರ್ಷ ಬಜೆಟ್​ ಮಂಡಿಸುವ ನಿರ್ಮಲಾ ಅವರ ಹಿಂದೆ ದೊಡ್ಡ ತಂಡವೇ ಇದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅವರೆಲ್ಲರ ಸಲಹೆ, ಕಿವಿಮಾತುಗಳೇ ಹಣಕಾಸು ಸಚಿವೆಗೆ ದೊಡ್ಡ ಶಕ್ತಿಯಾಗಿದೆ ಎಂಬುದು ಮತ್ತೊಂದು ವಿಶೇಷ.  
ಈ ಬಾರಿಯ ಕೇಂದ್ರ ಬಜೆಟ್​ಗೆ ಅನುಭವಿ ಮತ್ತು ಹೊಸ ಮುಖಗಳು ಬಜೆಟ್ ತಂಡವನ್ನು ಸೇರಿವೆ. 'ನಮೋ' 3.0 ಸರ್ಕಾರದ ಮೂರನೇ ಪೂರ್ಣ ಬಜೆಟ್ ಇದಾಗಿದ್ದು, ಭಾನುವಾರದಂದೇ ಬಜೆಟ್​ ಮಂಡಿಸಲಾಗುತ್ತಿದೆ. ಬಜೆಟ್​ಗೆ ತಯಾರಿ ಮಾಡಿಕೊಳ್ಳುವ ವಿತ್ತ ಸಚಿವೆ ಹಿಂದಿರುವ ಶಕ್ತಿ ಯಾರೆಲ್ಲ? ಅವರ ಕರ್ತವ್ಯವೇನು? ಎಂಬುದರ ಪೂರ್ಣ ವಿವರ ಈ ಕೆಳಕಂಡಂತಿದೆ ಗಮನಿಸಿ. 

ಇವರೇ ಬಜೆಟ್ ತಂಡದಲ್ಲಿರುವ ಪ್ರಮುಖ ವ್ಯಕ್ತಿಗಳು...

1. ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ: ಇವರು ಈ ಬಜೆಟ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕೇಂದ್ರ ಆರ್ಥಿಕ ನೀತಿಗಳ ಅನುಷ್ಠಾನದಲ್ಲಿ ನಿರ್ಮಲಾ ಸೀತಾರಾಮನ್ ಅವರ ಜತೆಗಿದ್ದಾರೆ.

2. ವಿ. ಅನಂತ್ ನಾಗೇಶ್ವರನ್ (ಮುಖ್ಯ ಆರ್ಥಿಕ ಸಲಹೆಗಾರ)

ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ್ ನಾಗೇಶ್ವರನ್ ಬಜೆಟ್ ಸೂತ್ರೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆರ್ಥಿಕ ಬೆಳವಣಿಗೆಯ ಮುನ್ಸೂಚನೆಗಳು, ವಲಯವಾರು ಕಾರ್ಯಕ್ಷಮತೆ ವಿಶ್ಲೇಷಣೆ, ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಪ್ರಭಾವ ಸೇರಿದಂತೆ ವಿಷಯಗಳ ಕುರಿತು ಅವರ ಇಲಾಖೆಯು ಆರ್ಥಿಕ ದೃಷ್ಟಿಕೋನವನ್ನು ಸಿದ್ಧಪಡಿಸುತ್ತದೆ.

3. ಅನುರಾಧಾ ಠಾಕೂರ್

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಬಜೆಟ್ ವಿಭಾಗದ ಮುಖ್ಯಸ್ಥರಾಗಿರುವ ಅನುರಾಧಾ ಠಾಕೂರ್ ಅವರಿಗೆ ಇದು ಮೊದಲ ಬಜೆಟ್ ಎಂಬುದು ಗಮನಾರ್ಹ. ವಿಶೇಷ ಎಂದರೆ ಇವರು ಬಜೆಟ್ ಇಲಾಖೆಯ ಮುಖ್ಯಸ್ಥರಾಗಿರುವ ಮೊದಲ ಮಹಿಳಾ ಕಾರ್ಯದರ್ಶಿ. ಬಜೆಟ್ ದಾಖಲೆಗಳ ಸಂಪೂರ್ಣ ತಯಾರಿಕೆಯನ್ನು ಠಾಕೂರ್​ ಅವರ ಮೇಲ್ವಿಚಾರಣೆಯಲ್ಲಿ ಮಾಡಲಾಗುತ್ತದೆ.

4. ಅರವಿಂದ್ ಶ್ರೀವಾಸ್ತವ (ಕಂದಾಯ ಕಾರ್ಯದರ್ಶಿ)

ತೆರಿಗೆ ಪ್ರಸ್ತಾವನೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಅರವಿಂದ್ ಶ್ರೀವಾಸ್ತವ ನೋಡಿಕೊಳ್ಳುತ್ತಾರೆ. ನೇರ ತೆರಿಗೆಗಳಾದ ಆದಾಯ, ಕಾರ್ಪೊರೇಟ್ ತೆರಿಗೆ. ಮತ್ತು ಪರೋಕ್ಷ ಟ್ಯಾಕ್ಸ್​ ಆದ ಜಿಎಸ್ಟಿ, ಕಸ್ಟಮ್ಸ್ ಸುಂಕ ಅವರಿಗೆ ಬರುತ್ತದೆ. ಕಂದಾಯ ಕಾರ್ಯದರ್ಶಿಯಾಗಿ ಇವರಿಗೂ ಇದೇ ಮೊದಲ ಬಜೆಟ್.

5. ವಿ. ವುಯಲ್ನಮ್ (ವೆಚ್ಚ ಕಾರ್ಯದರ್ಶಿ)

ಮಣಿಪುರ ಕೇಡರ್‌ನ 1992ರ ಬ್ಯಾಚ್ ಐಎಎಸ್ ಅಧಿಕಾರಿ ವಿ. ವುಯಲ್ನಮ್, ಸರ್ಕಾರಿ ವೆಚ್ಚ, ಹಣಕಾಸಿನ ಕೊರತೆ ನಿಯಂತ್ರಣ, ಸಬ್ಸಿಡಿಗಳು, ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಮತ್ತು ಇತರ ಸಮಸ್ಯೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. 

6. ಎಂ. ನಾಗರಾಜು (ಹಣಕಾಸು ಸೇವೆಗಳ ಕಾರ್ಯದರ್ಶಿ)

ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಪಿಂಚಣಿ ವ್ಯವಸ್ಥೆಗಳ ಆರ್ಥಿಕ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಎಂ. ನಾಗರಾಜು ಹೊಂದಿದ್ದಾರೆ. ಸರ್ಕಾರದ ಹಣಕಾಸು ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಇವರದ್ದು ಪ್ರಮುಖ ಪಾತ್ರವಿದೆ. 

7. ಅರುಣೀಶ್ ಚಾವ್ಲಾ (ಡಿಐಪಿಎಎಂ ಕಾರ್ಯದರ್ಶಿ)

ಸರ್ಕಾರದ ಹೂಡಿಕೆ ಹಿಂತೆಗೆತ ಮತ್ತು ಖಾಸಗೀಕರಣದ ಮಾರ್ಗಸೂಚಿಗೆ ಅರುಣೀಶ್ ಚಾವ್ಲಾ ಜವಾಬ್ದಾರರು. 

8. ಕೆ. ಮೋಸೆಸ್ ಚಲೈ (ಡಿಪಿಇ ಕಾರ್ಯದರ್ಶಿ)

ಇವರು ಸಾರ್ವಜನಿಕ ವಲಯದ ಉದ್ಯಮಗಳ ಇಲಾಖೆಯ (ಡಿಪಿಇ) ಕಾರ್ಯದರ್ಶಿ. ಹೂಡಿಕೆ ವೆಚ್ಚ (ಕ್ಯಾಪೆಕ್ಸ್) ಯೋಜನೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ, ನಿರ್ಮಲಾ ಸೀತಾರಾಮನ್ ಅವರ ತಂಡವು ಅನುಭವಿ ಅಧಿಕಾರಿಗಳು ಮತ್ತು ಹೊಸ ಕಾರ್ಯದರ್ಶಿಗಳೊಂದಿಗೆ 9ನೇ ಕೇಂದ್ರ ಬಜೆಟ್​ಗೆ ಸಜ್ಜಾಗಿದೆ.