ಇದು ಕೇವಲ ಟ್ರೈಲರ್ ಅಷ್ಟೇ, ಅಸಲಿ ಸಿನಿಮಾ ಮುಂದೆ ಇದೆ! ಗಂಭೀರ್‌ಗೆ ದಾದಾ ಕೊಟ್ಟ ಆ ಭಯಾನಕ ಎಚ್ಚರಿಕೆ ಏನು..?
ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಸತತ ಯಶಸ್ಸಿನ ಅಲೆಯಲ್ಲಿ ತೇಲುತ್ತಿರಬಹುದು. ಅವರ ಮಾರ್ಗದರ್ಶನದಲ್ಲಿ ಭಾರತವು ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಎರಡನ್ನೂ ಗೆದ್ದು ಇತಿಹಾಸ ನಿರ್ಮಿಸಿದೆ. ಆದರೆ, ಇಷ್ಟಕ್ಕೇ ಸಂಭ್ರಮಿಸಬೇಡಿ, ನಿಮ್ಮ ಅಸಲಿ ಪರೀಕ್ಷೆ ಇರುವುದೇ ಮುಂದೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಗಂಭೀರ್‌ಗೆ ನೆನಪಿಸಿದ್ದಾರೆ.
ಈ ಬಗ್ಗೆ ಬೋರಿಯಾ ಮಜುಂದಾರ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ದಾದಾ, ಗಂಭೀರ್ ಮುಂದಿರುವ ಸವಾಲುಗಳು ಮತ್ತು ಭಾರತೀಯ ಕ್ರಿಕೆಟ್ ಸುಧಾರಿಸಬೇಕಾದ ಅಂಶಗಳ ಬಗ್ಗೆ ನೇರ ಮಾತುಗಳನ್ನಾಡಿದ್ದಾರೆ.
2027ರ ವಿಶ್ವಕಪ್: ಗಂಭೀರ್ ಪಾಲಿನ ಅಗ್ನಿಪರೀಕ್ಷೆ
ಗೌತಮ್ ಗಂಭೀರ್ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಸಾಮರ್ಥ್ಯಕ್ಕೆ ನಿಜವಾದ ಸವಾಲು ಎದುರಾಗುವುದು 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿನ ಪರಿಸ್ಥಿತಿಗಳು ಮತ್ತು ಪಿಚ್‌ಗಳು ಗಂಭೀರ್ ಮತ್ತು ಅವರ ತಂಡಕ್ಕೆ ಕಠಿಣ ಪರೀಕ್ಷೆ ಒಡ್ಡಲಿವೆ. 2023ರ ವಿಶ್ವಕಪ್‌ನಲ್ಲಿ ಭಾರತವು ಫೈನಲ್‌ನಲ್ಲಿ ಸೋತು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆ ನೋವನ್ನು ಮರೆಸುವ ಮತ್ತು 2011ರ ವಿಶ್ವಕಪ್ ವಿಜೇತ ಆಟಗಾರನಾಗಿರುವ ಗಂಭೀರ್, ಈಗ ಕೋಚ್ ಆಗಿ ಕಪ್ ಗೆದ್ದುಕೊಡುವ ಒತ್ತಡದಲ್ಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ. ವಿಶೇಷವೆಂದರೆ, 2027ರ ವಿಶ್ವಕಪ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರಿಗೆ ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಯಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಬದಲಾಗಬೇಕಿದೆ ಗಂಭೀರ್ ಶೈಲಿ
ಮುಂದುವರೆದು ಮಾತನಾಡಿರುವ ಕೆಂಪು ಚೆಂಡಿನ ಕ್ರಿಕೆಟ್ ಬಗ್ಗೆ ಮಾತನಾಡಿದ ಗಂಗೂಲಿ, ಗಂಭೀರ್ ಅವರು ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗಂಭೀರ್ ಇನ್ನಷ್ಟು ಸುಧಾರಿಸಬೇಕಿದೆ. ಮುಖ್ಯವಾಗಿ ಅವರು ಪಿಚ್ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಡಬೇಕು. ಭಾರತದಲ್ಲಿ ಪಂದ್ಯಗಳು ನಡೆದಾಗ ಕೇವಲ ಸ್ಪಿನ್ ಸ್ನೇಹಿ ವಿಕೆಟ್‌ಗಳನ್ನೇ ಅವಲಂಬಿಸುವುದು ಬೇಡ. ಉತ್ತಮ ಪಿಚ್‌ಗಳಿದ್ದರೆ ಉತ್ತಮ ಫಲಿತಾಂಶಗಳು ತಾನಾಗಿಯೇ ಬರುತ್ತವೆ ಎಂದು ಗಂಗೂಲಿ ವಿಶ್ಲೇಷಿಸಿದ್ದಾರೆ. ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಸರಣಿಯ ಉದಾಹರಣೆ ನೀಡಿದ ದಾದಾ, ಪಿಚ್ ಬಗ್ಗೆ ಅತಿಯಾದ ಆಲೋಚನೆ ಮಾಡದಿದ್ದಾಗ ತಂಡದ ಪ್ರದರ್ಶನ ಹೇಗಿರುತ್ತದೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ.
ಗಂಭೀರ್ ಬೆನ್ನಿಗೆ ನಿಂತ 'ದಾದಾ'
ಎಚ್ಚರಿಕೆಯ ನಡುವೆಯೂ ಗಂಭೀರ್ ಅವರ ಕೋಚಿಂಗ್ ಸಾಮರ್ಥ್ಯದ ಬಗ್ಗೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೌತಮ್ ಒಬ್ಬ ಅತ್ಯುತ್ತಮ ಕೋಚ್. ಬಾರ್ಡರ್-ಗವಾಸ್ಕರ್ ಟ್ರೋಫಿಗಿಂತ ಮುಂಚೆಯೇ ನಾನು ಹೇಳಿದ್ದೆ, ಅವರಿಗೆ ಸ್ವಲ್ಪ ಸಮಯ ನೀಡಬೇಕು ಎಂದು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಈಗಾಗಲೇ ತಮ್ಮ ಮೌಲ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ಬಳಿ ಅತ್ಯುತ್ತಮ ಆಟಗಾರರ ತಂಡವಿದೆ. ಗಂಭೀರ್ ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಗುರಿ ಏನು..?
ಸದ್ಯ ಐಪಿಎಲ್ 2026ರ ಸೀಸನ್ ಮುಗಿದ ನಂತರ ಗಂಭೀರ್ ಅವರ ಸಂಪೂರ್ಣ ಗಮನ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನತ್ತ ಇರಲಿದೆ. ಮುಂದಿನ ಒಂದು ವರ್ಷದಲ್ಲಿ ನಡೆಯಲಿರುವ ಪ್ರಮುಖ ಸರಣಿಗಳು ಗಂಭೀರ್ ಅವರ ಕೋಚಿಂಗ್ ವೃತ್ತಿಜೀವನದ ದಿಕ್ಕನ್ನು ನಿರ್ಧರಿಸಲಿವೆ. ಗಂಗೂಲಿ ನೀಡಿರುವ ಈ ಸಲಹೆಗಳನ್ನು ಗಂಭೀರ್ ಗಂಭೀರವಾಗಿ ಪರಿಗಣಿಸುತ್ತಾರಾ, ದಕ್ಷಿಣ ಆಫ್ರಿಕಾದ ಮಣ್ಣಿನಲ್ಲಿ ಭಾರತದ ವಿಶ್ವಕಪ್ ಕನಸು ನನಸಾಗುತ್ತಾ ಕಾದು ನೋಡಬೇಕಿದೆ,(ಏಜೆನ್ಸೀಸ್).