BRICS Summit | ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ದೃಢ ಹೆಜ್ಜೆ: 
ದೇಶ

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ದೃಢ ಹೆಜ್ಜೆ: ಜಾಗತಿಕ ರಾಜಕೀಯದಲ್ಲಿ ಪ್ರಭಾವ ಬೀರಲು ಇದುವೇ ಸರಿಯಾದ ಸಮಯ! | BRICS Summit

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದಿನಿಂದ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ (BRICS Summit) ದೆಹಲಿ ಸಂಪೂರ್ಣವಾಗಿ ಸಜ್ಜಾಗಿದೆ. ಈ ಹಿಂದೆ ನಡೆದ ಜಿ-20 ಶೃಂಗಸಭೆಯ ಮಾದರಿಯಲ್ಲೇ ಇಡೀ ನಗರಕ್ಕೆ ಅಭೇದ್ಯ ಭದ್ರತೆ ಒದಗಿಸಲಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು, ಆಹ್ವಾನಿತ ನಾಯಕರು ಹಾಗೂ ಜಾಗತಿಕ ಸಂಸ್ಥೆಗಳ ಪ್ರಮುಖರು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
2026 ಜನವರಿ 1 ರಂದು ಭಾರತವು ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, 2012, 2016 ಮತ್ತು 2021 ರ ನಂತರ ಭಾರತವು ನಾಲ್ಕನೇ ಬಾರಿಗೆ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ಬಾರಿಯ ಶೃಂಗಸಭೆಗೆ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯ ನಿರ್ಮಾಣ (Building Resilience, Innovation, Cooperation and Sustainability) ಎಂಬ ಆಶಯವನ್ನು ಇರಿಸಲಾಗಿದೆ. ಬಹುಪಕ್ಷೀಯ ಮಾತುಕತೆಗಳಲ್ಲಿ ಮುಂಚೂಣಿಯಲ್ಲಿರುವ ಭಾರತವು ವಿಷಯಾಧಾರಿತ ಚರ್ಚೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆಯಾದರೂ, ಈ ದೃಷ್ಟಿಕೋನಗಳನ್ನು ಕಾರ್ಯರೂಪಕ್ಕೆ ತರುವುದು ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಸರ್ವಸಮ್ಮತಿ ಮೂಡಿಸುವುದು ದೊಡ್ಡ ಸವಾಲಾಗಿದೆ.

ಬ್ರಿಕ್ಸ್ ವಿಸ್ತರಣೆ ಮತ್ತು ಜಾಗತಿಕ ರಾಜಕೀಯ ಬದಲಾವಣೆ

2006 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ವಿದೇಶಾಂಗ ಸಚಿವರ ಸಭೆಯೊಂದಿಗೆ ಬ್ರಿಕ್ ಆಕಾರ ಪಡೆಯಿತು. 2009 ಜೂನ್ 16 ರಂದು ರಷ್ಯಾದ ಯೆಕಟೆರಿನ್ಬರ್ಗ್‌ನಲ್ಲಿ ಮೊದಲ ಶೃಂಗಸಭೆ ನಡೆಯಿತು. 2010 ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯೊಂದಿಗೆ ಬ್ರಿಕ್ಸ್ ಆಗಿ ಬದಲಾಯಿತು. 2024 ರ ಜನವರಿಯಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಪೂರ್ಣಪ್ರಮಾಣದ ಸದಸ್ಯರಾಗಿ ಸೇರ್ಪಡೆಯಾದವು.
ಜೂನ್ 2025 ರಲ್ಲಿ ಇಂಡೋನೇಷ್ಯಾ 11ನೇ ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರವಾಗಿ ಜಾಗತಿಕ ವೇದಿಕೆಗೆ ಹೆಜ್ಜೆ ಇಟ್ಟಿತು. ಇದರೊಂದಿಗೆ ಬೆಲಾರಸ್, ಬೊಲಿವಿಯಾ, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥೈಲ್ಯಾಂಡ್, ವಿಯೆಟ್ನಾಂ ಸೇರಿದಂತೆ 10 ದೇಶಗಳು ಬ್ರಿಕ್ಸ್ ಪಾಲುದಾರ ದೇಶಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಅಮೆರಿಕದ ರಾಜಕೀಯ ಮತ್ತು ಆರ್ಥಿಕ ನೀತಿಗಳಲ್ಲಿ ಭಾರಿ ಬದಲಾವಣೆಗಳಾಗುತ್ತಿರುವ ಈ ಸಂದರ್ಭದಲ್ಲಿ, ಆರಂಭದಲ್ಲಿ ಕೇವಲ ಆರ್ಥಿಕ ವೇದಿಕೆಯಾಗಿದ್ದ ಬ್ರಿಕ್ಸ್, ಇದೀಗ ಜಾಗತಿಕ ರಾಜಕೀಯದಲ್ಲೂ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.

ಪಾಶ್ಚಿಮಾತ್ಯೇತರ ಹೊರತು ಪಾಶ್ಚಿಮಾತ್ಯ ವಿರೋಧಿ ಅಲ್ಲ

ಪ್ರಸ್ತುತ ಬ್ರಿಕ್ಸ್ ಮುಂದೆ ಇರುವ ಪ್ರಮುಖ ಸವಾಲೆಂದರೆ, ಈ ಒಕ್ಕೂಟವನ್ನು ಪಾಶ್ಚಿಮಾತ್ಯ ವಿರೋಧಿ ಮಾಡದೆ, ಪಾಶ್ಚಿಮಾತ್ಯೇತರ ಜಾಗತಿಕ ವೇದಿಕೆಯನ್ನಾಗಿ ಕಾಯ್ದುಕೊಳ್ಳುವುದು. ಚೀನಾ ಮತ್ತು ರಷ್ಯಾ ದೇಶಗಳು ಬ್ರಿಕ್ಸ್ ಅನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧದ ಅಸ್ತ್ರವನ್ನಾಗಿ ಬಳಸಲು ಯತ್ನಿಸುತ್ತಿದ್ದರೆ, ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗಿ ಸಮತೋಲಿತ ರಾಜತಾಂತ್ರಿಕತೆಯನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿದೆ.
ಬ್ರಿಕ್ಸ್‌ನ ಈ ಬೆಳವಣಿಗೆಯನ್ನು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಹಣಕಾಸು ಉಪಕ್ರಮಗಳು, ವ್ಯಾಪಾರ ನೀತಿಗಳು ಹಾಗೂ ಭದ್ರತಾ ವಿಚಾರಗಳಲ್ಲಿ ಪಾಶ್ಚಿಮಾತ್ಯ ಶಕ್ತಿಗಳು ತಮ್ಮದೇ ಆದ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ. ಇಂತಹ ವಾತಾವರಣದಲ್ಲಿ ಭಾರತವು ಕೇವಲ ಚರ್ಚೆಗಳಿಗೆ ಸೀಮಿತವಾಗದೆ, ದೃಢವಾದ ಪೂರೈಕೆ ಜಾಲಗಳು, ಮೌಲ್ಯವರ್ಧಿತ ಸರಪಳಿ ಹಾಗೂ ಬಲವಾದ ಭದ್ರತಾ ಚೌಕಟ್ಟನ್ನು ರೂಪಿಸುವ ಮೂಲಕ ಜಾಗತಿಕ ವೇದಿಕೆಯಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವೃದ್ಧಿಸಬೇಕಿದೆ(ಏಜೆನ್ಸೀಸ್​).