ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಮೂರು ದೇಶಗಳ ನಡುವಿನ ಯುದ್ಧವಾಗಿ ಉಳಿಯದೆ ಜಾಗತಿಕವಾಗಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಬೆಲೆಯೇರಿಕೆಯ ಬಾಂಬ್ ಎಲ್ಲ ದೇಶಗಳ ಮೇಲೂ ಅಪ್ಪಳಿಸಿದ್ದು, ಹಣದುಬ್ಬರ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದ್ದರೆ, ಆರ್ಥಿಕ ಪ್ರಗತಿಗೆ ಭಾರಿ ಹಿನಡೆ ಉಂಟಾಗಿದೆ. ಅಲ್ಲದೆ, ಭಾರತದ ವಿದೇಶಿ ವಿನಿಮಯ ವೆಚ್ಚದಲ್ಲಿ ಭಾರಿ ಏರಿಕೆ ಆಗಿದೆ. ಇದಕ್ಕೆ ಇನ್ನಾದರೂ ಒಂದಿಷ್ಟು ಕಡಿವಾಣ ಹಾಕದಿದ್ದರೆ, ಮುಂಬರುವ ದಿನಗಳು ಕಷ್ಟಕರ. ಹಾಗಾಗಿಯೇ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ವಿದೇಶಿ ವಿನಿಮಯ ಕಡಿಮೆ ಮಾಡುವುದಕ್ಕೆ ಪೂರಕವಾಗಿ ಅಗತ್ಯ ಹೆಜ್ಜೆಗಳನ್ನು ಇರಿಸಲು ದೇಶದ ಜನತೆಗೆ ಕರೆ ನೀಡಿದ್ದಾರೆ.
ಸರ್ಕಾರವೇ ಇರಲಿ, ಜನಸಾಮಾನ್ಯರೇ ಇರಲಿ ದೇಶಹಿತವೇ ಮೊದಲ ಆದ್ಯತೆ. ಯುದ್ಧಭೂಮಿಯಲ್ಲಿ ಹೋರಾಡುವುದು ಮಾತ್ರ ದೇಶಸೇವೆಯಲ್ಲ. ದೇಶ ಕ್ಲಿಷ್ಟಕರ, ಸಂಕೀರ್ಣ ಅಥವಾ ಸಂಕಷ್ಟದ ಸನ್ನಿವೇಶಗಳಲ್ಲಿ ಸಿಲುಕಿದಾಗ ಆ ಸ್ಥಿತಿಯಿಂದ ಹೊರಬರಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದು ಮತ್ತು ಆ ನಿಟ್ಟಿನಲ್ಲಿ ಶ್ರಮಿಸುವುದು ಕೂಡ ದೇಶಸೇವೆಯೇ. ಹಿಂದೊಮ್ಮೆ ದೇಶದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ ಉಂಟಾಗಿದ್ದ ಸನ್ನಿವೇಶದಲ್ಲಿ ಆಗಿನ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರು, ವಾರದಲ್ಲಿ ಒಂದು ದಿನ ಒಂದು ಹೊತ್ತು ಉಪವಾಸವಿರುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಅದಕ್ಕೆ ಜನರೂ ಸ್ಪಂದಿಸಿ, ಸೋಮವಾರ ಒಂದು ಹೊತ್ತು ಮಾತ್ರ ಊಟ ಮಾಡಿ, ಒಂದು ಹೊತ್ತು ಉಪವಾಸ ಮಾಡತೊಡಗಿದರು. ಅದಾದ ಕೆಲ ವರ್ಷಗಳಲ್ಲಿ ಸ್ಥಿತಿ ಸುಧಾರಿಸಿತು. ಆದರೆ, ಸಮಸ್ಯೆ ಬಂದಾಗ ಸಾಮೂಹಿಕ ಪರಿಹಾರದ ಹಾದಿ ಹೇಗೆ ಪರಿಣಾಮಕಾರಿಯಾಗಬಹುದು ಎಂಬುದಕ್ಕೆ ಇದು ನಿದರ್ಶನ.
ಫೆಬ್ರವರಿ 28ರಂದು ಆರಂಭವಾದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 40 ದಿನಗಳನ್ನು ಪೂರೈಸಿದ ನಂತರ, ಕದನವಿರಾಮ ಘೋಷಿಸಲಾಗಿದೆ. ಆದರೆ, ಉದ್ವಿಗ್ನ ಸ್ಥಿತಿ ಹಾಗೆಯೇ ಮುಂದುವರಿದಿದ್ದು, ಹೋರ್ಮುಜ್ ಜಲಸಂಧಿಯಲ್ಲಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಯುದ್ಧದ ಸನ್ನಿವೇಶದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಾಗಿ ಚಿನ್ನ, ಬೆಳ್ಳಿಯ ಖರೀದಿಗೆ ಮುಂದಾಗಿದ್ದರಿಂದ ಇವುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಮುಖ್ಯವಾಗಿ, ಭಾರತ ಆಮದಿಗಾಗಿ ಮಾಡುತ್ತಿರುವ ವೆಚ್ಚ ಹೆಚ್ಚುತ್ತಲೇ ಇರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ (95 ರೂ. ಆಸುಪಾಸು) ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕುಸಿದಿದೆ. ಹೇಗೆ ಮನೆಯ ಬಜೆಟ್ ಹದ್ದು ಮೀರಿದಾಗ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕುತ್ತೇವೆಯೋ, ದೇಶದ ಬಜೆಟ್ ಅಥವಾ ಆರ್ಥಿಕತೆ ವಿಷಯದಲ್ಲೂ ಇಂಥ ಕ್ರಮ ಅನಿವಾರ್ಯ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಜನಸಾಮಾನ್ಯರು ಕೈಗೊಳ್ಳುವ ಸಣ್ಣ ಸಣ್ಣ ನಿರ್ಧಾರಗಳು ಮತ್ತು ಇರಿಸುವ ಸಣ್ಣ ಸಣ್ಣ ಹೆಜ್ಜೆಗಳು ಕೂಡ ಭಾರತೀಯ ಆರ್ಥಿಕತೆಯ ಮೇಲಿನ ಪ್ರಸಕ್ತ ಒತ್ತಡವನ್ನು ತಗ್ಗಿಸಬಹುದು.
ಅಡುಗೆಗೆ ಖಾದ್ಯತೈಲದ ಬಳಕೆ ಕಡಿಮೆ ಮಾಡುವುದು ದೈಹಿಕ ಆರೋಗ್ಯದ ನಿಟ್ಟಿನಲ್ಲೂ ಮತ್ತು ದೇಶದ ಆರ್ಥಿಕ ಸ್ವಾಸ್ಥ್ಯದ ನಿಟ್ಟಿನಲ್ಲೂ ಲಾಭದಾಯಕ. 2024-25ರಲ್ಲಿ ಭಾರತ ಖಾದ್ಯತೈಲ ಆಮದಿಗಾಗಿ 1.6 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಇದು 2023-24ಕ್ಕೆ ಹೋಲಿಸಿದರೆ 22% ಜಾಸ್ತಿ.
ಭಾರತ ಈ ವರ್ಷ ವಿದೇಶಗಳಿಂದ 1.50 ಲಕ್ಷ ಕೋಟಿ ರೂ. ಮೌಲ್ಯದ ರಸಗೊಬ್ಬರವನ್ನು ಖರೀದಿಸಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. 76ರಷ್ಟು ಅಧಿಕ! ಭಾರತ ತನ್ನ ಅವಶ್ಯಕತೆಯ 30% ಯೂರಿಯಾ, 90% ಡಿಎಪಿ ಹಾಗೂ 100% ಪೊಟಾಶ್ ವಿದೇಶಗಳಿಂದಲೇ ಖರೀದಿಸುತ್ತಿದೆ. ಆದರೆ, ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿದರೆ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ರಸಗೊಬ್ಬರದ ಖರೀದಿಗೆ ಭಾರತ ವೆಚ್ಚ ಮಾಡುತ್ತಿರುವ ಆಮದು ವೆಚ್ಚ ತಗ್ಗುತ್ತದೆ. ಸ್ವದೇಶಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಿ, ವ್ಯಾಪಾರಿಗಳಿಗೂ ಅನುಕೂಲವಾಗುತ್ತದೆ. ಆರೋಗ್ಯಕ್ಕೂ ಪೂರಕ.
ಭಾರತದಲ್ಲಿ ಕಚ್ಚಾ ತೈಲದ ನಿಕ್ಷೇಪಗಳಿಲ್ಲ ಎಂಬುದು ಗೊತ್ತಿರುವಂಥದ್ದೇ. ಅಲ್ಲದೆ, ಭಾರತ ತನ್ನ ಅವಶ್ಯಕತೆಯ ಶೇಕಡ 70ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತ ಕಚ್ಚಾ ತೈಲ ಆಮದಿಗಾಗಿಯೇ 11.66 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ (ಈ ಮೊತ್ತವು ಭಾರತ ತನ್ನ ಮೂಲಸೌಕರ್ಯಗಳಿಗಾಗಿ ಇಡೀ ವರ್ಷಕ್ಕೆ ಮಾಡುತ್ತಿರುವ ವೆಚ್ಚಕ್ಕೆ ಸಮನಾಗಿದೆ). 2025-26ರಲ್ಲಿ ಈ ವೆಚ್ಚ 10.35 ಲಕ್ಷ ಕೋಟಿ ರೂ. ಇತ್ತು. ಆದರೆ, 2026ರ ಫೆಬ್ರವರಿ ಕೊನೆಯಲ್ಲಿ ಯುದ್ಧ ಆರಂಭವಾದ ನಂತರ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 44ರಷ್ಟು ಏರಿಕೆಯಾಗಿದೆ. ಹೀಗಿರುವಾಗ, ಕಚ್ಚಾ ತೈಲದ ಆಮದಿನ ವೆಚ್ಚ 17 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಕಳೆದ ತಿಂಗಳು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸರ್ಚಾರ್ಜ್ ಅನ್ನು ಇಳಿಸಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು 14 ಸಾವಿರ ಕೋಟಿ ರೂ. ಮತ್ತು ತೈಲ ಕಂಪನಿಗಳಿಗೆ ದಿನಕ್ಕೆ 1600 ಕೋಟಿ ರೂ. ನಷ್ಟವಾಗುತ್ತಿದೆ. ಯುದ್ಧ ಆರಂಭದ ಹಿಂದಿನ ದಿನ (ಫೆಬ್ರವರಿ 27) ಪ್ರತಿ ಬ್ಯಾರೆಲ್‌ಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ 72.87 ಡಾಲರ್ ಇದ್ದದ್ದು, ಮೇ 11ಕ್ಕೆ 103.78 ಡಾಲರ್‌ಗೆ ಏರಿಕೆಯಾಗಿದೆ.
ಏನು ಮಾಡಬಹುದು?: ಈ ವೆಚ್ಚವನ್ನು ತಗ್ಗಿಸಬೇಕಾದರೆ ಪೆಟ್ರೋಲ್, ಡೀಸೆಲ್‌ನ ಬಳಕೆಯನ್ನು ಮಿತಗೊಳಿಸಬೇಕು. ಮಹಾನಗರಗಳಲ್ಲಿ ಸಂಚಾರಕ್ಕೆ ಮೆಟ್ರೋ ಬಳಸುವುದು ಸೂಕ್ತ. ಮನೆಯಿಂದಲೇ ಕೆಲಸ ನಿರ್ವಹಣೆ, ಆನ್‌ಲೈನ್ ಸಭೆಗಳ ಮುಖಾಂತರ ಓಡಾಟ ಕಡಿಮೆಗೊಳಿಸಿ, ಇಂಧನ ಬಳಕೆ ತಗ್ಗಿಸಬಹುದಾಗಿದೆ.
ಚಿನ್ನವನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಪ್ರಪಂಚದ ಪ್ರಮುಖ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದು. ಭಾರತ ಪ್ರತಿವರ್ಷ ಸರಾಸರಿ 700-800 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಭಾರತ ತನಗೆ ಅವಶ್ಯವಿರುವ ಚಿನ್ನದ ಶೇಕಡ 95ರಷ್ಟನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಒಟ್ಟು ಆಮದಿನ ಶುಲ್ಕದಲ್ಲಿ ಶೇಕಡ 9ರಷ್ಟು ಚಿನ್ನದ್ದೇ ಪಾಲು. ಅಂದರೆ ಈ ಖರೀದಿಗೆ ಭಾರತ ವಾರ್ಷಿಕವಾಗಿ ಮಾಡುತ್ತಿರುವ ವೆಚ್ಚ 6 ಲಕ್ಷ ಕೋಟಿ ರೂಪಾಯಿ! ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಚಿನ್ನದ ಆಮದು ಶೇ. 24ರಷ್ಟು ಹೆಚ್ಚಾಗಿದೆ.
ಸಮಸ್ಯೆ ಏನು?ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಮದುದಾರರು ಚಿನ್ನವನ್ನು ಖರೀದಿಸುವಾಗ ಡಾಲರ್‌ನಲ್ಲಿ ವ್ಯವಹರಿಸುತ್ತಾರೆ. ಇದರಿಂದ ಸ್ವಾಭಾವಿಕವಾಗಿಯೇ ಡಾಲರ್ ಹೊರಹರಿವು ಹೆಚ್ಚಾಗುತ್ತದೆ. ಭಾರತೀಯ ಆಮದುದಾರರು ಆ ಡಾಲರ್‌ಗಳನ್ನು ಪಡೆಯಲು ಹೆಚ್ಚು ರೂಪಾಯಿಯನ್ನು ಖರ್ಚು ಮಾಡುತ್ತಾರೆ. ಲಕ್ಷಾಂತರ ಜನರು ಏಕಕಾಲದಲ್ಲಿ ಚಿನ್ನವನ್ನು ಖರೀದಿಸಿದಾಗ, ಡಾಲರ್‌ಗೆ ಬೇಡಿಕೆ ಹೆಚ್ಚಾಗಿ ರೂಪಾಯಿಯ ಮೌಲ್ಯ ಕುಸಿಯುತ್ತದೆ. ಪ್ರಸಕ್ತ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಚಿನ್ನದ ಬೆಲೆ 1.52 ಲಕ್ಷ ಡಾಲರ್ ಆಸುಪಾಸಿನಲ್ಲಿದೆ. ಈ ಬೆಲೆಯಲ್ಲಿ ಚಿನ್ನ ಖರೀದಿಸುತ್ತ ಹೋದರೆ ಭಾರತದ ವಿದೇಶ ಮೀಸಲು ನಿಧಿಯಲ್ಲಿ ಡಾಲರ್ ವೇಗವಾಗಿ ಕರಗುತ್ತ ಹೋಗುತ್ತದೆ.
ಏನು ಮಾಡಬಹುದು?: ಮುಂಬರುವ ಒಂದು ವರ್ಷವಾದರೂ ಅನಗತ್ಯವಾಗಿ ಚಿನ್ನ ಖರೀದಿಯನ್ನು ತಡೆದರೆ, ಭಾರತದ ಆಮದು ಶುಲ್ಕ ಕಡಿಮೆಯಾಗುತ್ತದೆ. ಇದರಿಂದ ಫಾರನ್ ರಿಸರ್ವ್‌ನಲ್ಲಿ ಡಾಲರ್ ಸ್ಥಿರವಾಗಿ ಇರುತ್ತದೆ ಮತ್ತು ರೂಪಾಯಿ ವೇಗವಾಗಿ ದುರ್ಬಲಗೊಳ್ಳುವುದಿಲ್ಲ. ಷೇರು ಮಾರುಕಟ್ಟೆ ಕುಸಿತ ಕಂಡಿರುವುದರಿಂದ ತುಂಬಾ ಜನರು ಸುರಕ್ಷಿತ ಹೂಡಿಕೆಗಾಗಿ ಚಿನ್ನದತ್ತ ವಾಲಿದ್ದು, ಇದು ಖರೀದಿ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಇಂಥ ಆತಂಕದ ಖರೀದಿ ಸದ್ಯದ ಮಟ್ಟಿಗಂತೂ ಅನಗತ್ಯ.
ವಿದೇಶಗಳಲ್ಲಿ ಅದ್ದೂರಿ ಮದುವೆಯಾದರೆ ಅದಕ್ಕೆ ಮಾಡುವ ಖರ್ಚು ವಿದೇಶಿ ಆರ್ಥಿಕತೆಗೆ ಸೇರುತ್ತದೆ. ಭಾರತದಲ್ಲಿ ಮದುವೆಗೆ ಪ್ರಶಸ್ತವಾದ ಪ್ರಸಿದ್ಧ ತಾಣಗಳು ದೊಡ್ಡ ಸಂಖ್ಯೆಯಲ್ಲಿ ಇವೆ. ಭಾರತದಲ್ಲೇ ಮದುವೆಯಾಗುವುದರಿಂದ, ಮಾಡುವ ಖರ್ಚು ಇಲ್ಲಿಯವರಿಗೇ ಸೇರುತ್ತದೆ, ತಾತ್ಕಾಲಿಕವಾಗಿ ಉದ್ಯೋಗಸೃಷ್ಟಿಯೂ ಆಗುತ್ತದೆ. ಅಲ್ಲದೆ, ರಜೆಯ ಪ್ರವಾಸಕ್ಕಾಗಿ ವಿದೇಶಗಳಿಗೆ ತೆರಳುವ ಬದಲು ದೇಶದೊಳಗಿನ ಪ್ರವಾಸಿತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಮೋದಿ ಹೇಳಿದ್ದೇನು?
ಒಂದು ವರ್ಷ ಕಾಲ ಚಿನ್ನ ಖರೀದಿಯಿಂದ ದೂರ ಉಳಿಯಿರಿ.
ವಿದೇಶ ಪ್ರಯಾಣವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಿ.
ಪೆಟ್ರೋಲ್ ಮತ್ತು ಡೀಸೆಲ್ ಮಿತವಾಗಿ ಬಳಸಿ.
ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿ.
ಕಾರ್ಪೂಲಿಂಗ್ ಮಾಡಲು ಪ್ರಯತ್ನಿಸಿ.
ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ.
ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡಿ. ವೃತ್ತಿಪರ ಸಂವಹನಕ್ಕಾಗಿ ವಿಡಿಯೋ ಕಾನ್ಫರೆನ್ಸ್ ಬಳಸಿ.
ಆನ್‌ಲೈನ್ ಮೂಲಕ ಸಭೆಗಳಲ್ಲಿ ಭಾಗಿಯಾಗಿ.
ದೇಶದ ಆರ್ಥಿಕ ಸ್ಥಿರತೆಗಾಗಿ, ಆಮದು ಕಡಿಮೆ ಮಾಡಿ, ವಿದೇಶಿ ವಿನಿಮಯ ಉಳಿಸಿ.