North  
ದೇಶ

ದಕ್ಷಿಣದಲ್ಲಿ ಉತ್ತರ ನಿರುತ್ತರವಾದದ್ದು ಹೀಗೆ...

ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಹುಲುಸಾಗಿ ತಲೆಯೆತ್ತಿದ ಕ್ರಿಶ್ಚಿಯನ್ ಮಿಷನರಿ ಶಿಕ್ಷಣ ಸಂಸ್ಥೆಗಳ ಉಪಯೋಗವನ್ನು ಗಣನೀಯ ಪ್ರಮಾಣದಲ್ಲಿ ಪಡೆದುಕೊಂಡದ್ದು ಬಂಗಾಲ ಮತ್ತು ಮದ್ರಾಸ್​ನ ಹಿಂದೂ ಉಚ್ಚವರ್ಗ. ಅದಕ್ಕೆ ಆ ಅವಕಾಶ ದೊರೆಯಲು ಕಾರಣ ಆ ಎರಡು ಪ್ರಾಂತ್ಯಗಳು ಈಸ್ಟ್ ಇಂಡಿಯಾ ಕಂಪೆನಿಯ ನೇರ ಆಡಳಿತದಲ್ಲಿದ್ದುದು ಮತ್ತು ಹೊಸ ವ್ಯವಸ್ಥೆಗೆ ಸುಲಭವಾಗಿ ಹೊಂದಿಕೊಳ್ಳುವ, ಹೊಂದಿಕೊಂಡು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ಹಾಗೂ ಆ ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮನೋಭಾವವನ್ನು ಅದು ಹೊಂದಿದ್ದುದು.
ಹೀಗಾಗಿಯೇ 1857-58ರ ಪ್ರಥಮ ಸ್ವಾತಂತ್ರ್ಯ ಹೋರಾಟದ ನಂತರ ಕಂಪೆನಿಯ ಅಧಿಕಾರ ಕೊನೆಗೊಂಡು ಭಾರತ ಒಂದು ವಸಾಹತು ಸಾಮ್ರಾಜ್ಯವಾಗಿ ಬ್ರಿಟಿಷ್ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟು, ಅದರಂತೆ ಬ್ರಿಟಿಷ್ ಭಾರತೀಯ ಆಡಳಿತಶಾಹಿ (ಬ್ಯೂರಾಕ್ರ್ರ) ಸೃಷ್ಟಿಯಾದಾಗ ಅದರ ದೊಡ್ಡ ಭಾಗ ಬಿದ್ದದ್ದು ಇಂಗ್ಲಿಷ್ ಶಿಕ್ಷಣಕ್ರಮದಲ್ಲಿ ಅದಾಗಲೇ ಎರಡು ಮೂರು ತಲೆಮಾರುಗಳನ್ನು ಕಳೆದಿದ್ದ ಹಿಂದೂ ಉಚ್ಚವರ್ಗದ ಕೈಗೆ. ಆದರೆ ತಮಗೆ ದಕ್ಕಿದ ಈ ಸ್ಥಾನಮಾನ ಮತ್ತು ಆರ್ಥಿಕ ಶಕ್ತಿಯನ್ನು ಬಂಗಾಲಿ ಹಿಂದೂ ಉಚ್ಚವರ್ಗ ಮತ್ತು ತಮಿಳು ಹಿಂದೂ ಉಚ್ಚವರ್ಗ ಬಳಸಿಕೊಂಡದ್ದೇ ಬೇರೆಬೇರೆ ಬಗೆಯಲ್ಲಿ. ಬಂಗಾಲದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯ ಪ್ರಾಬಲ್ಯದಿಂದಾಗಿ ಬಂಗಾಲಿ ಹಿಂದೂ ಉಚ್ಚವರ್ಗ ಇತರೆಲ್ಲಾ ಹಿಂದೂಗಳ ಜತೆ ತಾನಿರುವುದರಲ್ಲೇ ತನ್ನ ಕ್ಷೇಮವಿದೆ ಎಂದು ತಿಳಿಯಿತು. ಹೀಗಾಗಿ ಅಲ್ಲಿ ಹಿಂದೂಗಳು ಜಾತಿಯಿಂದಾಗಿ ವಿಭಜನೆಗೊಳ್ಳುವುದು ಹಾಗೂ ಜಾತಿ ತಾರತಮ್ಯ ದೊಡ್ಡದಾಗಿ ತಲೆಯೆತ್ತಲಿಲ್ಲ. ಬಂಗಾಲದಲ್ಲಿ ಅಂದು ಆರಂಭವಾದ ಧಾರ್ವಿುಕ ಕಂದರ 1947ರ ವಿಭಜನೆಯ ನಂತರವೂ ಮುಂದುವರೆದುಕೊಂಡು ಬಂದಿದೆ, ಹಾಗೆಯೇ ಜಾತಿ ಕಂದರ ಆಳವಾಗಿಲ್ಲ.
ಆದರೆ ಮದ್ರಾಸ್/ತಮಿಳುನಾಡಿನಲ್ಲಿ ಆದದ್ದೇ ಬೇರೆ. ತನ್ನ ಆಡಳಿತಶಾಹಿ ಸ್ಥಾನಮಾನ ಹಾಗೂ ಆರ್ಥಿಕ ಶಕ್ತಿಗೆ ಪರಧರ್ವಿುಯರಿಂದ ಅಪಾಯವನ್ನು ಕಾಣದ ತಮಿಳು ಹಿಂದೂ ಉಚ್ಚವರ್ಗ ತನ್ನೆಲ್ಲಾ ಸಾಮಾಜಿಕ, ಆರ್ಥಿಕ ಹಾಗೂ ಆಡಳಿತಶಾಹಿ ಮದವನ್ನು ತೋರಿದ್ದು ಇತರ ಹಿಂದೂ ಜಾತಿಗಳ ಮೇಲೆ. ಇದರಿಂದಾಗಿ ತಮಿಳು ಹಿಂದೂಗಳಲ್ಲಿ ಜಾತಿ ತಾರತಮ್ಯ ಹಾಗೂ ವೈಷಮ್ಯ ದೊಡ್ಡದಾಗಿ ಬೆಳೆದು ಅಂತಿಮವಾಗಿ ಶತಮಾನದ ಹಿಂದೆ ವ್ಯಾಪಕ ಬ್ರಾಹ್ಮಣ-ವಿರೋಧಿ ಆಂದೋಲನಕ್ಕೆ ಕಾರಣವಾಯಿತು. ಆಗ ಹಲವು ತಮಿಳು ಬ್ರಾಹ್ಮಣ ಕುಟುಂಬಗಳು ಮೈಸೂರು ಮತ್ತು ಪಾಲಕ್ಕಾಡಿಗೆ ವಲಸೆಹೋದದ್ದು ಈಗ ಇತಿಹಾಸ. ಇಷ್ಟಾಗಿಯೂ ತಮಿಳು ಭಾಷೆ ಹಾಗೂ ತಮಿಳುನಾಡಿನ ಏಳಿಗೆಯ ವಿಷಯ ಬಂದಾಗ ತಮಿಳರು ರಾಜ್ಯದ ಒಳಗಿರಲಿ ಹೊರಗಿರಲಿ ಜಾತಿ ವೈರವನ್ನು ಮರೆತು ಒಟ್ಟಿಗೆ ಶ್ರಮಿಸುವುದು ಇತರ ಭಾಷಿಕರಿಗೆ ಅನುಕರಣೀಯ. ಇದಕ್ಕೊಂದು ದೊಡ್ಡ ಉದಾಹರಣೆಯಾಗಿ ನೀಲಗಿರಿ ಜಿಲ್ಲೆಯ ಕುರಿತಾಗಿ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅನುಸರಿಸಿದ ನಡೆಯನ್ನು ನೋಡಬಹುದು. ಭಾಷಾವಾರು ಪ್ರಾಂತ್ಯಗಳ ನಿರ್ಮಾಣ ಅನಿವಾರ್ಯವಾಗುವ ಹೊತ್ತಿಗೆ ಆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮೂರು ಕನ್ನಡ ನೆಲವಾಗಿದ್ದವು, ನಾಲ್ಕನೆಯ (ಗೂಡಲೂರು) ತಾಲೂಕಿನಲ್ಲಿ ಮಲಯಾಳಿ ಪ್ರಾಬಲ್ಯ. ಹೀಗಾಗಿ ಆ ಜಿಲ್ಲೆಯನ್ನು ಕರ್ನಾಟಕ (ಮೈಸೂರು) ಮತ್ತು ಕೇರಳ ರಾಜ್ಯಗಳ ನಡುವೆ ಹಂಚುವುದು ನ್ಯಾಯಸಮ್ಮತವಾಗಿತ್ತು. ಆದರೆ ಪ್ರಾಕೃತಿಕ ಸೌಂದರ್ಯ ಮತ್ತು ಚಹಾ ತೋಟಗಳಿಗೆ ಹೆಸರಾದ, ಗಿರಿಧಾಮಗಳ ಜತೆ ರಾಷ್ಟ್ರೀಯ ಮಹತ್ವದ ವೆಲ್ಲಿಂಗ್ಟನ್ ಸೇನಾ ತರಬೇತಿ ಕೇಂದ್ರವಿರುವ ಆ ಜಿಲ್ಲೆ ಇಡಿಯಾಗಿ ತಮಿಳುನಾಡು (ಮದ್ರಾಸ್) ರಾಜ್ಯಕ್ಕೆ ಸೇರಿದ್ದು ರಾಷ್ಟ್ರೀಯ ಸ್ತರದ ರಾಜಕಾರಣಿ ರಾಜಗೋಪಾಲಾಚಾರಿಯವರ ಕೈವಾಡದಿಂದ. ಅದನ್ನು ಪರಿಣಾಮಕಾರಿಯಾಗಿ ವಿರೋಧಿಸಿ ತಡೆಯಬಲ್ಲ ನಾಯಕರು ಅಂದು ಕರ್ನಾಟಕ ಮತ್ತು ಕೇರಳಗಳಲ್ಲಿರಲಿಲ್ಲ. ಇಂದು ಆ ಜಿಲ್ಲೆ ಇಡಿಯಾಗಿ ತಮಿಳುಮಯ. ಅದನ್ನು ತಮಿಳುನಾಡಿನ ಸರ್ಕಾರಗಳು ಸಾಧಿಸಿದ್ದು ಶ್ರೀಲಂಕಾದಲ್ಲಿ ಸಿಂಹಳೀಯ ಸರ್ಕಾರಗಳು ತಮಿಳರನ್ನು ಅವರ ನೆಲದಲ್ಲೇ ಮೂಲೆಗುಂಪಾಗಿಸಲು ಬಳಸಿದ ತಂತ್ರಗಳನ್ನೇ ಬಳಸಿ ಎಂದು ಪತ್ರಕರ್ತ ಕ್ಲಾಡ್ ಆಲ್ವಾರಿಸ್ ನಾಲ್ಕು ದಶಕಗಳ ಹಿಂದೆಯೇ, ತಮಿಳುನಾಡಿನ ರಾಜಕಾರಣಿಗಳು ಶ್ರೀಲಂಕಾ ತಮಿಳರ ಸಮಸ್ಯೆಯ ಕುರಿತಾಗಿ ದನಿಯೆತ್ತುತ್ತಿದ್ದ ಸಮಯದಲ್ಲೇ, ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ವಿವರವಾದ ಲೇಖನವೊಂದರಲ್ಲಿ ದಾಖಲಿಸಿದ್ದರು. ಹಾಗೆಯೇ ತಮಿಳು-ತೆಲುಗು ಗಡಿ ಭಾಗದ, ತೆಲುಗರು ಅಧಿಕವಾಗಿದ್ದ ತಿರುತ್ತಣಿ ಪುಣ್ಯಕ್ಷೇತ್ರ ತಮಿಳುನಾಡಿಗೆ ಸೇರುವುದರಲ್ಲೂ ರಾಜಗೋಪಾಲಾಚಾರಿಯವರ ಪಾತ್ರವಿತ್ತು. ತಿರುಪತಿ ಮತ್ತು ತಿರುತ್ತಣಿ ಪುಣ್ಯಕ್ಷೇತ್ರಗಳೆರಡನ್ನೂ ನಿಮಗೇ ಕೊಡಲಾಗದು, ಒಂದನ್ನು ಆಯ್ದುಕೊಳ್ಳಿ ಎಂದು ರಾಷ್ಟ್ರೀಯ ನಾಯಕ ರಾಜಗೋಪಾಲಾಚಾರಿ ಖಡಾಖಂಡಿತವಾಗಿ ಹೇಳಿದಾಗ ವಾಸ್ತವದ ಅರಿವಿನ ಜತೆ ಭವಿಷ್ಯದ ಮುನ್ನೋಟವೂ ಇದ್ದ ಜಾಣ ತೆಲುಗರು ತಿರುಪತಿಯನ್ನು ಆಯ್ದುಕೊಂಡರು.
1950ರ ದಶಕದಲ್ಲಿ ಮದ್ರಾಸ್ ಪ್ರಾಂತ್ಯ ತನ್ನ ಬಹುಪಾಲು ತಮಿಳೇತರ ಪ್ರದೇಶಗಳನ್ನು ಕಳೆದುಕೊಂಡು ಮದ್ರಾಸ್ ರಾಜ್ಯವಾಗುವ ಹೊತ್ತಿಗೆ ಅಲ್ಲಿ ದ್ರವಿಡಿಯನ್ ಚಳವಳಿ ಉತ್ತುಂಗಕ್ಕೇರಿತ್ತು. ತಮಿಳು ಭಾಷೆಯ ಹಿರಿಮೆಯೊಂದಿಗೆ ಬ್ರಾಹ್ಮಣರು ಮೂಲತಃ ತಮಿಳರಲ್ಲ ಎಂಬ ಅಭಿಪ್ರಾಯವೂ ಸೇರಿಕೊಂಡು ದ್ರವಿಡಿಯನ್ ಚಳವಳಿ ರಾಷ್ಟ್ರಹಿತಕ್ಕೇ ಘಾತಕವಾಗುವ ಸ್ಥಿತಿ ತಲುಪಿತ್ತು. ತಮಿಳುನಾಡಿನಲ್ಲಿ ಜಾತಿ ತಾರತಮ್ಯ ಉಚ್ಚವರ್ಗದ ದಬ್ಬಾಳಿಕೆ ಇರಲಿಲ್ಲವೆಂದಲ್ಲ. ಆದರೆ ಅದನ್ನು ಇ.ವಿ. ರಾಮಸ್ವಾಮಿ ನಾಯ್ಕರ್ (ಪೆರಿಯಾರ್) ಉತ್ಪೇಕ್ಷಿಸಿ ಒಂದು ವೈಚಾರಿಕ-ರಾಜಕೀಯ ವಿಚಾರಧಾರೆಯಾಗಿ ಬೆಳೆಸಿದ್ದನ್ನು ನಿರಾಕರಿಸಲಾಗುವುದಿಲ್ಲ. ಸ್ವಾತಂತ್ರಾ್ಯಂದೋಲನದ ದಿನಗಳಲ್ಲಿ ಯುರೋಪಿಯನ್ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ದೇಶೀಯ ಶಾಲೆ ಕಾಲೇಜುಗಳನ್ನು ಸ್ಥಾಪಿಸಿದರೂ ಅವುಗಳಲ್ಲಿ ಹಿಂದೂ ಉಚ್ಚವರ್ಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿದ್ದು ಪೆರಿಯಾರ್​ರ ವಿಚಾರಗಳನ್ನು ಗಟ್ಟಿಮಾಡಿದ್ದಲ್ಲದೆ ತಮಿಳರು ಉದ್ಧಾರವಾಗಬೇಕಾದರೆ ಬ್ರಾಹ್ಮಣರು ನಂಬಿದ ಹಿಂದೂ ಧರ್ಮವನ್ನೇ ತಿರಸ್ಕರಿಸಬೇಕೆನ್ನುವ ನಿಲುವಿಗೆ ಅವರು ಬರುವುದಕ್ಕೂ ಕಾರಣವಾಯಿತು. ಆ ನಿಲುವು ಐತಿಹಾಸಿಕವಾಗಿ, ಧಾರ್ವಿುಕವಾಗಿ, ವೈಚಾರಿಕವಾಗಿ, ರ್ತಾಕವಾಗಿ ಸರಿಯೇ ಎನ್ನುವುದು ಪ್ರಶ್ನಾರ್ಹವಾದರೂ ಪೆರಿಯಾರ್​ರ ಆ ವಿಚಾರಧಾರೆ ತಮಿಳು ಸಮಾಜವನ್ನು ರಾಜಕೀಯವಾಗಿ ಸೀಳಿದ್ದಂತೂ ನಿಜ. ಹಾಗಾಗಿ ಸ್ವಾತಂತ್ರ್ಯದ ಹೊತ್ತಿಗೆ ತಮಿಳುನಾಡಿನಲ್ಲಿ ಪ್ರತ್ಯೇಕತಾ ಮನೋಭಾವ ಆತಂಕಕಾರಿಯೆನ್ನುವ ಮಟ್ಟಕ್ಕೆ ತಲೆಯೆತ್ತಿತ್ತು. ಆದರೆ ಪ್ರತ್ಯೇಕ ತಮಿಳುನಾಡು ತನ್ನೆಲ್ಲಾ ಅಗತ್ಯಗಳಿಗೆ ಭಾರತದ ಮೇಲೆ ದೊಡ್ಡದಾಗಿ ಅವಲಂಬಿತವಾಗಿರಬೇಕಾಗುತ್ತದೆ ಹಾಗೂ ಭಾರತದೊಳಗೇ ಬ್ಲ್ಯಾಕ್​ವೆುೕಲ್ ಸಹ ಸೇರಿದಂತೆ ವಿವಿಧ ಬಗೆಗಳಲ್ಲಿ ಬಡಿದಾಡಿಕೊಂಡು ಇರುವುದೇ ತಮಿಳರ ಆರ್ಥಿಕ ಹಾಗೂ ರಾಜಕೀಯ ಉನ್ನತಿಗೆ ಸಹಾಯಕ ಎಂಬ ಅರಿವು ದ್ರಾವಿಡ ಕಳಗಂ ಪಕ್ಷದಲ್ಲೇ ಬಹುತೇಕರಿಗೆ ತಟ್ಟಿದ್ದರಿಂದಾಗಿ ಪ್ರತ್ಯೇಕತಾ ಮನೋಭಾವ ಹಿಂದೆ ಸರಿಯಿತು. ಆ ಸ್ಥಾನದಲ್ಲಿ ಹಿಂದಿ ವಿರೋಧ ದೊಡ್ಡದಾಗಿ ತಲೆಯೆತ್ತಿ ದ್ರಾವಿಡ ಕಳಗಂಗೆ ಪ್ರಬಲ ರಾಜಕೀಯ ಅಸ್ತ್ರವಾಗಿ ಬೆಳೆದು ನಿಂತಿತು.
ಹಾಗೆ ನೋಡಿದರೆ 1960ರ ದಶಕದಲ್ಲಿ ಕಾಂಗ್ರೆಸ್ ನಾಯಕತ್ವದಲ್ಲಿ ತಮಿಳುನಾಡು (ಮದ್ರಾಸ್) ರಾಜ್ಯ ಉತ್ತಮ ಆಡಳಿತ ಹೊಂದಿತ್ತು ಹಾಗೂ ಜನಪರ ಯೋಜನೆಗಳಲ್ಲಿ ರಾಷ್ಟ್ರಕ್ಕೇ ಮಾದರಿಯಾಗಿತ್ತು. ಶಾಲಾಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ದೇಶದಲ್ಲೇ ಮೊಟ್ಟಮೊದಲಿಗೆ ಜಾರಿಗೆ ತಂದಿದ್ದೇ ಕಾಮರಾಜ್ ಸರ್ಕಾರ. ಅವರ ನಂತರದ ಭಕ್ತವತ್ಸಲಂ ಸರ್ಕಾರ ಸಹ ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳಿಗಾಗಿ ದೇಶಾದ್ಯಂತ ಮನ್ನಣೆ ಪಡೆದಿತ್ತು. ಆದರೆ ಅದೆಲ್ಲವನ್ನೂ ಮರೆಸಿಹಾಕಿದ್ದು ಹಿಂದಿ ವಿರೋಧ ಮತ್ತು ಅದರ ಭಾಗವಾಗಿ ಬೆಳೆದ ಉತ್ತರ ವಿರೋಧ. ಅದರೊಂದಿಗೆ 1967ರ ಬರಗಾಲ ಮತ್ತು ಅಕ್ಕಿಯ ಕೊರತೆಯೂ ಸೇರಿಕೊಂಡು ಆ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಭಕ್ತವತ್ಸಲಂ ಸರ್ಕಾರವನ್ನು ಧೂಳಿಪಟ ಮಾಡಿ ಡಿಎಂಕೆ ಪಕ್ಷವನ್ನು ಗದ್ದುಗೆಗೇರಿಸಿತು. ಅದರೊಂದಿಗೆ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಗ್ರಹಣ ಹಿಡಿಯಿತು. ಆ ಗ್ರಹಣವಿನ್ನೂ ಬಿಟ್ಟಿಲ್ಲ. ಮೊದಲಿಗೆ ಕಾಂಗ್ರೆಸ್​ಗೆ ಹಿಡಿದ ಆ ಗ್ರಹಣ ನಂತರ ಆ ಪಕ್ಷ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ‘ಬಡವಾ ನೀ ಮಡಗಿದ ಹಾಗಿರು’ ಎಂಬ ನೀತಿಗೆ ಆತುಕೊಂಡಿತು. ಆದರೆ ತಾನು ಬಡವನೂ ಅಲ್ಲ, ಮಡಗಿದ ಹಾಗೆ ಇರುವುದಿಲ್ಲ ಎಂಬ ನಿಲುವು ತಳೆದ ಬಿಜೆಪಿ, ಹಿಂದಿ ವಿರೋಧವನ್ನು ಸಹಿಸಿಕೊಂಡು, ‘ಉತ್ತರ ಗ್ರಹಣ’ದಿಂದ ಹೊರಬರಲು ದೃಢ ಸಂಕಲ್ಪ ಮಾಡಿದೆ. ಇದು ತಮಿಳುನಾಡಿನ ರಾಜಕಾರಣವನ್ನು ವರ್ಣಮಯ ಅಷ್ಟೇ ಅಲ್ಲ, ಅನಿಶ್ಚಿತಗೊಳಿಸಿದೆ.
ಕಳೆದ ಐದು ದಶಕಗಳು ತಮಿಳುನಾಡಿನ ರಾಜಕಾರಣದ ಎರಡು ಬಹುಮುಖ್ಯ ಆಯಾಮಗಳನ್ನು ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟಿವೆ. ಒಂದು- ‘ಉತ್ತರ’ವೆಂದು ದ್ರವಿಡಿಯನ್ ಪಕ್ಷಗಳಿಂದ ಹಣೆಪಟ್ಟಿ ಹಚ್ಚಿಸಿಕೊಂಡ ಯಾವುದೇ ರಾಜಕೀಯ ಪಕ್ಷ ತಮಿಳುನಾಡಿನಲ್ಲಿ ಸ್ವಂತ ನೆಲೆಗಾಗಿ ಆಸೆ ಪಡುವಂತಿಲ್ಲ. ಎರಡು- ಲೋಕಸಭೆಯಲ್ಲಿ ದೊಡ್ಡ ಸಂಖ್ಯೆಯ 39 ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನ ಮತದಾರರು ಪ್ರತಿ ಲೋಕಸಭಾ ಚುನಾವಣೆಗಳಲ್ಲೂ ಡಿಎಂಕೆ ಅಥವಾ ಎಐಎಡಿಎಂಕೆ ಪಕ್ಷವನ್ನು ಇಡಿಯಾಗಿ ಬೆಂಬಲಿಸುತ್ತಾರೆ. ಈ ಎರಡೂ ವಾಸ್ತವಗಳನ್ನು ಗುರುತಿಸಿ ಅವುಗಳನ್ನು ತನ್ನ ಹಿತಕ್ಕೆ ಉಪಯೋಗಿಸಿಕೊಳ್ಳುವ ತಂತ್ರವನ್ನು ಮೊದಲು ಆರಂಭಿಸಿದ್ದು ಕಾಂಗ್ರೆಸ್. ಆದರೆ ಅದಕ್ಕಾಗಿ ಬೆಲೆಯನ್ನೂ ತೆರಬೇಕಾಗುತ್ತದೆ ಎಂದು ಮೊದಲಿಗೆ ಕಾಂಗ್ರೆಸ್ ಮತ್ತು ನಂತರ ಬಿಜೆಪಿ ಸಹ ಸ್ವಾನುಭವದಿಂದ ಅರಿತುಕೊಂಡವು. ಅದೊಂದು ರಾಜ್ಯಶಾಸ್ತ್ರ ಪಠ್ಯಪುಸ್ತಕದ ಭಾಗವಾಗಬಹುದಾದ ವಿಷಯ.
ತಮಿಳುನಾಡಿನ ರಾಜಕೀಯ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದ ರುಚಿ ಕಂಡದ್ದು ಮೊದಲಿಗೆ 1989ರಲ್ಲಿ, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದಾಗ. ಆ ವರ್ಷದ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ವಿ.ಪಿ. ಸಿಂಗ್ ನೇತೃತ್ವದ ಜನತಾ ದಳ ಸರ್ಕಾರ ರಚನೆಗೆ ಮುಂದಾದಾಗ ಅದಕ್ಕೆ ಅಗತ್ಯವಾಗಿ ಬೇಕಾದದ್ದು ಕಮ್ಯೂನಿಸ್ಟ್ ಪಕ್ಷಗಳು ಹಾಗೂ ಬಿಜೆಪಿಗಳೆರಡರ ಹೊರಗಿನ ಬೆಂಬಲದ ಜತೆ ಡಿಎಂಕೆಯ ಒಳಗಿನ ಬೆಂಬಲ. ಹಾಗೆ ಸಿಕ್ಕ ಅವಕಾಶವನ್ನು ಡಿಎಂಕೆ ಕಾವೇರಿ ಜಲವಿವಾದ ವಿಷಯದಲ್ಲಿ ಒಂದು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿತು.
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)