ಪದ ಕಟ್ಟುವಿಕೆಯನ್ನು ಕೆಲವರು ಕೌಟುಂಬಿಕ ಸಂಪರ್ಕಕ್ಕೆ ನೆಪವಾಗಿಸಿದರೆ, ಹೊಸಹೊಸ ಕನ್ನಡ ಪದಗಳ ಹುಡುಕಾಟವನ್ನು ವಾರವಿಡೀ ಬೌದ್ಧಿಕ ವ್ಯಾಯಾಮವೆಂದು ಪರಿಗಣಿಸುವವರೂ ಇದ್ದಾರೆ. ಚಂದದ ಕೈಬರಹದಲ್ಲಿ ಪದಗಳನ್ನು ಬರೆದು ಚತುರವಾಣಿಯಲ್ಲಿ (Smart Phone) ಚಿತ್ರ ತೆಗೆದು ಕಳುಹಿಸುವ ಹಿಗ್ಗು ಕೆಲವರದಾದರೆ, ಇದಕ್ಕೆಂದೇ ಮೊದಲ ಬಾರಿಗೆ ಕನ್ನಡ ಅಕ್ಷರಗಳನ್ನು ಕೀಲಿಸುವ ಸಂಭ್ರಮ ಇನ್ನು ಕೆಲವರದು. ಒಟ್ಟಿನಲ್ಲಿ ಶಬ್ದಸಸ್ಯಗಳ ಈ ಹೂದೋಟವು ಚಿಕ್ಕ ಪ್ರಮಾಣದಲ್ಲೇ ಆದರೂ ಕನ್ನಡದ ಘಮ ಬೀರಿ ಕನ್ನಡಿಗರ ಮನೆ-ಮನಗಳನ್ನು ಉಲ್ಲಸಿತಗೊಳಿಸುತ್ತಿರುವುದು ಹೌದು.
ಈ ಹೋಲಿಕೆಯನ್ನು ಕೊಟ್ಟಿದ್ದು ಕಳೆದಸಲ ಕೇಳಿದ್ದ Nursery ಪದ ಮತ್ತು ಬಂದಿರುವ ಪರ್ಯಾಯಗಳ ವಿಶ್ಲೇಷಣೆಗೆ ಪೀಠಿಕೆಯಾಗಿ. ಇಂಗ್ಲಿಷ್‌ನಲ್ಲಿ Nursery ಏಳೆಂಟು ಶತಮಾನಗಳಷ್ಟು ಹಿಂದಿನಿಂದಲೂ ಬಳಕೆಯಲ್ಲಿದೆ, ಮೂಲತಃ ‘ಶಿಶುಗಳಿಗೆ, ಚಿಕ್ಕ ಮಕ್ಕಳಿಗೆ ಮತ್ತು ಅವರನ್ನು ಪೋಷಿಸುವ ದಾದಿಯರಿಗೆಂದೇ ಗೊತ್ತುಮಾಡಿದ ಕೋಣೆ’ ಎಂಬರ್ಥದಲ್ಲಿ. ಫ್ರೆಂಚ್‌ನ nourrice ಮತ್ತು ಲ್ಯಾಟಿನ್‌ನ nutrire ಪದಗಳಲ್ಲಿದೆ ಇದರ ಬೇರು. ಪಾಲನೆ-ಪೋಷಣೆ ಎಲ್ಲಿ ನಡೆಯುತ್ತದೋ – place where anything is fostered – ಅದು ನರ್ಸರಿ. ಆದ್ದರಿಂದಲೇ nursing, nurse, nutrition ಮುಂತಾದುವೆಲ್ಲ ದಾಯಾದಿಗಳು. ಗಿಡಮರಗಳನ್ನು ಬೆಳೆಸುವುದಕ್ಕಾಗಿ ಚಿಕ್ಕ ಸಸಿಗಳ ಪೋಷಣೆ ನಡೆಯುವ ಸ್ಥಳವನ್ನೂ ನರ್ಸರಿ ಎಂದು ಕರೆಯುವುದು ಕ್ರಮೇಣ ರೂಢಿಯಾಯ್ತು.
ಈ ಅರ್ಥ/ಸಂದರ್ಭದ ನರ್ಸರಿಗೆ ಪರ್ಯಾಯ ಪದ ತಿಳಿಸುವಂತೆಯೇ ಓದುಗರನ್ನು ಕೇಳಿದ್ದಾಗಿತ್ತು. ಜಿ. ವೆಂಕಟಸುಬ್ಬಯ್ಯನವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿರುವ ಪದ ‘ಸಸಿತೋಟ’. ಅದನ್ನೇ ಸೂಚಿಸಿದ್ದಾರೆ ತೇಜಸ್ ಎಸ್, ಸುರೇಂದ್ರ ಪೈ, ಎನ್.ವಿ. ಶಂಕರ್, ಎನ್. ದತ್ತಾತ್ರೇಯ, ಗಂಗಾಧರ ಕಾಟೇನಹಳ್ಳಿ, ಮೃತ್ಯುಂಜಯ ಹಿರೇಮಠ, ಬೊ.ನಾ. ಕೃಷ್ಣಮೂರ್ತಿ, ವೇದಾ ವಿ. ಪುರೋಹಿತ, ಪ್ರಭುಪ್ರಸಾದ್ ನಡುತೋಟ, ಡಾ. ಎನ್.ಎಂ. ತುಳಪುಳೆ, ಮೀನಾಕ್ಷಿ ಟಕ್ಕಳಕಿ ಮುಂತಾದವರು. ಶಿಶುವಿಹಾರದಂತೆಯೇ ‘ಸಸಿವಿಹಾರ’ ಚೆನ್ನಾಗಿರುತ್ತದೆ ಎಂದಿದ್ದಾರೆ ಪಿ.ಜೆ. ರಾಘವೇಂದ್ರ, ಶ್ವೇತಾ ಜಿ.ಎಸ್, ನರಸಿಂಹ ಪ್ರಸಾದ್, ರಾಘವೇಂದ್ರ ಸಂಗಮ, ವಿ. ರಾಜಲಕ್ಷ್ಮಿ, ರೂಪಾ ಶಂಕರಮೂರ್ತಿ, ಸಮುದ್ಯತಾ ವೆಂಕಟರಾಮ್, ಡಾ. ಗುರುರಾಜ ಕಳ್ಳೀಹಾಳ, ವಿದ್ಯಾಶಂಕರ ಶರ್ಮ, ಅನ್ನಪೂರ್ಣ ಹೇಮಚಂದ್ರ, ರವಿ ವಿ. ಶಿವಮೊಗ್ಗ, ಯಮನಪ್ಪ ಕೊಟ್ನಿಕಲ್ ಮುಂತಾದವರು.
‘ಸಸಿಮಡಿ’ (ನಂದಾ ಕುಲಕರ್ಣಿ, ಬಾಳಾಜಿ ಮುಜುಮದಾರ, ಅಂಜನಾ ತುಮಕೂರು, guruಪ್ರಸಾದ್ ನಂಜಿಪುರ, ಶಾಂತಲಾ ರಾಜಗೋಪಾಲ್, ಡಾ. ದಯಾನಂದ ಭಟ್ಟ, ಗೋಪಿನಾಥ್ ಭರಮಸಾಗರ, ರಶ್ಮಿ ರಾಜೇಂದ್ರ, ವಿರೂಪಾಕ್ಷಪ್ಪ ಶಾಂತಗೇರಿ, ಗಿರೀಶ ಕೆ.ಎಸ್, ಪ್ರೇಮಾ ಮೊಣ್ಣಪ್ಪ, ಸುಜಯ ಬಿ.ಜಿ, ಸುಜಾತಾ ಕುರ್ಪಾಡ್ ಮತ್ತಿತರರು), ‘ಸಸಿಪಾತಿ’ (ರಾಮಚಂದ್ರ ಬಡಗಾಬೆಟ್ಟು, ರಂಗನಾಥ ಟಿ.ಕೆ, ಮೈಲೇಶಪ್ಪ ಮೋಟಳ್ಳಿ, ಶಕುಂತಲಾ ಹೊನ್ನಾಳಿ, ಅಂಜಲಿ ಬರ್ವೆ), ‘ಸಸಿಹಿತ್ತಲು’ (ಸಂಧ್ಯಾ ಅಡಿಗ, ಶಿವಶಂಕರ ಪ್ರಭು), ‘ಸಸಿಮನೆ’ (ವಿಶುಕುಮಾರ್, ನೇತ್ರಾ ವಿನೋದ), ‘ಸಸಿತೋಪು’ (ಮಾ.ಸು. ಮಂಜುನಾಥ್), ‘ಸಸಿಯಂಗಳ’ (ರಾಮಚಂದ್ರ ಬೆಂಗಳೂರು) ಮುಂತಾದುವೆಲ್ಲವೂ ಸೂಕ್ತವೆನಿಸುವ ಪದಗಳೇ.
ಸಂಸ್ಕೃತ ಛಾಯೆಯುಳ್ಳ ‘ಸಸ್ಯಧಾಮ’ (ಎನ್.ಆರ್. ರಮೇಶ್, ಸ್ವಾಮಿರಾಜಾಚಾರ್ ಚಿಕ್ಕೇರೂರು), ‘ಸಸ್ಯಾಗಾರ’ (ನರಸಿಂಹಯ್ಯ ಬಾಳಿಲ, ವಾಸುಕಿ ವೈದ್ಯ, ಗೀತಾ ಗುರುಸ್ವಾಮಿ, ಅನಂತಕೃಷ್ಣ ಶಿವಮೊಗ್ಗ, ಜಿ.ಕೆ. ಲಕ್ಷ್ಮೀನರಸಿಂಹಯ್ಯ), ‘ಸಸ್ಯಾಲಯ’ (ಸೀತಾರಾಮ ರಾವ್, ಗಿರೀಶ ಫಡ್ಕೆ, ರವೀಂದ್ರ ಪೂಜಾರ, ಸಿ.ಆರ್. ಮೋಹನಕುಮಾರ್), ‘ಸಸ್ಯಕಾಶಿ’ (ಆರ್.ವಿ. ಮೂರ್ತಿ, ಗುರುರಾಜ್ ಗಲಗಲಿ, ಟಿ.ಸಿ. ಸರಳಾಕುಮಾರಿ, ಷಡಕ್ಷರಮುನಿ ಸ್ವಾಮೀಜಿ, ಸತೀಶ ಕಬೇಕೋಡಿ) ಕೂಡ ಸೂಕ್ತವಾಗಿವೆ. ಹೆಚ್ಚು ಆಕರ್ಷಕ ಮತ್ತು ಅನನ್ಯವೆನಿಸಿದವು ‘ಕುಡಿಯಂಗಳ’ (ಡಾ. ರಾಜಕುಮಾರ್ ವಿ), ‘ನಾಟಿತೋಟ’ (ಮುತ್ತುರಾಜ್ ತುಳುನಾಡು), ಮತ್ತು ‘ಗಿಡಬಿಡಾರ’ (ಜಗದೀಶ ಚಂಪಕಾಪುರ). ಪಂಪಭಾರತದಲ್ಲಿ ಭೀಮಸೇನನು ‘ಎನ್ನ ನುಡಿ ಟಾಠಡಾಢಣ’ ಎಂದಿರುವಂತೆ ಮೂರ್ಧನ್ಯಾಕ್ಷರಗಳು (ಟ-ವರ್ಗದವು) ಇರುವ ಪದಗಳು ಯಾವಾಗಲೂ ಹೆಚ್ಚು ಶಕ್ತಿಶಾಲಿ!
ಕಳೆದಸಲ ಕೇಳಿದ್ದ Firebrand ಪದಕ್ಕೂ ವೈವಿಧ್ಯಮಯ ಪ್ರವೇಶಿಕೆಗಳು ಬಂದಿವೆ. ಬಹದ್ದೂರ್ ಗಂಡು ಚಿತ್ರಗೀತೆಯನ್ನು ನೆನಪಿಸುವ ‘ಬೆಂಕಿಚೆಂಡು’ ಬಹುಜನರ ಆಯ್ಕೆ. ಸೂಚಿಸಿರುವವರು ಮಹಾಬಲ ಹೆಗಡೆ, ಭಾಗ್ಯಶ್ರೀ ಕೆ.ಸಿ, ಶ್ಯಾಮರಾಜ ಉಡುಪ, ಸಜ್ಜನ್ ತಾಳಿಕೋಟೆ, ಸಾವಿತ್ರಿ ಬೇಡಕಿಹಾಳ, ಅರ್ಚನಾ ಹೆಬ್ಬಾರ್, ಪಿ. ವಾಣಿ ಮೈಸೂರು, ಗೀತಾ ಸಂಜೀವಮೂರ್ತಿ, ಬಿ.ಆರ್. ಪದ್ಮನಾಭನ್, ಶ್ರೀನಿವಾಸ ಆಚಾರ್, ನಾಗೇಶ ಫಾಟಕ್, ಪ್ರಭಾಕರ್ ರಾವ್, ಶೋಭಾ ಕುಮಾರಸ್ವಾಮಿ, ರಾಜೇಂದ್ರ ಕಳಸಣ್ಣವರ, ರೇಖಾ ಶ್ರೀಪತಿ, ಪ್ರಕಾಶ ತೇರಣಿ, ಅನಿತಾ ಕಿಶೋರ್, ರಾಮಚಂದ್ರ ಐ.ಎಂ, ನಿತ್ಯಾನಂದ ಬ್ರಹ್ಮಾವರ, ಎನ್. ಸುಬ್ರಾಯ ಭಟ್, ಕಂಪಲಾಪುರ ಎಸ್. ಮೂರ್ತಿ, ಕುಶಲ್ ಭಾರದ್ವಾಜ್, ರೇಖಾ ರಾಮಕೃಷ್ಣ, ಅಮರ್ ಬೆಂಗಳೂರು, ಎಂ.ಕೆ. ರಮೇಶ್, ಚಂದ್ರಕಾಂತ ಜೋಶಿ ಮುಂತಾದವರು. ಬೆಂಕಿಚೆಂಡು ಪದಶಃ ಸಮಾನವಾಗುವುದು ಇಂಗ್ಲಿಷ್‌ನ fireball ಪದಕ್ಕೆ, ಆದರೆ ಆಲಂಕಾರಿಕವಾಗಿ ಸೂಕ್ತವೆನಿಸುತ್ತದೆ. ಹಾಗೆ ನೋಡಿದರೆ ಇಂಗ್ಲಿಷ್‌ನಲ್ಲೂ ಮೂಲತಃ firebrand ಎನ್ನುತ್ತಿದ್ದದ್ದು ಉರಿಯುತ್ತಿರುವ ಕೊಳ್ಳಿಗೇ. ಆಮೇಲೆ ‘ಕಿಡಿ ಹಚ್ಚುವ ಉದ್ರೇಕಕಾರಿ ಮಾತು/ಚರ್ಯೆ ಉಳ್ಳ ವ್ಯಕ್ತಿ’ಯನ್ನು ಬಣ್ಣಿಸಲಿಕ್ಕೆ ಆಲಂಕಾರಿಕವಾಗಿ ಬಳಕೆಯಾಗುತ್ತಿದೆ.
ಬೇರೆ ಪರ್ಯಾಯ ಪದಗಳ ಪೈಕಿ ‘ಉರಿಯಾಳು’ (ಡಾ. ನಾಗರಾಜ ಮನ್ನೆ), ‘ಉರಿಮಾರಿ’ (ಡಾ. ಎಚ್.ಎಸ್. ಸುರೇಶ್), ‘ಕಿಡಿಕಾರಿ’ (ಅನಂತ ಭಾರದ್ವಾಜ್), ‘ಚಿನಕುರಳಿ’ (ಕೃಷ್ಣದಾಸ ತಂತ್ರಿ), ‘ಅಗ್ನಿಕಂಠ’ (ಡಾ. ಎಸ್.ಎಲ್.ಎನ್ ಸ್ವಾಮಿ) ಇವು ಅರ್ಥಪೂರ್ಣ ಮತ್ತು ಬಳಕೆಗೆ ಸುಲಭದವು. ‘ಬೆಂಕಿ ನವಾಬ’ ಎಂಬ ಪದ ಇದೇ ಅರ್ಥದಲ್ಲಿ ಬಳಕೆಯಲ್ಲಿದೆಯೆಂದು ತಿಳಿಸಿದ್ದಾರೆ ಎಂ.ಕೆ. ಬದರಿನಾಥ್ ಮತ್ತು ಕೆ.ಎಸ್. ಧನಂಜಯ. ‘ಕಿಚ್ಚ ಒಳ್ಳೆಯ ಸಂವಾದಿ ಶಬ್ದ. ಕಿಚ್ಚು ಇರುವವನು ಕಿಚ್ಚ. ಆ ಚಿತ್ರದ ನಾಯಕನೂ firebrand ಆಗಿರುವವನೇ. ಕಿಚ್ಚಿ ಅಥವಾ ಕಿಚ್ಚೆ ಎಂದು ಸ್ತ್ರೀಲಿಂಗದಲ್ಲೂ ಬಳಸಬಹುದೇನೋ’ ಎಂದಿದ್ದಾರೆ ಚೇತನ್ ಬೆಂಗಳೂರು.
ಕೊನೆಯದಾಗಿ Taunt ಕೂಡ ನೂರಾರು ಪ್ರವೇಶಿಕೆಗಳಲ್ಲಿ ಪರ್ಯಾಯ ಪದಗಳ ಬೇರೆಬೇರೆ ಸಾಧ್ಯತೆಗಳನ್ನು ತೋರಿಸಿದೆ. ಇಂಗ್ಲಿಷ್‌ಗೆ ಇದು ಫ್ರೆಂಚ್‌ನ tanter ಅಥವಾ ಲ್ಯಾಟಿನ್‌ನ temptare ಪದಗಳಿಂದ ಬಂದಿದ್ದೆನ್ನಲಾಗಿದೆ. ಕೆಣಕು, ಪ್ರಚೋದಿಸು, ವ್ಯಂಗ್ಯವಾಡು ಮುಂತಾದ ಅರ್ಥಗಳು. ಕ್ರಿಯಾಪದ ಮತ್ತು ನಾಮಪದವಾಗಿಯೂ ಬಳಕೆ. ಕನ್ನಡದಲ್ಲಾದರೆ ಕ್ರಿಯಾಪದವಾಗಿ ‘ಮೂದಲಿಸು’, ನಾಮಪದವಾಗಿ ‘ಮೂದಲಿಕೆ’ ಎಂದಾಗುತ್ತದೆ. ಗದಾಯುದ್ಧದಲ್ಲಿ ಭೀಮ-ದುರ್ಯೋಧನರ ಪರಸ್ಪರ ಮೂದಲಿಕೆಗಳನ್ನು ರನ್ನ ಸೊಗಸಾಗಿ ಚಿತ್ರಿಸಿದ್ದಾನೆ.
‘ಮೂದಲಿಸು’ ಪದ ಸೂಚಿಸಿದವರು ಭಾರತಿ ಆರ್. ಭಟ್, ವಿಶ್ವಜ್ಯೋತಿ ಶಿವಮೊಗ್ಗ, ಲಲಿತಾ ಬಾಳಿಹಳ್ಳಿಮಠ, ಕೆ.ಎನ್. ರೀನಾ, ಜಿ.ಎಚ್. ಸಂಕಪ್ಪ, ಭಾರತಿ ಪ್ರಕಾಶ್, ಯು. ಪರಮೇಶ್ವರ ಭಟ್, ವಿ. ವಿಜಯೇಂದ್ರ ರಾವ್, ಜಿ. ನಾರಾಯಣ ರಾವ್, ಶಶಿಕಲಾ ನರೇಂದ್ರನಾಥ್, ವಿಜಯಲಕ್ಷ್ಮಿ ಎಸ್, ಗೋಪಾಲಕೃಷ್ಣ ಹೆಮ್ಮಿಗೆ, ಯಶೋದಾ ಎಂ. ಗೋಪಿ, ಆನಂದರಾಮ ಮಡಿ, ಸೋನಲ್ ಪೈ, ನರೇಂದ್ರನಾಥ ಎಚ್.ಎಂ, ಮಿಸ್ಕಿನ್ ಕುಟುಂಬಸದಸ್ಯರು ಮುಂತಾದವರು. ‘ಹಂಗಿಸು’ (ಶಿವಕುಮಾರ ಸಿಂಗಟಗೆರೆ, ಕೆ.ಎ. ಭಟ್, ಶ್ರೀಧರ ಅವರಾದಿ, ಕಾಡೇಶ ವಿ.ಬಿ, ಉಮಾ ಪ್ರಭು, ವೀರೇಶ್ ವಾಲಿ ಮತ್ತಿತರರು) ಹಾಗೂ ‘ಅಣಕಿಸು’ (ಬಿ.ಆರ್. ಚಂದ್ರಮೌಳಿ, ಸುಮನಾ ಚಾರ್, ತ್ರಿವೇಣಿ ಬೆಂಗಳೂರು, ಶೋಭಾ ತಿಪಟೂರು) ಕೂಡ ಕ್ರಿಯಾಪದವಾಗಿ ಸೂಕ್ತವೇ.
ನಾಮಪದವಾಗಿ ‘ಅಪಹಾಸ್ಯ’ (ಶ್ರೀಕಾಂತ್ ಗೋಡಖಿಂಡಿ, ಯು.ಎನ್. ಸಂಗನಾಳಮಠ, ಗಂಗಾ ಹೆಗಡೆ, ರಚಿತಾ ಬೆಂಗಳೂರು, ಲಕ್ಷ್ಮಣ ಹೆಬ್ಬಳ್ಳಿ, ಭವಾನಿ ಜೋಶಿ, ಯಶವಂತ ಜೆವಳಿ, ನಂದಿನಿ ಹಾಸನ), ‘ಕುಹಕ’ (ಕಡ್ಡಿ ಕೊಟ್ರೇಶ, ಕುಸುಮ ಬೆಂಗಳೂರು, ಜಯಂತ್ ಗೌಡ, ಗಗನ ಶಿವಮೊಗ್ಗ, ಶೋಭಾ ಎಚ್.ಜಿ), ‘ಕಟಕಿ’ (ಜಯಲಕ್ಷ್ಮಿ ಅಡಿಗ, ಪದ್ಮಾ ಬದರಿನಾಥ್), ‘ಲೇವಡಿ’ (ರೂಪಕಲಾ ವಿದ್ಯಾರಣ್ಯಪುರ, ಮಮತಾ ಕುಂದಾಪುರ), ‘ಗೇಲಿ’ (ವಿಶ್ವನಾಥ ಪ್ರಭು, ಕೆ.ಟಿ. ಶ್ರೀನಾಥ್, ನಾಗಮಣಿ ಶಾಂಪುರ್, ಕಡೂರು ದೇವೇಂದ್ರ), ‘ಕೊಂಕುಮಾತು’ (ಅನಿಲ್ ಕುಸುಗಲ್, ಸರಿತಾ ಸಂಗಮ್, ಭಾನುಪ್ರಕಾಶ ಚಿಕ್ಕಬಳ್ಳಾಪುರ, ಎನ್.ಎಸ್. ಭುಜಂಗರಾವ್, ಎಂ.ಡಿ. ಶ್ರೀನಿವಾಸಮೂರ್ತಿ, ಶ್ರೀಶಕಿರಣ್ ಪ್ರಭು), ‘ಚುಚ್ಚುಮಾತು’ (ಶೈಲಾ ಬಾಲಕೃಷ್ಣ, ಸೀತಾ ವ್ಯಾಸಮುದ್ರಿ, ಸುಜನಾ ನಿಟ್ಟೂರು, ಸೌಭಾಗ್ಯ ಸುಬ್ರಹ್ಮಣ್ಯ, ಸಂಗಮೇಶ ನಾಡಗೌಡ್ರ, ಸುಬ್ರಹ್ಮಣ್ಯ ಎಸ್, ಸುರೇಶ್ ನಾಯಕ್, ನಳಿನಿ ಜಿ. ಭಟ್, ಶಂಭು ಇರಾಣಿ ಮುಂತಾದವರು) ಸೂಕ್ತವೆನಿಸುತ್ತವೆ. ಅನುಪ್ರಾಸದಿಂದಾಗಿ ‘ಮೊನೆಮಾತು’ (ಅನಂತರಾಜ ಮೇಲಾಂಟ) ಬಳಕೆಗೆ ಹೆಚ್ಚು ಅನುಕೂಲಕರವಾಗಿದೆ. ಕನ್ನಡದಲ್ಲೇ ಇಷ್ಟೆಲ್ಲ ಪದಸಂಪತ್ತು ಇದ್ದರೂ ನಾವು ಮಾತಿನಲ್ಲಿ, ಬರವಣಿಗೆಯಲ್ಲಿ ಇಂಗ್ಲಿಷ್ ಪದಗಳನ್ನೇ ಬಳಸುವುದು ಅನಿವಾರ್ಯವೇಕೋ ಗೊತ್ತಾಗುತ್ತಿಲ್ಲ!
ಈ ವಾರದ ಮೂರು ಪದಗಳು:
Purge / Flush / Surge: ಒಮ್ಮೆಲೇ ಜೋರಾಗಿ ನೀರನ್ನು ನುಗ್ಗಿಸಿ ಸ್ವಚ್ಛಮಾಡು ಎಂದು ಐದು ಪದಗಳಲ್ಲಿ ಹೇಳುವುದನ್ನು ಒಂದೆರಡು ಪದಗಳೊಳಗೆ ಹೇಳಲಾರೆವೇ?
Spelling: ಉಚ್ಚರಿಸಿದಂತೆಯೇ ಬರೆವ, ಬರೆದಂತೆಯೇ ಉಚ್ಚರಿಸುವ ಕನ್ನಡದಲ್ಲಿ ಸ್ಪೆಲ್ಲಿಂಗ್ ಅವಶ್ಯವಿಲ್ಲ, ಆದರೆ ಇಂಗ್ಲಿಷ್‌ನ ಸ್ಪೆಲ್ಲಿಂಗ್ ಕನ್ನಡದಲ್ಲೇನು?
Township: ಬಿಡದಿ ಟೌನ್‌ಶಿಪ್ ಯೋಜನೆ ಮತ್ತದರ ರಾಜಕೀಯವು ಸುದ್ದಿಯಲ್ಲಿವೆ, ಟೌನ್‌ಶಿಪ್‌ನಲ್ಲಿ ಬಿಟ್ಟೇನೆಂದರೂ ಬಿಡದೀ ಇಂಗ್ಲಿಷ್ ವ್ಯಾಮೋಹ?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)