ಮಳೆಗಾಲದಲ್ಲಿ ಮಾಡುವ ಈ ಸಣ್ಣ ತಪ್ಪು ನಿಮ್ಮ ಪ್ರಾಣ ಕಸಿಯಬಹುದು ಎಚ್ಚರ! ಕೇರಳದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ...Habit
- ಮಳೆ ಬಂತೆಂದು ಚಲಿಸುವ ಬೈಕ್‌ನಲ್ಲಿ ಕೊಡೆ ತೆರೆದರೆ ಕಾದಿದೆ ಗಂಡಾಂತರ
- ಪ್ಯಾರಾಚೂಟ್‌ನಂತೆ ಕೆಲಸ ಮಾಡಿ ಜೀವಕ್ಕೆ ಕಂಟಕವಾಗಲಿದೆ ಗಾಳಿಯ ಒತ್ತಡ
- ಬೈಕ್ ಹಿಂಬದಿ ಕುಳಿತು ಕೊಡೆ ಹಿಡಿಯುವ ಮುನ್ನ ಯೋಚಿಸಿ
- ಮಗನಿಗೆ ತಿಳಿಸದೆ ಬೈಕ್‌ನಲ್ಲಿ ಕೊಡೆ ಬಿಡಿಸಿದ ತಾಯಿ ರಸ್ತೆಗೆ ಬಿದ್ದು ಸಾವು
ಕೊಚ್ಚಿ: ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರ ಈ ಒಂದು ಹವ್ಯಾಸ ( Habit ) ಅಥವಾ ಸಣ್ಣ ನಿರ್ಲಕ್ಷ್ಯ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಕೇರಳದ ಕೊಚ್ಚಿಯಲ್ಲಿ ನಡೆದ ಈ ಘಟನೆಯೇ ತಾಜಾ ಸಾಕ್ಷಿಯಾಗಿದೆ.
ಬೈಕ್‌ನಲ್ಲಿ ಚಲಿಸುತ್ತಿದ್ದಾಗ ಮಳೆಗೆ ನೆನೆಯಬಾರದು ಎಂಬ ಕಾರಣಕ್ಕೆ ಕೊಡೆ (ಛತ್ರಿ) ಬಿಡಿಸಲು ಹೋದ ವೃದ್ಧೆಯೊಬ್ಬರು, ಗಾಳಿಯ ಒತ್ತಡಕ್ಕೆ ಸಿಲುಕಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಮಳೆಗಾಲದಲ್ಲಿ ಬೈಕ್ ಹಿಂಬದಿ ಕುಳಿತು ಕೊಡೆ ಹಿಡಿಯುವ ಮುನ್ನ ಪ್ರತಿಯೊಬ್ಬರೂ ನೂರು ಬಾರಿ ಯೋಚಿಸಬೇಕು ಎಂಬ ಗಂಭೀರ ಎಚ್ಚರಿಕೆಯ ಸಂದೇಶವನ್ನು ಈ ಭೀಕರ ಅಪಘಾತ ಇಡೀ ಸಮಾಜಕ್ಕೆ ನೀಡಿದೆ.
ಕೊಚ್ಚಿಯ ಎಳಮಕ್ಕರ ನಿವಾಸಿ ರತ್ನಂ (68) ಎಂಬುವವರೇ ಈ ದುರ್ಘಟನೆಗೆ ಬಲಿಯಾದ ದುರ್ದೈವಿ. ಇವರು ಜೂನ್ 28 ರಂದು ತಮ್ಮ ಮಗ ಸಂದೀಪ್ ಅವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪಚಲಂ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಯಾಣದ ಮಧ್ಯೆ ಇದ್ದಕ್ಕಿದ್ದಂತೆ ಮಳೆ ಮುನ್ಸೂಚನೆ ಸಿಕ್ಕಾಗ, ರತ್ನಂ ಅವರು ಬೈಕ್ ಚಲಾಯಿಸುತ್ತಿದ್ದ ಮಗನಿಗೆ ತಿಳಿಸದೆಯೇ ತಾವೇ ಸ್ವತಃ ಕೊಡೆಯನ್ನು ಬಿಡಿಸಲು ಯತ್ನಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಬೈಕ್‌ನಲ್ಲಿ ಕೊಡೆ ತೆರೆದ ತಕ್ಷಣ ಎದುರಾದ ಭಾರಿ ಗಾಳಿಯ ಒತ್ತಡಕ್ಕೆ ನಿಯಂತ್ರಣ ತಪ್ಪಿ ಅವರು ರಸ್ತೆಗೆ ಬಿದ್ದಿದ್ದಾರೆ. ತಲೆ ಮತ್ತು ಕೈಗೆ ಗಂಭೀರವಾಗಿ ಪೆಟ್ಟು ಬಿದ್ದು ಒಂಬತ್ತು ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ವಿಷಯವೇನೆಂದರೆ, ಇಂತಹ ಪ್ರಾಣಾಂತಿಕ ಅಪಘಾತಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ 2024 ರಲ್ಲಿ ತಿರುವನಂತಪುರಂನಲ್ಲಿ ಮಗಳೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ 50 ವರ್ಷದ ಮಹಿಳೆ ಇದೇ ರೀತಿ ಕೊಡೆ ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೂ ಮುನ್ನ 2022 ರಲ್ಲಿ ಮಲಪ್ಪುರಂನ ಎಡಪ್ಪಾಲ್ ಬಳಿ ಮತ್ತು 2019 ರಲ್ಲಿ ಕೋಝಿಕ್ಕೋಡ್‌ನ ವಡಾಕರಾದಲ್ಲಿಯೂ ಇಂತಹದ್ದೇ ಘೋರ ದುರಂತಗಳು ವರದಿಯಾಗಿದ್ದವು. ಮಳೆ ಬಂದಾಗ ಬೈಕ್ ನಿಲ್ಲಿಸದೆ, ಚಲಿಸುವ ವಾಹನದಲ್ಲೇ ಶಾರ್ಟ್‌ಕಟ್ ಹುಡುಕುವ ಪ್ರವೃತ್ತಿ ಎಷ್ಟು ಅಪಾಯಕಾರಿ ಎಂಬುದನ್ನು ಈ ಸರಣಿ ಸಾವುಗಳು ನೆನಪಿಸುತ್ತಿವೆ.
ದ್ವಿಚಕ್ರ ವಾಹನ ಸವಾರರಿಗೆ ಅತ್ಯಂತ ಮುಖ್ಯವಾದ ಎಚ್ಚರಿಕೆಗಳು
ಚಲಿಸುವ ಬೈಕ್‌ನಲ್ಲಿ ಕೊಡೆ ಬೇಡ: ಬೈಕ್ ವೇಗವಾಗಿ ಚಲಿಸುವಾಗ ಗಾಳಿಯ ವೇಗ ಮತ್ತು ಒತ್ತಡ ಜಾಸ್ತಿ ಇರುತ್ತದೆ. ಈ ವೇಳೆ ಕೊಡೆ ಬಿಡಿಸಿದರೆ ಅದು ಗಾಳಿಯ ಪ್ಯಾರಾಚೂಟ್‌ನಂತೆ ಕೆಲಸ ಮಾಡಿ, ಕುಳಿತವರನ್ನು ಹಿಂದಕ್ಕೆ ಜಗ್ಗುತ್ತದೆ ಅಥವಾ ವಾಹನ ಉರುಳುವಂತೆ ಮಾಡುತ್ತದೆ.
ಮಳೆ ಬಂದರೆ ಗಾಡಿ ನಿಲ್ಲಿಸಿ: ಪ್ರಯಾಣದ ಮಧ್ಯೆ ಮಳೆ ಬಂದರೆ ತಕ್ಷಣ ವಾಹನವನ್ನು ಸುರಕ್ಷಿತ ಜಾಗದಲ್ಲಿ ಪಾರ್ಕ್ ಮಾಡಿ, ರೈನ್‌ಕೋಟ್ ಧರಿಸಿ ಅಥವಾ ಮಳೆ ಕಡಿಮೆ ಆಗುವವರೆಗೂ ಆಶ್ರಯ ಪಡೆಯಿರಿ.
ಚಾಲಕನಿಗೆ ಮಾಹಿತಿ ಇರಲಿ: ಹಿಂಬದಿ ಕುಳಿತವರು ಯಾವುದೇ ಕಾರಣಕ್ಕೂ ಬೈಕ್ ರೈಡರ್ ಗಮನಕ್ಕೆ ತರದೆ ಇಂತಹ ಸಾಹಸಗಳಿಗೆ ಕೈಹಾಕಬೇಡಿ. ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯವೋ, ಮಳೆಗಾಲದಲ್ಲಿ ಕೊಡೆ ಬಳಸದೆ ರೈನ್‌ಕೋಟ್ ಧರಿಸುವುದು ಅಷ್ಟೇ ಸುರಕ್ಷಿತ. ನಿಮ್ಮ ಜೀವ ನಿಮ್ಮ ಕೈಯಲ್ಲಿದೆ, ಎಚ್ಚರ ತಪ್ಪಬೇಡಿ!
ಕೊಡೆ ಪ್ಯಾರಾಚೂಟ್ ರೀತಿ ಕೆಲಸ ಮಾಡುತ್ತಾ?
ಚಲಿಸುವ ದ್ವಿಚಕ್ರ ವಾಹನದ ಹಿಂಬದಿ ಕುಳಿತು ಕೊಡೆ ಬಿಡಿಸಿದಾಗ, ವೇಗವಾಗಿ ಬೀಸುವ ಗಾಳಿಯು ಕೊಡೆಯೊಳಗೆ ನುಗ್ಗಿ ಅದು ತಕ್ಷಣವೇ ಒಂದು ಪ್ಯಾರಾಚೂಟ್‌ನಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ವಾಹನದ ವೇಗ ಹೆಚ್ಚಾದಂತೆಲ್ಲಾ ಕೊಡೆಯ ಮೇಲಿನ ಗಾಳಿಯ ಈ ಭೀಕರ ಒತ್ತಡವೂ ತೀವ್ರಗೊಳ್ಳುತ್ತಾ ಹೋಗುತ್ತದೆ, ಇದನ್ನು ತಡೆಯುವ ಅಥವಾ ಹಿಡಿದಿಟ್ಟುಕೊಳ್ಳುವ ಶಕ್ತಿ ನಮ್ಮ ಕೈಗಳಿಗೆ ಇರುವುದಿಲ್ಲ. ಇದರ ಪರಿಣಾಮವಾಗಿ, ಕೇವಲ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಹಿಂಬದಿ ಕುಳಿತ ಪ್ರಯಾಣಿಕರು ಕೊಡೆಯೊಂದಿಗೆ ಅತ್ಯಂತ ಬಲವಾಗಿ ಹಿಂದಕ್ಕೆ ಜಗ್ಗಲ್ಪಟ್ಟು, ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿ ಬೀಳುತ್ತಾರೆ, (ಏಜೆನ್ಸೀಸ್).